ಸುವರ್ಣ ಸಂಭ್ರಮದ ಯಶಸ್ಸು ನಿಮ್ಮದು
ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಪುಟ್ಟ ಗ್ರಾಮ ನೂಲಿಗ್ಗೇರಿ ಶಾಲೆ ಸುವರ್ಣ
ಸಂಭ್ರಮ ಆಚರಿಸಲು ಮುಂದಡಿ ಇಟ್ಟಾಗ.. ಪ್ರತಿ ಕಾರ್ಯಕ್ರಮದಂತೆ ಸರ್ಕಾರಿ ಕಾರ್ಯಕ್ರಮ
ಕೇವಲ ನಾಮಕಾವಾಸ್ತೆ ಎಂಬ ಉದ್ಘಾರ ಬಂದಿದ್ದು ಹೊಸತೇನು ಆಗಿರಲಿಲ್ಲ. ಆದರೆ ದಿಟ್ಟ
ಹೆಜ್ಜೆ.. ಹೊಸತನದ ಮೆರುಗು..ಸರ್ವರ ಸಹಕಾರ.. ಬಡವ ಬಲ್ಲಿದ ಎಂಬ ತಾರತಮ್ಯ ಕಂಡುಬರದ
ಶ್ರಮದಾನ.. ಗ್ರಾಪಂ, ಶಿಕ್ಷಣ ಇಲಾಖೆ, ಶಾಲಾಭಿವೃದ್ಧಿ ಸಮಿತಿ, ಹಳೆ ವಿದ್ಯಾರ್ಥಿಗಳ
ಸಂಘ, ಸ್ತ್ರೀ ಶಕ್ತಿ ಸ್ವಹಾಯ ಸಂಘಗಳು.. ಹೀಗೆ ಇಡೀ ಊರಿಗೆ ಊರೇ ಪಾಲ್ಗೊಂಡು ನೀಡಿದ
ತಮ್ಮದೆ ಕೊಡುಗೆ ಸಂಭ್ರಮದ ಯಶಸ್ಸಿಗೆ ಮುನ್ನುಡಿ ಬರೆಯಿತು. ಇದೆ ಮೊದಲಬಾರಿಗೆ
ವಿದ್ಯಾದೇವತೆ ಶಾರದಾಂಬೆಯ ರಾಜಬೀದಿಯ ಭವ್ಯ ಮೆರವಣಿಗೆ ಸಂಭ್ರಮ.. ಮೆರುಗು ನೀಡಿದ ಜನಪದ
ಕಲರವ.. ಎಲ್ಲ ಜನಪ್ರತಿನಿಧಿಗಳು ಒಂದಡೆ ಸೇರಿಸಿದ ಉದ್ಘಾಟನಾ ಸಂಭ್ರಮ..
ಸಂಗೀತಪ್ರೀಯರನ್ನು ಮೋಡಿ ಮಾಡಿದ ಶಶಿಕಾರಂತರ ಗಾನ ಸಂಭ್ರಮ.. ಸ್ಥಳೀಯ ಕಲಾವಿದ ಸೀತಾರಾಮ
ಆಚಾರ್ ತಂಡದ ಜನಪದ ಗೀತ ಸಂಭ್ರಮ.. ಶಾಲಾ ಮಕ್ಕಳ ವೈವಿಧ್ಯಮಯ ಸಾಂಸ್ಕೃತಿಕ ಸಂಭ್ರಮ..
ಅಂತರಾಷ್ಟ್ರೀಯ ಖ್ಯಾತಿಯ ಕುದ್ರೋಳಿ ಗಣೇಶ್ ವಿಸ್ಮಯ ಜಾದೂ ಸಂಭ್ರಮ.. ಜನರ ಮೋಡಿ ಮಾಡಿದ್ದು ಸುಳ್ಳಲ್ಲ.
ಇನ್ನು ಮರುದಿನದ ನಮ್ಮೂರು ರಾಜಶೇಖರ್ ಸಾರಥ್ಯದ ನಮ್ಮೂರು ಸಂಭ್ರಮ.. ವಿದ್ಯಾರ್ಥಿ
ಜೀವನದ ತಲ್ಲಣಗಳ ಗೋಷ್ಠಿ ಸಂಭ್ರಮ.. ವಿದುಷಿ ಅರುಂಧತಿ ತಂಡ ಪ್ರಸ್ತುತ ಪಡಿಸಿದ
ವೈವಿಧ್ಯಮಯ ನೃತ್ಯ ಸಂಭ್ರಮ.. ಅಕ್ಷರ ಕಲಿಸಿದ ಗುರುಗಳಿಗೆ ಗುರುವಂದನೆ ಸಂಭ್ರಮ..
ಸಂಭ್ರಮದ ಕೊಡುಗೆ ನೀಡಿದವರ ಸನ್ಮಾನ ಸಂಭ್ರಮ.. ಮೂರುಮುತ್ತು ಖ್ಯಾತಿ ತಂಡದ ನಾಟಕ
ಸಂಭ್ರಮ.. ಸಂಭ್ರಮಕ್ಕೆ ಮತ್ತಷ್ಟು ಮೆರಗು ನೀಡಿದ್ದು ಮಾತ್ರ ಸತ್ಯ. ಇನ್ನು ಇಡೀ ಸಂಭ್ರಮಕ್ಕೆ ಕಳಶಪ್ರಾಯ ಎಂಬಂತೆ ರುಚಿಕಟ್ಟಾದ ವನಬೋಜನದ ಸಂಭ್ರಮ ಮಾತ್ರ ಜನರ ಮನಸ್ಸನ್ನು ಬಹುಕಾಲ ಆವರಿಸುವುದು ಖಂಡಿತ..
ಸಂಭ್ರಮದ ಯಶಸ್ಸಿಗೆ ನಾನು ಎಂಬುದು ನೆಪ.. ನಾವು ಎಂಬುದೇ ದಿಟ.. ಮಕ್ಕಳಿಲ್ಲದೆ
ಸರ್ಕಾರಿ ಶಾಲೆ ಮುಚ್ಚುತ್ತಿರುವ ಇಂದಿನ ದಿನದಲ್ಲಿ ಸರ್ಕಾರಿ ಪುಟ್ಟ ಶಾಲೆಯೊಂದು ಸುವರ್ಣ
ಸಂಭ್ರಮದ ಯಶೋಗಾಥೆ ಬರೆದಿದ್ದು ಮಾತ್ರ ಮಾದರಿ.. ಅಷ್ಟೆ ಅಲ್ಲ ಹಬ್ಬದಲ್ಲು ಇಷ್ಟೊಂದು
ಸಡಗರ ಪಡದ ಸ್ಥಳೀಯರು ಹೊಸಬಟ್ಟೆ ತೊಟ್ಟು.. ಮನೆಯನ್ನು ತಳಿರು ತೋರಣದಿಂದ ಸಿಂಗರಿಸಿ..
ಶಾರದಾಂಬೆ ಸಾಗುವ ಹಾದಿಯಲ್ಲಿ ರಂಗೋಲಿಯ ಚಿತ್ತಾರ ಮೂಡಿಸಿ ಸಡಗರದಿಂದ ಪಾಲ್ಗೊಂಡಿದ್ದು
ಮಾತ್ರ ಸರ್ಕಾರಿ ಶಾಲೆಯ ಮೇಲೆ ಅವರಿಗಿರುವ ಕಾಳಜಿಯನ್ನು ಬಿಂಬಿಸುವಂತಾಯಿತು. ಸಂಭ್ರಮದ ಯಶಸ್ಸಿಗೆ ಕೈಜೊಡಿಸಿದ.. ಸಹಕರಿಸಿದ.. ಕೊಡುಗೆ ನೀಡಿದ ನಿಮಗೆಲ್ಲರಿಗು ಸಾಷ್ಟಾಂಗ ನಮಸ್ಕಾರಗಳು.... ರವಿ ಬಿದನೂರು