Friday, May 15, 2015

ಮಲೆನಾಡ ಸ್ವಾತಿ ಮುತ್ತು : ವಿದೇಶದಲ್ಲೂ ಮಿಂಚಿದ ಗ್ರಾಮೀಣ ಅಥ್ಲೆಟಿಕ್ ಪ್ರತಿಭೆ


ಗ್ರಾಮೀಣ ಭಾಗದ ಅಥ್ಲೆಟಿಕ್ ಪ್ರತಿಭೆ ಕಿರುಗುಳಿಗೆ ಸ್ವಾತಿ
   ಇತ್ತೀಚೆಗೆ  ಹರ್ಯಾಣದ  ರೋಹಟಕ್ನಲ್ಲಿ  ನಡೆದ  35 ನೇ  ರಾಷ್ಟ್ರೀಯ  ಅಥ್ಲೆಟಿಕ್ ಚಾಂಪಿಯನ್ಶಿಪ್ 2015  ರ  40 ವರ್ಷ  ವಯೋಮಿತಿಯ  ಕ್ರೀಡಾಕೂಟದಲ್ಲಿ   ಹ್ಯಾಮರ್ ಥ್ರೋ,  ಡಿಸ್ಕಸ್  ಥ್ರೋ,  ಷಾಟ್ಫುಟ್ ಎಸೆತದಲ್ಲಿ  ಪ್ರಥಮ ಸ್ಥಾನವನ್ನು , ಜಾವೆಲಿನ್ ಎಸೆತದಲ್ಲಿ  ತೃತೀಯ  ಸ್ಥಾನವನ್ನು  ಪಡೆದು  ನಮ್ಮ ರಾಜ್ಯಕ್ಕೆ  ಕೀರ್ತಿ ತಂದ  ಶ್ರೀಮತಿ  ಸ್ವಾತಿ ಕೆ. ಆರ್. ರವರು  ಹೊಸನಗರ ತಾಲ್ಲೂಕಿನ  ನಗರ ಹೋಬಳಿ  ಕಿರುಗುಳಿಗೆ ಗ್ರಾಮದವರು. ಎನ್ನಲು ಹೆಮ್ಮೆ ಎನಿಸುತ್ತದೆ.
ನಗರದ ಹೆಮ್ಮೆ:
ಮೂಲತಃ  ನಗರ  ಹೋಬಳಿ  ನಿಲ್ಸ್ ಕಲ್ ನವರಾದ ಇವರು  ಮುಳುಗಡೆಯ  ನಂತರ  ಹುಂಚದ ಹತ್ತಿರದ  ಹೊನ್ನೇಬೈಲ್ ನಲ್ಲಿ  ವಾಸವಾಗಿದ್ದು,  ಪ್ರಾಥಮಿಕ  ಶಿಕ್ಷಣವನ್ನು  ಬಿಲ್ಲೇಶ್ವರದಲ್ಲಿಯೂ ಪ್ರೌಢ ಶಿಕ್ಷಣವನ್ನು  ಹುಂಚದಲ್ಲೂ  ಪೂರೈಸಿದರು. ಬಾಲ್ಯದಿಂದಲೇ  ಆಟೋಟಗಳಲ್ಲಿ  ಆಸಕ್ತಿಯಿದ್ದ  ಇವರು  ಶಾಲಾ  ಕ್ರೀಡಾಕೂಟಗಳಲ್ಲಿ  ಪ್ರತಿ ವರ್ಷವೂ ಭಾಗವಹಿಸಿ,  ಜಿಲ್ಲಾ  ಮಟ್ಟ  ಹಾಗೂ  ರಾಜ್ಯ ಮಟ್ಟದವರೆಗೂ  ಹೋಗಿ  ಪದಕಗಳನ್ನು  ಪಡೆದಿರುತ್ತಾರೆ.  ಪ್ರೌಢ ಶಿಕ್ಷಣದಲ್ಲಿಯೇ  ವಿದ್ಯಾಭ್ಯಾಸವನ್ನು  ಮುಕ್ತಾಯ ಮಾಡಿದ  ಸ್ವಾತಿಯವರು  ನಂತರ ಊರಿನಲ್ಲಿಯೇ  ಗ್ರಾಮೀಣ ಹಾಗೂ  ದಸರಾ  ಕ್ರೀಡಾಕೂಟಗಳಲ್ಲಿ  ಭಾಗವಹಿಸಿ, ಪ್ರತಿ ವರ್ಷವೂ ಸ್ಟೇಟ್ ಲವೆಲ್  ಚಾಂಪಿಯನ್ ಶಿಪ್  ಆಗಿ ಹೊರಹೊಮ್ಮಿದ್ದರು.
1995 ರಲ್ಲಿ  ಕಿರುಗುಳಿಗೆಯ  ಕೆ. ಎಸ್. ರವಿಯವರನ್ನು  ವಿವಾಹವಾಗಿ ಸಾಂಸಾರಿಕ  ಜೀವನಕ್ಕೆ  ಆದ್ಯತೆ ನೀಡಿ, ಸುಮಾರು  17 ವರ್ಷಗಳ ಕಾಲ  ಆಟ ಆಡುವ  ಅವಕಾಶದಿಂದ  ದೂರವುಳಿದಿದ್ದರು. ಪತಿ  ಕೆ. ಎಸ್. ರವಿಯವರೂ ಕೂಡಾ  ಉತ್ತಮ  ಕ್ರೀಡಾ ಪಟುವಾಗಿದ್ದು , ನಿರಂತರ  ಪ್ರೋತ್ಸಾಹ  ಹಾಗೂ  ಒತ್ತಾಸೆಯ ಮೇರೆಗೆ  ಪುನಃ  ಗ್ರಾಮೀಣ ಹಾಗೂ ಇತರೆ  ಕ್ರೀಡಾಕೂಟಗಳಲ್ಲಿ  ಭಾಗವಹಿಸಿ, ಈಗ್ಗೆ  4  ವರ್ಷಗಳಿಂದ ಸತತವಾಗಿ ದಸರಾ  ಕ್ರೀಡಾಕೂಟದ ಸ್ಟೇಟ್ ಲೆವೆಲ್  ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ವಿದೇಶದಲ್ಲೂ ಸಾಧನೆ:
ಮಂಗಳೂರಿನಲ್ಲಿ  ರಾಷ್ಟ್ರಮಟ್ಟದಲ್ಲಿ  ನಡೆಸಿದ  30 ವರ್ಷ ಮೇಲ್ಪಟ್ಟ  ಮಹಿಳೆಯರ  ಮಾಸ್ಟರ್ಸ್  ಅಥ್ಲೆಟಿಕ್ಸ್ ನಲ್ಲಿ  ಭಾಗವಹಿಸಿ, ಶಾಟ್ ಫುಟ್, ಡಿಸ್ಕಸ್ ಥ್ರೋ, ಜಾವೆಲಿನ್ ಎಸೆತದಲ್ಲಿ  ಪ್ರಥಮ ಬಹುಮಾನ ಗಳಿಸಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾದರು.   ನಂತರ  ಕಳೆದ  ಅಕ್ಟೋಬರ್ನಲ್ಲಿ  ಶ್ರೀಲಂಕಾದಲ್ಲಿ  ನಡೆದ  ಇಂಟರ್ ನ್ಯಾಶನಲ್ ಮಾಸ್ಟರ್ಸ್ ಅಥ್ಲೆಟಿಕ್ಸ್  ಕ್ರೀಡಾಕೂಟದಲ್ಲಿ ನಮ್ಮ  ದೇಶದ  ಪ್ರತಿನಿಧಿಯಾಗಿ  ಭಾಗವಹಿಸಿ, ಶಾಟ್ ಪುಟ್ ಪ್ರಥಮ, ಡಿಸ್ಕಸ್ ಥ್ರೋ ದ್ವಿತೀಯ, ಜಾವೆಲಿನ್ ಎಸೆತದಲ್ಲಿ  ತೃತೀಯ ಸ್ಥಾನವನ್ನು  ಪಡೆದು  ದೇಶಕ್ಕೆ ಕೀರ್ತಿ  ತಂದಿರುತ್ತಾರೆ.  ಶಾಟ್ ಪುಟ್ ನಲ್ಲಿ  ಹಳೆಯ ದಾಖಲೆಯಾದ  7.70ಮೀ. ಇದ್ದುದನ್ನು  ಮುರಿದು  8.65ಮೀ. ಎಸೆದು ತಮ್ಮ  ಹೆಸರಿನಲ್ಲಿ ಹೊಸ ದಾಖಲೆ ಬರೆದು ಗಮನಸೆಳೆದಿದ್ದಾರೆ.
ಯಾವುದೇ  ವಿಶೇಷ  ತರಬೇತಿ  ಇಲ್ಲದೇ  ಸ್ವತಃ  ತಾವೇ  ಅಭ್ಯಾಸ  ಮಾಡಿ,  ತನ್ನ  ಸ್ವಂತ  ಪರಿಶ್ರಮ, ಗುರಿಯೆಡೆಗಿನ  ಲಕ್ಷ್ಯ  ಹಾಗೂ  ವಿಶೇಷವಾಗಿ  ಪತಿಯ  ಪ್ರೋತ್ಸಾಹ,  ಮಕ್ಕಳಲ್ಲಿರುವ  ಕ್ರೀಡಾ ಆಸಕ್ತಿ  ಇವುಗಳಿಂದಲೇ  ತನ್ನೊಳಗಿರುವ ಕ್ರೀಡಾ  ಪ್ರತಿಭೆಯನ್ನು  ಪ್ರದರ್ಶಿಸಿ,  ಗ್ರಾಮ ಮಟ್ಟದಿಂದ  ರಾಷ್ಟ್ರ ಮಟ್ಟದವರೆಗೂ  ಕೀರ್ತಿ ತಂದಿರುತ್ತಾರೆ.  ಸಂಸಾರ, ಮನೆ,  ಮಕ್ಕಳು, ಕೃಷಿ  ಚಟುವಟಿಕೆ ಇತ್ಯಾದಿಗಳನ್ನು  ನಿರ್ಲಕ್ಷಿಸದೇ, ಇವುಗಳಲ್ಲಿ  ತನ್ನನ್ನು ತಾನು ಸಮರ್ಪಿಸಿಕೊಂಡು ಜೊತೆಗೆ  ಸಾಧನೆಯನ್ನು  ಮಾಡಿದ  ಮೇರು  ವ್ಯಕ್ತಿತ್ವ  ಸ್ವಾತಿಯವರದು.
ಅಭಿನಂದನೆ:
ಇನ್ನು ಮುಂದೆಯೂ ಕ್ರೀಡಾ ಕ್ಷೇತ್ರದಲ್ಲಿ  ಒಳ್ಳೆಯ  ಅವಕಾಶಗಳು  ಸಿಗಲಿ ಹಾಗೂ  ಇನ್ನೂ  ಹೆಚ್ಚಿನ ಸಾಧನೆ ಮಾಡಲಿ  ಎಂದು  ಕನ್ನಡ ಸಾಹಿತ್ಯ ಪರಿಷತ್, ನಗರ ಹೋಬಳಿ ಘಟಕ,  ಪಂಚಮುಖಿ ಬ್ಯಾಡ್ಮಿಂಟನ್ ಕ್ಲಬ್, ನಗರ, ಸರ್ವಸಿದ್ಧಿ ಸ್ವಸಹಾಯ  ಸಂಘ, ಶ್ರೀ  ವಿಘ್ನೇಶ್ವರ ಸಾವಯವ ಸ್ವಸಹಾಯ ಸಂಘ, ಬ್ರಾಹ್ಮಣತರುವೆ ಹಾಗೂ  ಇತರ  ಸಂಘ ಸಂಸ್ಥೆಗಳು  ಅಭಿನಂದನೆ ಸಲ್ಲಿಸಿವೆ.
..............................................................
ಬರೆದವರು
ವಸುಧಾ ಡಾ.ಚೈತನ್ಯ
ಉಪನ್ಯಾಸಕರು
ಕೊಡಚಾದ್ರಿ ಕಾಲೇಜು ಹೊಸನಗರ
.............................................................

No comments:

Post a Comment