Monday, April 4, 2011

ನಗರಕ್ಕೆ ಹೋಗೋದು ಹೆಣ ಹೋರಲಿಕ್ಕಾ...?


ಶಿವಮೊಗ್ಗ ಜಿಲ್ಲೆ ಹೊಸನಗರ ದಿಂದ ಕೊಲ್ಲೂರಿಗೆ ಹೋಗುವ ಮಾರ್ಗದ ೧೬ ಕಿಮೀ ಅಂತರದಲ್ಲಿ ಕಾಣಬಹುದಾದ "ನಗರ"ವನ್ನು ಉಲ್ಲೀಖಿಸಿ ಆಡುವ ಮಾತಿದೆ. ಒಂತರಾ.. ಜೋಕ್ ಅನ್ನಿಸಿದರೂ ಈ ಪ್ರದೇಶದ ಐತಿಹಾಸಿಕ ಮಹತ್ವ.. ಗತಿಸಿದ ವೈಭವ.. ಪರೋಪಕಾರಕ್ಕಾಗಿ ದುರಂತ ಅಂತ್ಯ ಕಂಡ.. ಜನತಂತ್ರ ವ್ಯವಸ್ಥೆ ಕಾಲಿಟ್ಟ ಮರುಗಳಿಗೆಯಲ್ಲೇ ನಾಡಿನ ಬೆಳಕಿಗಾಗಿ ತನ್ನ ಸರ್ವಸ್ವವನ್ನೇ ತ್ಯಾಗ ಮಾಡಿ ತನ್ನನ್ನು ಬರಿದು ಮಾಡಿಕೊಂಡ... ಕೇವಲ ಹೆಸರಿಗಷ್ಟೆ ನಗರವಾಗಿ ಇಂತಹ ಅಣಕು ಮಾತುಗಳನ್ನು ಸಾಕ್ಷೀತ್ಕರಿಸುತ್ತಿದೆ.

ಕೆಳದಿ ಸಾಮ್ರಾಜ್ಯವನ್ನು ಉತ್ತುಂಗಕ್ಕೇರಿಸಿದ ಹೆಗ್ಗಳಿಕೆ ಹೊಂದಿ.. ೧೨೫ ವರ್ಷಗಳ ಕಾಲ ಹೆಮ್ಮೆಯ ರಾಜಧಾನಿಯಾಗಿ ಮೆರೆದ ಅಂದಿನ "ಬಿದನೂರು" ಇಂದಿನ "ನಗರ" ವಾಗಿ ಪ್ರಚಲಿತದಲ್ಲಿದೆ. ಆಶ್ರಯಕ್ಕಾಗಿ ಓಡೋಡಿ ಬಂದ ಶಿವಾಜಿ ಮಗ ರಾಜಾರಾಮನಿಗೆ.. ನಾನಿದ್ದೇನೆ ಎಂದು ತಬ್ಬಿಕೊಂಡು ಆಶ್ರಯ ನೀಡಿದ ಒಂದೇ.. ಒಂದು ಕಾರಣಕ್ಕಾಗಿ ಹೈದರಾಲಿ ಆಕ್ರಮಣಕ್ಕೆ ತುತ್ತಾದ ವೈಭವದ ಬಿದನೂರು ಸಂಪೂರ್ಣ ಧ್ವಂಸವಾಗಿ ಮಾಡಿದ ಪರೋಪಕಾರಕ್ಕಾಗಿ ದುರಂತ ಅಂತ್ಯ ಕಂಡಿದ್ದು ಈಗ ಇತಿಹಾಸ.

ಶಿಸ್ತಿನ ಶಿವಪ್ಪ ನಾಯಕನ ಶಿಸ್ತು.. ಕೆಳದಿ ಚನ್ನಮ್ಮನ ಶೌರ್ಯ.. ಹೀಗೆ ಕೆಳದಿ ಸಾಮ್ರಾಜ್ಯದ ಬಹುತೇಕ ಅರಸರು ರಾಜ ಗಾಂಭೀರ್ಯದಿಂದ ಆಡಳಿತ ನಡೆಸಿದ ಈ ಬಿದನೂರಲ್ಲಿ... ಅಂದು ೨ ಲಕ್ಷಕ್ಕೂ ಹೆಚ್ಚು ಜನಸಂಖ್ಯೆ.. ಮನೆ, ಗುಡಿ..ಗೋಪುರ ಸೇರಿದಂತೆ ೧ ಲಕ್ಷ ಕಟ್ಟಡ ಹೊಂದಿದ್ದು ಸಾಗರದಾಚೆಯು ಗಮನ ಸೆಳೆದಿತ್ತು. ಕೊನೆಗೂ ಇದರ ಅವನತಿ ಯಾಗಿದ್ದು ಪರೋಪಕಾರ ಎಂಬ ಉದಾತ್ತ ಧ್ಯೇಯದಿಂದಾಗಿ..

ಇಂದು...
ಹೈದರ್ ಆಕ್ರಮಣದ ನಂತರ ಹೈದರ್ ನಗರ ವಾಗಿ ನಾಮಕರಣ ಗೊಂಡ ಬಿದನೂರು ಪ್ರಸ್ತುತ ನಗರ ಎಂಬ ಹೆಸರಿನಲ್ಲಿ ಚಾಲ್ತಿಯಲ್ಲಿದೆ. ಗತವೈಭವ ದೊಂದಿಗೆ.. ಚಿದ್ರಗೊಂಡ ಬಿದನೂರು.. ಜನತಂತ್ರ ವ್ಯವಸ್ಥೆ ಬಂದ ಮೇಲೂ ತನ್ನ ಅತಿಕ್ರಮಣ.. ಆಕ್ರಮಣಕ್ಕೆ ಒಳಗಾಗುತ್ತಲೇ ಬಂದಿದೆ.
ನಗರ ಹೋಬಳಿ ಪ್ರಾಕೃತಿಕವಾಗಿ ಅತ್ಯಂತ ಸಮೃದ್ಧ ತಾಣ. ಅಪೂರ್ವ ವನ್ಯಜೀವಿಗಳನ್ನು ಸೆರಗಿನಲ್ಲಿ ಹೊದ್ದ ಈ ಪ್ರದೇಶದಲ್ಲಿ ಮಳೆ ಬಂತೆಂದರೆ ದಿನವೊಂದಕ್ಕೆ ೨೦ ರಿಂದ ೨೫ ಸೆಂಮೀ ಸುರಿಯುತ್ತದೆ. ಇದನ್ನು ಮನಗಂಡ ಸರ್ಕಾರದ ದೃಷ್ಠಿ ಇತ್ತ ಹರಿಯಿತು. ಅಭಿವೃದ್ಧಿಗಾಗಿ ಅಲ್ಲ.. ಬದಲಿಗೆ ನಾಡಿನ ಬೆಳಕಿಗಾಗಿ ಇಲ್ಲಿಯ ಪ್ರದೇಶದಲ್ಲಿ ನೀರು ನಿಲ್ಲಿಸಲು. ನಗರ ಹೋಬಳಿ ಒಂದರಲ್ಲೇ ಲಿಂಗನಮಕ್ಕಿ, ಮಾಣಿ, ಚಕ್ರಾ, ಸಾವೇಹಕ್ಲು ಡ್ಯಾಂಗಳು ನಿರ್ಮಾಣಗೊಂಡಿದ್ದು ಸುತ್ತಲೂ ಹಿನ್ನೀರು ತನ್ನ ಕಬಂಧಬಾಹುವನ್ನು ಚಾಚಿಕೊಂಡಿದೆ.
ಬೇರೆ ಅಭಿವೃದ್ಧಿಯಿಲ್ಲ. ಹೆಚ್ಚು ಮಳೆ ಹಾಗಾಗಿ ಫಲವತ್ತತೆ ಕೊಚ್ಚಿ ಹೋಗುವುದರಿಂದ ಇಲ್ಲಿಯ ಕೃಷಿಕು ತಮ್ಮ ಉಳುಮೆಯಲ್ಲಿ ಒಂದು ಬೆಳೆ ತೆಗೆದರೆ ಹೆಚ್ಚು.. ಇಳುವರಿಯೋ ತುಂಬಾ ಕಮ್ಮಿ. ಇನ್ನು ಅಣೇಕಟ್ಟಿಗಾಗಿ ತಮ್ಮ ಮನೆ, ಜಮೀನು, ಸರ್ವಸ್ವ ಕಳೆದು ಕೊಂಡ ಇಲ್ಲಿಯ ಜನತೆಗೆ ಸಮರ್ಪಕ ಪರಿಹಾರ ಇಂದಿಗು ಮರೀಚಿಕೆಯಾಗಿದೆ.
ಇನ್ನು ಇಲ್ಲಿಯ ಬೆಳವಣಿಗೆಗೆ ಇರುವ ಏಕೈಕ ಆಶಾಕಿರಣ ವೆಂದರೆ.. ಪ್ರವಾಸಿ ಸ್ಥಳಗಳ ಅಭಿವೃದ್ಧಿ ಪಡಿಸುವುದು. ಐತಿಹಾಸಿಕ ಕೋಟೆ, ದೇವಗಂಗೆ ಸಪ್ತಕೊಳಗಳು, ಬರೇಕಲ್ಲಿನ ಬತೇರಿ, ನೀಲಕಂಠೇಶ್ವರನ ದೇಗುಲ, ಅಪರೂಪದ ಪಂಚಮುಖಿ ವಿಗ್ರಹ, ಅರಸರ ಗದ್ದುಗೆಗಳು, ದಿಲ್ಲಿಬಾಗಿಲು, ಹೀಗೆ ಅತೀ ಮಹತ್ವದ ಸ್ಮಾರಕಗಳಿದ್ದು ಪ್ರವಾಸೋಧ್ಯಮದ ಅಭಿವೃದ್ಧಿಯ ಕನಸು ಇಲ್ಲಿಯ ಬಡಜನತೆಯದು.
ಒಟ್ಟಾರೆ ಇತಿಹಾಸದಲ್ಲಿ.. ಜನತಂತ್ರ ವ್ಯವಸ್ಥೆಯಲ್ಲಿ.. ಬರಿದಾಗಿ ಹೋದ ಅಂದಿನ ಬಿದನೂರು... ಇಂದಿನ ನಗರಕ್ಕೆ ಯಾರಾದರು ಏಕಾಗಿ ಬರಬೇಕು ನೀವೇ.. ಹೇಳಿ, ಹಾಗಾಗಿಯೇ "ನಗರಕ್ಕೆ ಹೋಗೋದು ಹೆಣ ಹೋರಲಿಕ್ಕಾ...?! ಎಂಬ ನಾಣ್ಣುಡಿ ಚಾಲ್ತಿಯಲ್ಲಿ ಇದು ಗತಿಸಿದ ವೈಭವವನ್ನು ನೆನಪಿಸುತ್ತದೆ. ಮಾತ್ರವಲ್ಲ ಶೋಷಣೆಗೊಳಗಾಗಿ ಎಲ್ಲವನ್ನು ಕಳಕೊಂಡಿದೆ ಎಂತಲೂ ಬಿಂಬಿಸುತ್ತದೆ.
ಹೇಗಿದೆ ಬಿದನೂರಿನ ದುರಂತ ಕತೆ....?!!!

7 comments:

 1. duranthada bagge besaravide.. propakara, thyagakke sikkida baluvali idena

  ReplyDelete
 2. ಹೌದು ಮೇಡಮ್... ದೀಪದ ಬುಡ ಕತ್ತಲೆ ಅಲ್ವಾ....

  ReplyDelete
 3. ಬಿದನೂರು ಕೋಟೆ ಗತ ಕಾಲದ ಇತಿಹಾಸವನ್ನ ತೆರೆದಿಡುತ್ತದೆ....ಕೋಟೆಯ ಒಳಹೊಕ್ಕಾಗ ಅಲ್ಲಿಯ ಅವಶೇಷಗಳನ್ನು ಕಂಡಾಗ ಅದೆಷ್ಟು ವೈಜ್ಞಾನಿಕ ಸಿದ್ದಾಂತದ ನೆಲೆಗಟ್ಟಲ್ಲಿ ಬದುಕಿದ್ದರು ಎಂಬುದು ಅರಿವಾಗುತ್ತದೆ. ಪರೋಪಕಾರ ,ತ್ಯಾಗ ಬಲಿದಾನಗಳ ಸಂಕೇತವಾಗಿ ಬಿದನೂರು ತನ್ನದೇ ಅಸ್ತಿತ್ವವನ್ನು ಉಳಿಸಿಕೊಂಡಿದೆ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ .....ಅಂದ ಹಾಗೆ ಒಳ್ಳೆಯ ಬ್ಲಾಗ್ ತೆರೆದಿದ್ದೀರಿ ...ಸಂತೋಷ.... ಹೀಗೇ ಬರೆಯುತ್ತಿರಿ .....ಬರವಣಿಗೆ ಮನುಷ್ಯ ನನ್ನು ಸೃಜನಶೀಲನನ್ನಾಗಿಸುತ್ತದೆ

  ReplyDelete
 4. ಇಬ್ಬನಿ......... ಧನ್ಯವಾದಗಳು.
  ಪರೋಪಕಾರ, ತ್ಯಾಗ, ಬಲಿದಾನದ ಮೂಲಕ ಬಿದನೂರು ಅಸ್ತಿತ್ವ ಉಳಿಸಿಕೊಂಡಿದೆ ಎಂಬ ನಿಮ್ಮ ಮಾತು ಸತ್ಯ. ಆದರೆ ಅದಕ್ಕೆ ಸಿಕ್ಕ ಬಳುವಳಿ ಏನು? ಅಸ್ತಿತ್ವವೊಂದೇ ಈ ಪ್ರದೇಶದ ಕ್ರಿಯಾಶೀಲತೆಗೆ ಕಾರಣವಾಗುವುದಿಲ್ಲ ಅಲ್ವಾ.. ಈ ನಿಟ್ಟಿನಲ್ಲಿ ಸರ್ಕಾರ ಚಿಂತಿಸಬೇಕಲ್ವಾ...?
  ಹೀಗೆ... ಬರೆಯುತ್ತೇನೆ ನಿಮ್ಮ ಸಹಕಾರ ಹೀಗೆ ಇರಲಿ ಎಂಬ ಆಶಯ ನನ್ನದು.

  ReplyDelete
 5. "ನಗರ ಕೋಟೆ" ಜೀವನದಲ್ಲಿ ಒಮ್ಮೆಯಾದರು ನೋಡಿರಿ!!!!!! .....ಅಂದ ಹಾಗೆ ಒಳ್ಳೆಯ ಬ್ಲಾಗ್ ತೆರೆದಿದ್ದೀರಿ ...ಸಂತೋಷ.... ಹೀಗೇ ಬರೆಯುತ್ತಿರಿ

  ReplyDelete
 6. ದೇವಗಂಗೆ ಸಪ್ತಕೊಳಗಳು, ಬರೇಕಲ್ಲಿನ ಬತೇರಿ, ನೀಲಕಂಠೇಶ್ವರನ ದೇಗುಲ, ಅಪರೂಪದ ಪಂಚಮುಖಿ ವಿಗ್ರಹ, ಅರಸರ ಗದ್ದುಗೆಗಳು, ದಿಲ್ಲಿಬಾಗಿಲು,
  Dayamadi,
  Ee stalagala maahiti Kodi ...

  ReplyDelete