
ಪ್ರತಿದಿನ ಕಣ್ಣೀರಲ್ಲಿ ಕೈತೊಳೆಯುತ್ತಿರುವ ಬಡ ಕುಟುಂಬದ ದಶಕದ ಗೋಳು
ಖಾಯಿಲೆ ಚಿಕಿತ್ಸೆಗೆ ಬೇಕು ತಲಾ ರು.15 ಲಕ್ಷ. ವಾರ್ಷಿಕ ಚಿಕಿತ್ಸಾ ನಿರ್ವಹಣೆಗೆ ಬೇಕು ತಲಾ 1 ಲಕ್ಷ
ಪ್ರತಿ ಕುಟುಂಬದಲ್ಲು ಕೀರ್ತಿಗೊಬ್ಬ ಮಗ, ಆರತಿಗೊಬ್ಬಳು ಮಗಳು ಇದ್ದರೆ ಎಷ್ಟು ಚೆನ್ನ ಎಂಬುದು ಬಹುತೇಕರ ಬಯಕೆ. ಆದರೆ ಇಲ್ಲೊಂದು ಕುಟುಂಬದಲ್ಲಿ ಎರಡು ಮುದ್ದಾದ ಮಕ್ಕಳು. ಆದರೆ ಕ್ರೂರ ವಿಧಿಗೆ ಸಾಕ್ಷಿ ಎಂಬಂತೆ ಈ ಮಕ್ಕಳಿಗೆ ಲಕ್ಷ ಮಂದಿಗೆ ಒಬ್ಬರಿಗೆ ಕಾಣಿಸಿಕೊಳ್ಳಬಹುದಾದ ರೋಗ ಕಾಣಿಸಿಕೊಂಡು ಜೀವ ಹಿಂಡುತ್ತಿದೆ.
ಶಿವಮೊಗ್ಗ ಜಿಲ್ಲೆ ಹೊಸನಗರ ಪಟ್ಟಣಕ್ಕೆ ಸಮೀಪವಿರುವ ಗಂಗನಕೊಪ್ಪದಲ್ಲಿರುವ ಕೂಲಿ ಮಾಡಿ ಜೀವನ ಸಾಗಿಸುತ್ತಿರುವ ಕೃಷ್ಣ ಮತ್ತು ವನಿತಾ ಕುಟುಂಬದ ನರಕ ಸದೃಶ ಬದುಕಿನ ಯಾತನೆ ಇದು.
ಕೃಷ್ಣ ಮತ್ತು ವನಿತಾ ಮದುವೆಯಾಗಿ 14 ವರ್ಷ. ಮೊದಲು ಹುಟ್ಟಿದ ನಂದೀಶ್ ಗೆ ಈಗ 12ರ ಪ್ರಾಯ. ಆದರೆ ಬೆಳವಣಿಗೆ ಕಾಣದೆ ಈಗಲು ಮುದ್ದು ಮಗುವಿನಂತೆ ಕಾಣುತ್ತಾನೆ. ಮೊದಲೆರಡು ವರ್ಷ ಆಡಿ ಬೆಳದ ನಂದೀಶ್ 2 ವರ್ಷ ವಿರುವಾಗಿಲೆ ಮುಖ ಊದಿಕೊಳ್ಳುವುದು. ಕಾಲು ದಪ್ಪಗಾಗುವುದು ಕಂಡುಬಂದಿತು. ಅಲ್ಲಿಂದಲೇ ಆಸ್ಪತ್ರೆ ಅಲೆದಾಟ ಶುರುವಾಯ್ತು. ನಂತರ ಹುಟ್ಟಿದ ಮಗು ಕಾವ್ಯಾಗೆ 8 ವರ್ಷ ಪ್ರಾಯ. ಐದಾರು ವರ್ಷ ಉತ್ತಮ ಆರೋಗ್ಯ ಹೊಂದಿದ್ದಳು. ನಂತರ ಅಣ್ಣನ ಹಾಗೆ ರೋಗಬಾಧೆಗೆ ತುತ್ತಾಗಿದ್ದು ಬಡ ತಂದೆತಾಯಿಯ ಹೃದಯ ಬಡಿತವೇ ನಿಂತುಹೋದಂತಾಗಿದೆ.
ಆಸ್ಪತ್ರೆ ಅಲೆದಾಟ:
ಕಳೆದ ಹತ್ತು ವರ್ಷದಿಂದ ಸ್ಥಳೀಯ ಆಸ್ಪತ್ರೆಗಳು, ಹಳ್ಳಿ ಔಷಧಕ್ಕಾಗಿ ಅಲೆದಾಡಿದ್ದಕ್ಕೆ ಲೆಕ್ಕವಿಲ್ಲ. ಮಂಗಳೂರಿನ ವೆನ್ಲಾಕ್ ಆಸ್ಪತ್ರೆ ಸೇರಿದಂತೆ ಬಹುತೇಕ ಆಸ್ಪತ್ರೆಗೆ ಎಡತಾಕಿ ಮಕ್ಕಳ ರೋಗಮುಕ್ತಿಗೆ ಪರದಾಡಿದರು ಪ್ರಯೋಜನವಾಗಿಲ್ಲ. ಪ್ರತಿಸಲ ಆಸ್ಪತ್ರೆಗೆ ದಾಖಲಿಸಿದಾಗಲೂ ರು.50 ರಿಂದ 60 ಸಾವಿರ ಖಚರ್ು ಮಾಡಬೇಕು. ಒಂದು ಕಡೆ ಮಕ್ಕಳ ಹದಗೆಟ್ಟ ಆರೋಗ್ಯ. ಇನ್ನೊಂದಡೆ ಸಾವಿರ ರುಪಾಯಿನ್ನು ಒಟ್ಟುಗೂಡಿಸಲಾಗದ ಪರಿಸ್ಥಿತಿ. ಒಟ್ಟಾರೆ ಇಡೀ ಕುಟುಂಬವೇ ಸಂಪೂರ್ಣ ಬೆತ್ತಲಾಗಿದೆ.

ಮೊದನಲೆ ಮಗ ನಂದೀಶ್ ಹುಟ್ಟಿದಾಗ ಕಣ್ಣುಗಳ ದೃಷ್ಟಿ ಉತ್ತಮವಾಗಿತ್ತು. ಆದರೆ ರೋಗ ಬಾಧೆಯಿಂದಾಗಿ ತನ್ನ ಎರಡು ಕಣ್ಣುಗಳ ದೃಷ್ಟಿ ಕಳೆದುಕೊಂಡಿದ್ದಾನೆ. ಇದ್ದುದರಲ್ಲಿ ಚ್ಯೂಟಿಯಾಗಿರುವ ಕಾವ್ಯಾಳ ಒಂದು ಕಣ್ಣು ಈಗಾಗಲೇ ದೃಷ್ಟಿ ಕಳೆದುಕೊಂಡಿದೆ. ಮೊದಲು ಶಾಲೆಗೆ ಹೋಗಿ ಬರುತ್ತಿದ್ದ ಕಾವ್ಯಾಳಿಗೆ ಈಗ ಸಾಧ್ಯವಾಗುತ್ತಿಲ್ಲ. ಕೈಕಾಲು ಸ್ವಾಧೀನ ತಪ್ಪುತ್ತಿರುವ ಕಾರಣ ತಂದೆತಾಯಿ ಹೊತ್ತೆ ತಿರುಗಬೇಕು. ಕೆಲವು ಸಮಯ ಶಿಕ್ಷಕರೇ ಮನೆಗೆ ಬಂದು ಪಾಠ ಹೇಳುತ್ತಿದ್ದರು. ಅದು ಕೂಡ ಈಗ ಸಾಧ್ಯವಾಗುತ್ತಿಲ್ಲ. ಆರೋಗ್ಯ ಶಿಕ್ಷಣದಿಂದ ವಂಚಿತರಾಗುತ್ತಿರುವ ಮಕ್ಕಳನ್ನು ನೋಡುತ್ತ ತಂದೆತಾಯಿ ಬದುಕು ಕೂಡ ಮೂರಾಬಟ್ಟೆಯಾಗಿದೆ.
ಏನಿದು ಕಾಯಿಲೆ?
ಕಳೆದ ಫೆಬ್ರವರಿಯಲ್ಲಿ ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಿದ ಮೇಲೆ ಇದು ಕಲ್ಲುಮೂಳೆ ಕಾಯಿಲೆ ಎನ್ನಲಾದ ಆಸ್ಟಿಯೋಪೆಟ್ರೋಸಿಸ್ ಎಂದು ತಿಳಿದು ಬಂದಿದೆ. ವೈದ್ಯರೇ ಹೇಳುವಂತೆ ಬೋನ್ ಮ್ಯಾರೋ ಟ್ರಾನ್ಸ್ ಪ್ಲಾಂಟ್ ಮಾಡಲು ಎರಡು ಮಕ್ಕಳಿಂದ ತಲಾ 15 ಲಕ್ಷ ಒಟ್ಟು 30 ಲಕ್ಷ ರೂಪಾಯಿ ಖರ್ಚು ಮಾಡಬೇಕಾಗುತ್ತದೆ. ಅಲ್ಲದೆ ವಾರ್ಷಿಕ ಔಷಧಿ ಮತ್ತು ಚಿಕಿತ್ಸೆ ನಿರ್ವಹಣೆಗಾಗಿ ತಲಾ 1 ಲಕ್ಷ ರೂಪಾಯಿ ಬೇಕು. ಆದರೆ ಈ ವೆಚ್ಚದ ಮಾಹಿತಿ ಕಂಡು ಬಡಕುಟುಂಬಕ್ಕೆ ದಿಕ್ಕು ತೋಚದಂತಾಗಿದೆ.
ಕಡು ಬಡತನ:
ಗಂಗನಕೊಪ್ಪದ ನಿವಾಸಿ ಕೃಷ್ಣ ಹೇಳಿಕೇಳಿ ಕೂಲಿಗಾರ. ಬರುವ ಸಂಬಳಕ್ಕೆ ಹೊಟ್ಟೆತುಂಬ ಊಟಮಾಡಿ ಮಲಗುವುದೆ ದೊಡ್ಡ ಸಾಹಸ. ಆದರೆ ತನ್ನ ಎರಡು ಮಕ್ಕಳ ಖಾಯಿಲೆಗೆ ಈಗಾಗಲೇ ಕಂಡಕಂಡವರ ಕೈಕಾಲು ಹಿಡಿದು ಲಕ್ಷಾಂತರ ರುಪಾಯಿ ಖರ್ಚು ಮಾಡಿದ್ದಾರೆ. ಆದರೆ ಮಕ್ಕಳು ಮಾತ್ರ ಅದೇ ರೋಗ ಬಾಧೆಯಿಂದ ಬಳಲುತ್ತಿದ್ದಾರೆ. ಈಗ ಖಾಯಿಲೆ ಚಿಕಿತ್ಸೆಗೆ ಎರಡು ಮಕ್ಕಳಿಂದ 30 ಲಕ್ಷ ದುಡ್ಡು ಬೇಕು ಎಂದು ಕೇಳಿ ಗರಬಡಿದು ಕೂತಿದ್ದಾರೆ.
ಇನ್ನು ಮಕ್ಕಳ ಲಾಲನೆ ಪಾಲನೆಯಲ್ಲಿ ಕಾಲ ಕಳೆಯುತ್ತಿರುವ ತಾಯಿ ರೇವತಿ ಮಕ್ಕಳ ಬಗ್ಗೆ ಮಾತನಾಡುವ ಸ್ಥಿತಿಯಲ್ಲಿಲ್ಲ. ಏನು ಕೇಳಿದರು ಎದೆಬಡಿದುಕೊಂಡು ಅಳುವುದೆ ಅವರ ಉತ್ತರ. ತನ್ನೆರಡು ಮಕ್ಕಳ ಸ್ಥಿತಿ ನೋಡಿ ಏನು ಮಾಡಲಾಗದೆ ಕುಗ್ಗಿ ಹೋಗುತ್ತಿರುವ ಕುಟುಂಬ ಸಾಂತ್ವಾನ ಬೇಡುತ್ತಿದೆ. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಎಲ್ಲರ ಮೊರೆ ಹೋಗುವಂತಾಗಿದೆ ಆದರೆ ಇಲ್ಲಿಯವರೆಗೆ ಯಾವುದೆ ಪ್ರಯೋಜನವಿಲ್ಲ.

ಆಟ, ಊಟ, ಪಾಠ ಮಾಡಿಕೊಂಡು ಓಡಾಡಿಕೊಂಡು ಇರಬೇಕಾದ ಮಕ್ಕಳಿಬ್ಬರು ಭೀಕರ ಕಾಯಿಲೆಯಿಂದ ನಲುತ್ತಿರುವುದನ್ನು ನೋಡಿದರೆ ಎಂತವರ ಹೃದಯವು ಕರಗಲೇಬೇಕು. ನೆರವು ನೀಡುವವರು ನಂದೀಶ್ ಮತ್ತು ತಾಯಿ ಜಂಟಿ ಖಾತೆ ಇರುವ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಹೊಸನಗರ ಶಾಖೆ ಹಣ ಕಳುಹಿಸಬಹುದು. SBMY0040307- 64106579263 ಕ್ಕೆ ಜಮಾ ಮಾಡಬಹುದು. ಮಾಹಿತಿ ತಿಳಿಯಲು 9964439782
ಸಹಾಯ ಮಾಡುವ ಮನಸ್ಸಿದ್ದವರು ಮೊದಲು ಖಾತ್ರಿ ಮಾಡಿಕೊಳ್ಳಿ. ಬಡಕುಟುಂಬದ ದಶಕದ ಬವಣೆಗೆ ಸಹಕರಿಸಿ.
ಇವರೇನಂತಾರೆ:
ನಾವು ಪಾಪಿಗಳು
ಹತ್ತು ವರ್ಷದಿಂದ ಮಕ್ಕಳ ನೋವಿನ ಆಕ್ರಂದನ ಕೇಳಲು ಸಾಧ್ಯವಾಗುತ್ತಿಲ್ಲ. ಶಕ್ತಿಮೀರಿ ನಮ್ಮ ಪ್ರಯತ್ನ ಮಾಡಿದ್ದೇವೆ. ಇನ್ನು ನಮ್ಮಿಂದ ಚಿಕಿತ್ಸೆ ನೀಡುವುದು ಸಾಧ್ಯವಿಲ್ಲ. ನಾವು ಪಾಪಿಗಳು
ಕೃಷ್ಣ ದಂಪತಿಗಳು
ರೋಗ ಪೀಡಿತ ಮಕ್ಕಳ ತಂದೆ.
ಸರ್ಕಾರ ಗಮನ ಹರಿಸಲಿ
ಕಳೆದ ಹತ್ತು ವರ್ಷದಿಂದ ಈ ಕುಟುಂಬವನ್ನ ನೋಡುತ್ತಾ ಬಂದಿದ್ದೇನೆ. ಮಕ್ಕಳ ಅನಾರೋಗ್ಯ ಕುಟುಂಬದ ನೆಮ್ಮದಿಯನ್ನೆ ಹಾಳು ಮಾಡಿದೆ. ಸಾಲ ಸೋಲ ಮಾಡಿ ಬೀದಿಗೆ ಬಂದಿದ್ದಾರೆ. ಹೆಚ್ಚಿನ ಚಿಕಿತ್ಸೆಗೆ ಸರ್ಕಾರ ತುರ್ತು ಸ್ಪಂದಿಸುವ ಅಗತ್ಯವಿದೆ.
ಉಮೇಶ್
ಗ್ರಾಪಂ ಸದಸ್ಯರು ಗಂಗನಕೊಪ್ಪ
9591754602
ಲಕ್ಷಕೊಬ್ಬರಿಗೆ ಕಾಯಿಲೆ
ಕಲ್ಲು ಮೂಳೆ ಕಾಯಿಲೆ ಲಕ್ಷಂತಾರ ಮಂದಿಯಲ್ಲಿ ಒಬ್ಬರಿಗೆ ಬರುತ್ತದೆ. ಇದು ತುಂಬಾ ಅಪರೂಪ. ಅಲ್ಲದೆ ತಕ್ಕಮಟ್ಟಿಗೆ ವಾಸಿ ಮಾಡಬೇಕೆಂದರು ದುಬಾರಿ ವೆಚ್ಚ ಮಾಡಬೇಕು. ಬಡಕುಟುಂಬಕ್ಕೆ ಈ ಕಾಯಿಲೆ ಬಂದಿರುವುದು ವಿಧಿಯ ಅಟ್ಟಹಾಸ ಎನ್ನಬೇಕು.
ಡಾ.ಪ್ರವೀಣ್ ಹೊಸನಗರ
9448571695
Great post and success for you..
ReplyDeleteKontraktor Pameran
Jasa Pembuatan Booth Pameran
Kontraktor Booth Pameran
Jasa Pembuatan Booth