Tuesday, July 1, 2014

ಸಂಕಟದಲ್ಲಿ ಸಂಪೇಕಟ್ಟೆ ಆಸ್ಪತ್ರೆ..... ವೈದ್ಯರಿದ್ದಾರೆ ಆದರೆ ಆಸ್ಪತ್ರೆಯಲ್ಲಲ್ಲ....!!!



ಇದು ನಕ್ಸಲ್ ಪೀಡಿತ ಪ್ರದೇಶದ ಆಸ್ಪತ್ರೆಯ ದುಸ್ಥಿತಿ


ಹೊಸನಗರ:ಇಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಇದೆ. ಆದರೆ ವೈದ್ಯಾಧಿಕಾರಿಗಳು ಮಾತ್ರ ಸಿಗುತ್ತಿಲ್ಲ. ಇರಬೇಕಾದ 7 ಹುದ್ದೆಗಳಲ್ಲಿ ಒಬ್ಬರು ಮಾತ್ರ ಕಾಯ೯ನಿವ೯ಹಿಸುತ್ತಿದ್ದಾರೆ. ನಕ್ಸಲ್ ಪೀಡಿತಪ್ರದೇಶದಲ್ಲಿ ಬರುವ ಈ ಆಸ್ಪತ್ರೆಯಲ್ಲಿ ಕಳೆದ ಬರೋಬ್ಬರಿ ಎರಡುವರೆ ವಷ೯ದಿಂದ ಇದೇ ಅವ್ಯವಸ್ಥೆ ಮನೆ ಮಾಡಿದ್ದರೂ ಕೂಡ ಅಧಿಕಾರಿಗಳು ಮಾತ್ರ ತಲೆಕೆಡಿಸಿಕೊಂಡಿಲ್ಲ.
ಇದು ತಾಲೂಕಿನ ಸಂಪೇಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ದುಸ್ಥಿತಿ. ಈವರೆಗೆ ಅಧಿಕಾರಿಗಳಿಗೆ ಕೊಟ್ಟ ಮನವಿಗೆ ಲೆಕ್ಕವಿಲ್ಲ ಅಲ್ಲದೆ ಐದಾರು ಬಾರಿ ಗ್ರಾಮಸ್ತರು ಪ್ರತಿಭಟನೆಯನ್ನು ಮಾಡಿದ್ದಾರೆ. ಆದರೆ ಪರಿಹಾರ ಮಾತ್ರ ಮರೀಚಿಕೆ.
ವೈದ್ಯರು ಎಲ್ಲಿ?
ಸಂಪೇಕಟ್ಟೆ ಆಸ್ಪತ್ರೆಗೆ ಸಕಾ೯ರದ ಲೆಕ್ಕದಲ್ಲಿ ವೈದ್ಯರು ಕಾಯ೯ನಿವ೯ಹಿಸುತ್ತಿದ್ದಾರೆ. ಹಾಗಂತ ವೈದ್ಯರ ನೇಮಕವಾಗಿರುವುದು ನಿಜ. ಆದರೆ ಆಸ್ಪತ್ರೆಗೆ ಬೇಟಿ ಕೊಡುವ ಯಾರಿಗೂ ವೈದ್ಯರು ಕಾಣಸಿಗುತ್ತಿಲ್ಲ. ಸದರಿ ವೈದ್ಯರು 2 ವಷ೯ದಿಂದೀಚೆ ಸಂಪೇಕಟ್ಟೆ ಕಾಯ೯ನಿವ೯ಹಿಸುತ್ತಿದ್ದಾರೆ. ಇವರು ಶಿವಮೊಗ್ಗದಿಂದ ಓಡಾಡಬೇಕು. ಅದರಲ್ಲೂ ಪ್ರಸ್ತುತ ಜೂನ್ ತಿಂಗಳಲ್ಲಿ ಇಲ್ಲಿಯವರೆ 9 ದಿನ ಕೆಲಸಕ್ಕೆ ಹಾಜರಾಗಿದ್ದಾರಂತೆ. ಎರಡು ವಷ೯ದಲ್ಲಿ ಹೆಚ್ಚೆಂದರೆ 50ರಿಂದ 60 ದಿನ ಆಸ್ಪತ್ರೆಗೆ ಬೇಟಿ ನೀಡಿರಬಹುದು ಎನ್ನುತ್ತಾರೆ ಸ್ಥಳೀಯರು.
ಆಸ್ಪತ್ರೆ ಕಟ್ಟಡದ ಮೇಲೆ ಬೆಳೆದ ಗಿಡ
5 ಸಾವಿರ ಜನಸಂಖ್ಯೆ:
ಸಂಪೇಕಟ್ಟೆ ಆಸ್ಪತ್ರೆ ವ್ಯಾಪ್ತಿಯಲ್ಲಿ ಸುಮಾರು 5 ಸಾವಿರಕ್ಕು ಹೆಚ್ಚು ಜನಸಂಖ್ಯೆ ಇದೆ. ಇವರೆಲ್ಲರಿಗೂ ಇದೇ ಆಸ್ಪತ್ರೆಯೇ ಏಕೈಕ ದಿಕ್ಕು. ಆದರೆ ಆಸ್ಪತ್ರೆಯಲ್ಲಿ ವೈದ್ಯರು ಸಿಗದೆ, ಔಷಧಿಯೂ ಸಿಗದೆ ದೂರದ ನಗರಕ್ಕೆ ಇಲ್ಲ ನಿಟ್ಟೂರಿಗೆ ಹೋಗಬೇಕಾದ ಸ್ಥಿತಿ ಎದುರಾಗಿದೆ. ಇನ್ನು ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿ, ಕಿರಿಯ ಪುರುಷ ಆರೋಗ್ಯ ಸಹಾಯಕ, ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಮತ್ತು ಗ್ರೂಪ್ ಡಿ ಸೇರಿದಂತೆ ಒಟ್ಟು 7 ಹುದ್ದೆಗಳು ತುಂಬಿರಬೇಕು ಆದರೆ ವೈದ್ಯರು ಬರುತ್ತಿಲ್ಲ. ಬಂದರೂ ರೋಗಿಗಳ ಕೈಗೆ ಸಿಗುತ್ತಿಲ್ಲ. ಬಿಟ್ಟರೆ ಒಬ್ಬರು ಮಾತ್ರ ಕಾಯ೯ನಿವ೯ಹಿಸುತ್ತಿದ್ದಾರೆ ಎಂದರೆ ಪರಿಸ್ಥಿತಿ ದೇವರಿಗೆ ಪ್ರೀತಿ ಎಂಬಂತಾಗಿದೆ.
ಸುತ್ತಮುತ್ತಲಿನ ಕುಗ್ರಾಮ, ಮಜರೆ ಹಳ್ಳಿಗಳಿಂದ ಆಸ್ಪತ್ರೆಗೆ ಬರುವ ರೋಗಿಗಳು ವೈದ್ಯರಿಲ್ಲದೆ ಚಿಕಿತ್ಸೆ ಪಡೆಯದಂತಾಗಿದೆ. ಮುಂದಿನ ಊರಿಗೆ ಹೋಗಲು ಹಣಕಾಸಿ ಕೊರತೆ. ವಾಪಾಸು ಹೋಗಲು ಅನಾರೋಗ್ಯದ ಸಂಕಟ. ಈ ಬಗ್ಗೆ ಜಿಲ್ಲಾ ಆರೋಗ್ಯ ಅಧಿಕಾರಿಗಳು ಮತ್ತು ತಾಲೂಕು ಅಧಿಕಾರಿಗಳಿಗೂ ಸಮಸ್ಯೆಯ ಅರಿವಿದೆ ಆದರೂ ಜಾಣಕುರುಡು ಪ್ರದಶಿ೯ಸುತ್ತಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಹಾಳಾಗುತ್ತಿರುವ ಔಷಧಿ:
ವೈದ್ಯರು ಆಗೊಮ್ಮೆ ಈಗೊಮ್ಮೆ ನೆಂಟರ ರೀತಿಯಲ್ಲಿ ಬಂದುಹೋಗುತ್ತಿರುವ ಕಾರಣ. ಆಸ್ಪತ್ರೆಗೆ ಬಂದ ಔಷಧಿಗಳು ಖಾಲಿಯಾಗದೆ ಹಾಳಾಗುತ್ತಿವೆ. ಅಲ್ಲದೆ ಆಸ್ಪತ್ರೆ ನಿವ೯ಹಣೆ ಕೂಡ ಕಾಣದೆ ಗಿಡಗಂಟಿಗಳು ಬೆಳೆದು ನಿಂತಿವೆ. ಕೇವಲ ಊರಿಗೊಂದು ಆಸ್ಪತ್ರೆ ಇದೆ ಎಂಬುದು ಬಿಟ್ಟರೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ ಎಂದು ಆರೋಪಿಸುತ್ತಾರೆ ಗ್ರಾಪಂ ಅಧ್ಯಕ್ಷೆ ರಮಾವತಿ.
ಆಸ್ಪತ್ರೆ ಸಿಬ್ಬಂದಿಯನ್ನು ವಿಚಾರಿಸುತ್ತಿರುವ ಗ್ರಾಪಂ ಸದಸ್ಯರು
ಜನರೇಟರ್ ನಾಪತ್ತೆ:
ನಾನು ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಅಧ್ಯಕ್ಷರಾಗಿದ್ದಾಗ ಆಸ್ಪತ್ರೆಗೆ ಜನರೇಟರ್ ಮತ್ತು ವಿವಿಧ ಸೌಲಭ್ಯ ಒದಗಿಸಲಾಗಿತ್ತು ಈಗ ಜನರೇಟರ್ ಕಾಣೆಯಾಗಿ ಈ ಬಗ್ಗೆ ಪ್ರಶ್ನಿಸಿದರೆ ಆಸ್ಪತ್ರೆಯಲ್ಲಿ ಸೂಕ್ತ ಉತ್ತರ ಸಿಗುತ್ತಿಲ್ಲ. ಆಸ್ಪತ್ರೆಯಿಂದ ಜನತೆಗೆ ಉಪಯೋಗ ಆಗುತ್ತಿಲ್ಲ. ಆದರೆ ಬಂದ ಅನುದಾನ ಮಾತ್ರ ಖಚಾ೯ಗುತ್ತಿದೆ ಇದು ಅಧಿಕಾರಿಗಳು ಮತ್ತು ಆಸ್ಪತ್ರೆ ಬಗ್ಗೆ ಅನುಮಾನ ಹುಟ್ಟಿಸುವಂತಾಗಿದೆ ಈ ಬಗ್ಗೆ ಅಧಿಕಾರಿಗಳು ಉತ್ತರಿಸಲಿ ಎಂದು ಸ್ವಾಮಿ ಆಗ್ರಹಿಸಿದ್ದಾರೆ.
ಆಸ್ಪತ್ರೆಯನ್ನು ಶಾಶ್ವತವಾಗಿ ಮುಚ್ಚಿ:
ಕೇವಲ ಸಕಾ೯ರದ ಲೆಕ್ಕದಲ್ಲಿ ಇಲ್ಲಿ ಆಸ್ಪತ್ರೆ ಇರುವ ಅವಶ್ಯಕತೆ ಇಲ್ಲ. ವೈದ್ಯರು ಪ್ರತಿದಿನ ಕಾಯ೯ನಿವ೯ಹಿಸಬೇಕು ಮತ್ತು ಆಸ್ಪತ್ರೆ ಸೌಲಭ್ಯ ಸಕಾಲಕ್ಕೆ ಲಭ್ಯವಾಗುವುದಾರೆ ಮಾತ್ರ ಇರಲಿ. ಇಲ್ಲವಾದರೆ ಶಾಶ್ವತವಾಗಿ ಮುಚ್ಚಲಿ. ನಕ್ಸಲ್ ಪೀಡಿತ ಪ್ರದೇಶದ ಅಗತ್ಯಕ್ಕು ಅಧಿಕಾರಿಗಳು ಸ್ಪಂದಿಸದಿದ್ದರೆ ಗ್ರಾಮಸ್ತರೇ ಸೇರಿ ಆಸ್ಪತ್ರೆಯನ್ನು ಮುಚ್ಚಬೇಕಾಗುತ್ತದೆ. ಅದಕ್ಕು ಮುನ್ನ ಆರೋಗ್ಯ ಇಲಾಖೆ ಅಧಿಕಾರಿಗಳು ಗಮನ ಹರಿಸಲಿ ಎಂದು ಗ್ರಾಪಂ ಉಪಾಧ್ಯಕ್ಷ ಮೋಹನಶೆಟ್ಟಿ ಎಚ್ಚರಿಸಿದ್ದಾರೆ.
(ಕನ್ನಡಪ್ರಭದಲ್ಲಿ ಪ್ರಕಟಗೊಂಡ ವರದಿ)

No comments:

Post a Comment