Saturday, May 17, 2014

ಅಗಲಿದ ನಮ್ಮೂರ ಚೇತನ ಸಿ.ರಾಮಚಂದ್ರರಾವ್ ರವರಿಗೆ 'ಸಾರ್ವಜನಿಕ ನುಡಿ ನಮನ'


ಬಿದನೂರು: 2014 ಮೇ 11ನೇ ಭಾನುವಾರ ನಮ್ಮೂರ ಪಾಲಿಗೆ ದುರಂತ ದಿನ. ಸಂಕಟ ಬಂದಾಗ ವೆಂಕಟರಮಣ ಎನ್ನುವಂತೆ ಬಡವ ಬಲ್ಲಿದ, ದೊಡ್ಡವರು ಸಣ್ಣವರು, ಅಷ್ಟೆ ಏಕೆ ಜಾತಿ ಮತ ತಾರತಮ್ಯವಿಲ್ಲದೆ ಸಹಾಯ ಹಸ್ತ ಚಾಚಿ ಬಂದವರಿಗೆ ನೈತಿಕ ಶಕ್ತಿ ಜೊತೆ ಆರ್ಥಿಕ ಶಕ್ತಿ ನೀಡಿ ಅವರ ಕಣ್ಣೀರು ಒರೆಸುತ್ತಿದ್ದ ಮಹಾಚೇತನ ಅಂತ್ಯ ಕಂಡ ದಿನ ಅದು.
ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ರೊಂದಿಗೆ ರಾಮಯ್ಯ
 ಎರಡು ವರ್ಷದ ಹಿಂದೆ ಬೀಕರ ಅತಿವೃಷ್ಠಿಗೆ ತುತ್ತಾದಗಲೂ ಜನ ಇಷ್ಟೊಂದು ಬೇಸರಗೊಂಡಿರಲಿಲ್ಲ. ಕಣ್ಣೀರು ಹರಿಸಿರಲಿಲ್ಲ. ಆದರೆ ಎಪಿಎಂಸಿ ಸದಸ್ಯ ಸಿ.ರಾಮಚಂದ್ರರಾವ್, ಎಲ್ಲರ ಪ್ರೀತಿಯ ರಾಮಯ್ಯ ಇನ್ನಿಲ್ಲ ಎಂಬ ಕೆಟ್ಟ ಸುದ್ದಿ ಬರಸಿಡಿಲಿನಂತೆ ಎರಗುತ್ತಿದ್ದಂತೆ ನಿಂತಲ್ಲೆ ಆತ್ಮಸ್ಥೈರ್ಯ ಕುಸಿದು ಬಿದ್ದ ಜನರಿಗೆ ಲೆಕ್ಕವಿಲ್ಲ. ನಗರದ ಆಶಾಗೋಪುರವೇ ಕಳಚಿತು ಎಂದು ಉದ್ಘರಿಸಿ ಆತಂಕದ ಕಂದಕಕ್ಕೆ ಬಿದ್ದದ್ದು ಅದೆಷ್ಟೋ ಜನ.
ಹಿರಿಯ ಸಹೋದರ ಕೃಷ್ಣ ಕಾಮತ್ ಜೊತೆ
ಯಾರದರೂ ಸತ್ತರೆ ಅಳುವುದಕ್ಕೂ ಮನೆಯಲ್ಲಿ ಜನವಿಲ್ಲ ಎಂಬಷ್ಟು ಯಾಂತ್ರಿಕ ಬದುಕಿಗೆ ಒಗ್ಗಿಕೊಂಡ ಇಂತಹ ಸಂದರ್ಭದಲ್ಲಿ ಸಣ್ಣಮಕ್ಕಳಿಂದ ಹಿಡಿದು ವಯೋವೃದ್ಧರ ವರಗೆ, ಎಲ್ಲಾ ವರ್ಗದ ಜನತೆ ರಾಮಯ್ಯರ ಅಂತಿಮ ದರ್ಶನ ಪಡೆಯಲು ಸಾಗರೋಪಾದಿಯಲ್ಲಿ ಬಂದು ಕಣ್ಣೀರಿಡುತ್ತಿದ್ದ ದೃಶ್ಯ ರಾಮಯ್ಯ ವ್ಯಕ್ತಿತ್ವ ಏನು ನಮ್ಮೂರಿಗೆ ಎಷ್ಟು ಅಗತ್ಯವಾಗಿದ್ದರು ಎಂಬುದನ್ನು ಸಾರಿ ಸಾರಿ ಹೇಳುತ್ತಿತ್ತು.
ಎಪಿಎಂಸಿ ಸದಸ್ಯರಾಗಿ, ಜಿಲ್ಲಾ ಕಾಂಗ್ರೆಸ್ ಸಂಘಟನಾ ಕಾರ್ಯದರ್ಶಿಯಾಗಿ, ಬಿದನೂರು ಸಾಂಸ್ಕೃತಿಕ ವೇದಿಕೆ ಅಧ್ಯಕ್ಷರಾಗಿ, ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಅಧ್ಯಕ್ಷರಾಗಿ, ಮಾರಿಕಾಂಬ ದೇವಸ್ಥಾನ ಸಮಿತಿಯ ಕೋಶಾಧ್ಯಕ್ಷರಾಗಿ ಮತ್ತು ಹಲವು ಸಂಘಟನೆಗಳಲ್ಲಿ ಸಕ್ರೀಯವಾಗಿ ತೊಡಗಿಕೊಂಡಿದ್ದ ಅವರಿಗೆ ತಮ್ಮ ಬದ್ಧತೆ ಎಷ್ಟಿತ್ತು ಎಂದರೆ ಆಯಾಯ ಸಂಸ್ಥೆಗಳ ಬೆಳವಣಿಗೆ ಮತ್ತು ಕಾರ್ಯವೈಖರಿಯೇ ಸಾಕ್ಷಿ. ಖ್ಯಾತ ಯಕ್ಷಗಾನ ಕಲಾವಿದ ನಗರ ಜಗನ್ನಾಥ ಶೆಟ್ಟಿಯವರ ಸಂಸ್ಮರಣೆಯಾಗಿ ಆಂಬುಲೆನ್ಸ್ ತರಬೇಕು ಎಂಬ ಅವರ ಆಶಯ ಇಂದು ಈಡೇರುವ ಹಂತದಲ್ಲಿದೆ. ಆದರೆ ಈ ಹೊತ್ತಿನಲ್ಲಿ ಅವರೇ ನಮ್ಮೊಂದಿಗಿಲ್ಲ ಎಂಬ ಕೊರತೆ ನಮ್ಮನ್ನು ಕಾಡುತ್ತಲೇ ಇದೆ.
ಕಾಗೋಡು ತಿಮ್ಮಪ್ಪ ಜೊತೆ
ಜಿಲ್ಲಾ ಉಸ್ತುವಾರಿ ಸಚಿವ ಕಿಮ್ಮನೆ ರತ್ನಾಕರ್ ಮತ್ತು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದ ಅವರು ಇದನ್ನು ಬಳಸಿಕೊಂಡು ತಮ್ಮದೇ ಕನಸಿನ ನಗರ ನಿರ್ಮಾಣದ ಆಶಯ ಹೊಂದಿದ್ದರು ಮಾತ್ರವಲ್ಲ ಹಂತಹಂತವಾಗಿ ಚಾಲನೆ ನೀಡಿದ್ದರು.
ಮಾಸ್ತಿಕಟ್ಟೆ ಟೀಂನೊಂದಿಗೆ ಬೆಂಗಳೂರು ಶಕ್ತಿಭವನದಲ್ಲಿ
ಇನ್ನು ಆರೋಗ್ಯ, ಶಿಕ್ಷಣ, ಉದ್ಯೋಗ ಸೇರಿದಂತೆ ಯಾವುದೇ ರೀತಿಯ ಸಹಾಯ ಕೇಳಿ ಬಂದವರಿಗೆ ಆಸರೆಯಾಗಿ ನಿಂತವರು ರಾಮಯ್ಯ. ಎಲ್ಲಾ ಕ್ಷೇತ್ರಗಳ ಬಗ್ಗೆ ಅಪಾರ ಜ್ಞಾನ ಹೊಂದಿದ್ದ ಅವರು ಯಾವುದೇ ಸಮಸ್ಯೆಗೂ ಪರಿಹಾರದ ದಾರಿ ಹುಡುಕುವಲ್ಲಿ ಯಶಸ್ವಿಯಾಗಿದ್ದ ಅವರು ಬಹುತೇಕರ ಪಾಲಿಗೆ ಆಪತ್ಪಾಂಧವ ಎನಿಸಿದ್ದರು.
ಉತ್ತಮರ ಒಡನಾಟ, ಅಧಿಕಾರ ಯಾವುದೇ ಇದ್ದರೂ ಸ್ವಂತಕ್ಕಾಗಿ ಯಾವತ್ತು ಬಳಸಿಕೊಳ್ಳದ ರಾಮಯ್ಯ  ಜನತೆಯ ಹಿತಚಿಂತನೆಯಲ್ಲೆ ತಮ್ಮನ್ನು ಸಮರ್ಪಿಸಿಕೊಂಡಿದ್ದು ಮಾತ್ರ ಸುಳ್ಳಲ್ಲ. ಹಾಗಾಗಿಯೇ ಇವರು ಯಾವ ಪಕ್ಷದಲ್ಲಿದ್ದರೂ ಎಲ್ಲರ ಪ್ರೀತಿ ಗೌರವ ಗಳಸಿದ್ದರು.
ಒಟ್ಟಿನಲ್ಲಿ ಇತಿಹಾಸದ ಪುಟದಲ್ಲಿ ಮತ್ತು ಜನತಂತ್ರ ವ್ಯವಸ್ಥೆಯಲ್ಲಿ ತ್ಯಾಗಕ್ಕಾಗಿ ಎಲ್ಲವನ್ನು ಕಳೆದುಕೊಂಡ ನಗರ ಹೋಬಳಿಯ ಪುನರುಜ್ಜೀವನದ ಆಶಯ ಹೊಂದಿದ್ದವರ ಪಾಲಿಗೆ ರಾಮಯ್ಯ ಭರವಸೆಯ ಆಶಾಕಿರಣವಾಗಿ ಹೊರಹೊಮ್ಮಿದ್ದರು.
ನಗರದ ಸುವರ್ಣ ಸಂಭ್ರಮದಲ್ಲಿ
ನಮ್ಮೂರಿಗಾಗಿ ಮತ್ತು ನಮ್ಮವರಿಗಾಗಿ ತನ್ನದೆ ಚಿಂತನೆ ಹರಿಸಿ, ಸಹಾಯ ನೀಡಿ, ಕಣ್ಣೀರು ಒರೆಸುವ ಕೆಲಸ ಮಾಡುತ್ತಿದ್ದ ರಾಮಯ್ಯ ಇಂದು ನಮ್ಮೊಂದಿಗಿಲ್ಲ ಎಂಬುದನ್ನು ಅರಗಿಸಿಕೊಳ್ಳುವುದು ಕಷ್ಟ. ರಾಮಯ್ಯ ದೈಹಿಕವಾಗಿ ನಮ್ಮ ಜೊತೆ ಇರದಿರಬಹುದು ಆದರೆ ಅವರ ಸೇವೆ, ಸಹಕಾರ, ಸಹಾಯ, ಸಾಮ್ಯತೆ ಎಲ್ಲವೂ ನಮ್ಮ ಮನೆಮನದಲ್ಲಿ ಗಟ್ಟಿಯಾಗಿದೆ. ಜನರಗಾಗಿ ಮಿಡಿಯುತ್ತಿದ್ದ ರಾಮಯ್ಯನವರ ಹೆಸರನ್ನು ಶಾಶ್ವತವಾಗಿಸುವ ಕೆಲಸವಾಗಬೇಕಿದೆ ಆದರೆ ಅದಕ್ಕೂ ಮುನ್ನ ಅಗಲಿದ ಮಹಾಚೇತನಕ್ಕೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಬೇಕಾಗಿದೆ.
ಅಮ್ಮ ಜಯಲಕ್ಷ್ಮಿರಾವ್, ಅಣ್ಣ ಅಜಯ್ ಪತ್ನಿ ರಾಧಿಕಾ ಜೊತೆ
ದಿನಾಂಕ ಮೇ.23 2014ರ ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ನಗರದ ಗುಜರಿಪೇಟೆ ಕಲಾಭವನದಲ್ಲಿ ಅಗಲಿದ ಚೇತನ ಸಿ.ರಾಮಚಂದ್ರರಾವ್ ನಮ್ಮ ರಾಮಯ್ಯರಿಗೆ ಸಾರ್ವಜನಿಕವಾಗಿ ನುಡಿನಮನ ಕಾರ್ಯಕ್ರಮ ಆಯೋಜಿಸಲಾಗಿದೆ. ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ, ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಮತ್ತು ಸ್ಥಳೀಯ ಮುಖಂಡರು ಉಪಸ್ಥಿತರಿರಲಿದ್ದು ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುವಂತೆ ನಗರ ಹೋಬಳಿಯ ಗ್ರಾಮಸ್ತರು ಕೋರಿದ್ದಾರೆ.
ಎಲ್ಲರೂ... ಬನ್ನಿ
ಅವರ ಸೇವೆಯನ್ನು ನೆನೆಯೋಣ
ಅವರಿಗೆ ಭಾವಪೂರ್ಣ ನಮನ ಸಲ್ಲಿಸೋಣ
ಆ ಮೂಲಕ ಅವರ ಕುಟುಂಬಕ್ಕೆ ಮತ್ತು ನಮ್ಮೆಲ್ಲರಿಗೂ ಅವರ ಅಗಲಿಕೆಯ ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ನೀಡಲು ದೇವರಲ್ಲಿ ಪಾರ್ಥಿಸೋಣ.

No comments:

Post a Comment