Wednesday, September 19, 2018

ಅಂದಿನ ಸಾರ್ವಜನಿಕ ಗಣೇಶೋತ್ಸವದ ನೆನಪು ಹೊತ್ತು ತಂದ ಈ ಬಾರಿಯ "ನಮ್ ನಗರ"ದ "ಗಣೇಶೋತ್ಸವ"*


ಸುಮಾರು ಇಪ್ಪತೈದು..ಮೂವತ್ತು  ವರ್ಷಗಳ ಹಿಂದೆ ನಗರದಲ್ಲಿ ಗಣೇಶೋತ್ಸವದ ಸಂಭ್ರಮ ಎಂದರೇ ಎಲ್ಲರೂ ನಿರೀಕ್ಷೆ ಇಟ್ಟುಕೊಳ್ಳುತ್ತಿದ್ದ ಸಮಯವಂತೆ.. ನಗರ ಸೊಸೈಟಿಯ ಹಿಂದಿನ ಗೋಡನ್ ನಲ್ಲಿ ವಿಘ್ನವಿನಾಯಕನನ್ನು ಕುಳ್ಳಿರಿಸಿ.. ಹಾಡು..ಭಜನೆ.. ಸಾಂಸ್ಕೃತಿಕ ಕಾರ್ಯಕ್ರಮಗಳ ರಸದೌತಣದೊಂದಿಗೆ.. ಎಲ್ಲರ ಗಮನಸೆಳೆಯುವಂತೆ ಗಣೇಶೋತ್ಸವ ಆಚರಿಸಲಾಗುತ್ತಿತ್ತು.. ಆಗಿನ ಸಾರ್ವಜನಿಕ ಗಣೇಶೋತ್ಸವದ ಪ್ರಮುಖ ಆಕರ್ಷಣೆ ಎಂದರೆ.. ವಿನಾಯಕನ ವಿಸರ್ಜನಾ ಮೆರವಣಿಗೆ.. ಅಷ್ಟೇ ಅಲ್ಲಾ ಚಿಕ್ಕಪೇಟೆ ಸೇತುವೆ ಭಾಗದಲ್ಲಿ ತುಂಬಿನಿಂತ ಹಿನ್ನೀರಲ್ಲಿ ನಡೆಯುತ್ತಿದ್ದ ತೆಪ್ಪೋತ್ಸವ ಎಂತವರ ಗಮನವನ್ನು ಸೆಳೆಯುತ್ತಿತ್ತು.. ಹೇಳಿಕೇಳಿ ಅಂದಿನ ವಿನಾಯಕ ಮೂರ್ತಿ ಕೂಡ ಇಂದಿನ ಚೇತನ ಬಳಗದ ಗಣಪತಿಯಂತೆ ದೊಡ್ಡಗಾತ್ರದಲ್ಲೇ ನಿರ್ಮಾಣ ಮಾಡಲಾಗುತ್ತಿತ್ತು ..ನಗರದ ಗುಂಡಪ್ಪ ಮಾಸ್ಟರ್ ವಿಶೇಷ ಆಸಕ್ತಿಯೊಂದಿಗೆ ಪ್ರತಿವರ್ಷವೂ ವಿಭಿನ್ನ ಶೈಲಿಯಲ್ಲಿ ಗಣಪತಿಯನ್ನು ನಿರ್ಮಿಸುತ್ತಿದ್ದರು.


ಗಣಪತಿ ವಿಸರ್ಜನೆ ವೇಳೆ ಎರಡು ದೋಣಿಗಳನ್ನು ಜೋಡಿಸಿ ಅಲಂಕೃತಗೊಳಿಸಲಾಗುತ್ತಿತ್ತು.. ಮೆರವಣಿಗೆಯಲ್ಲಿ ಬಂದ ಸಾರ್ವಜನಿಕ ಗಣಪತಿಯನ್ನು ದೋಣಿಯ ಮೇಲೆ ಏರಿಸಿಕೊಂಡು ಹಿನ್ನೀರ ಸುತ್ತಲೂ ಪ್ರದಕ್ಷಿಣೆ ಹಾಕಲಾಗುತ್ತಿತ್ತು.. ಅಲ್ಲದೇ ನೀರಿನ ಮೇಲೆ ದೀಪಗಳನ್ನು ತೇಲಿ ಬಿಡುತ್ತಿದ್ದು ಅದನ್ನು ನೋಡೋದೆ ಚಂದವಾಗಿತ್ತು.. ನೂರಾರು ದೀಪಗಳ ನಡುವೆ ಗಣಪತಿಯನ್ನು ಹೊತ್ತು ಸಾಗೋ ಅಲಂಕೃತ ದೋಣಿಯ ನೋಟ ಕಣ್ಣುಕುಕ್ಕುವಂತಿತ್ತು.. ತೆಪ್ಪೋತ್ಸವದ ಬಳಿಕ ಮದ್ಯಹೊಳೆಯಲ್ಲಿ ಗಣಪತಿ ವಿಸರ್ಜನೆ ಮಾಡುವ ಮೂಲಕ ಆ ವರ್ಷದ ಗಣೇಶೋತ್ಸವಕ್ಕೆ ತೆರೆ ಬೀಳುತ್ತಿತ್ತು..
ಊರಿನಜನರೆಲ್ಲಾ ಒಟ್ಟಾಗಿ ಸೇರಿ ಅತ್ಯಂತ ಜಾಗರೂಕತೆಯಿಂದ ನಡೆಸಿಕೊಡುತ್ತಿದ್ದ ಈ ಗಣೇಶೋತ್ಸವ ಸಾಕಷ್ಟು ಪ್ರಸಿದ್ಧಿಯನ್ನು ಪಡೆದಿತ್ತಂತೆ..  ಅಂತ ಅಂದಿನ ಸಾರ್ವಜನಿಕ ಗಣೇಶೋತ್ಸವ ಕಣ್ತುಂಬಿಕೊಂಡ ಹಿರಿಯರು ಹೇಳುತ್ತಿದ್ದರೆ.... ಕೇಳೋಕೆ ತುಂಬ ಖುಶಿ ಆಗತ್ತೆ.. ಅಂದು ಇನ್ನೆಷ್ಟು ಸೊಗಸಾಗಿದ್ದರಬಹುದು ಅಲ್ವಾ..
ಇಂದಿನ ಹಿರಿಯರಲ್ಲಿ ಅಂದಿನ ಗಣೇಶೋತ್ಸವದ ನೆನಪು.. ಈ ವರ್ಷ ತರಿಸಿದೆಯಂತೆ.. ಅದಕ್ಕೆ ಕಾರಣ ನಗರದ ಚೇತನಾ ಬಳಗ..
ಹೆಸರಿಗೆ ತಕ್ಕಂತೆ ಎಲ್ಲರು ಉತ್ಸಾಹಿ ಯುವಕರೇ ತುಂಬಿರುವ. ಈ ಚೇತನ ಬಳಗ ಈವರ್ಷ ಒಂದಷ್ಟು ಸುದ್ದಿ ಮಾಡಿದೆ.. 1997 ರಲ್ಲಿ ಪ್ರಾರಂಭವಾದ ಈ ಗಣೇಶೋತ್ಸವ ಕಾರ್ಯಕ್ರಮ ಸತತ 21 ವರ್ಷಗಳಿಂದ ಆಚರಿಸಿಕೊಂಡು ಬಂದಿದ್ದಾರೆ. ಮೊದಲೆಲ್ಲ ಸಾದರಣವಾಗಿ ಇರುತ್ತಿದ್ದ ಈ ಗಣೇಶೋತ್ಸವ  ವರ್ಷ ಕಳೆದಂತೆ ವಿಭಿನ್ನ ವಾದ ಕಾರ್ಯಕ್ರಮಗಳನ್ನು ಕೊಟ್ಟು ನಗರದ ಜನತೆಯ ಮೆಚ್ಚುಗೆ ಕಾರಣವಾಗಿದೆ... ಅದರಲ್ಲೂ ಈ ವರ್ಷ ತುಂಬಾ ಅದ್ದೂರಿಯಾಗಿ ಗಣೇಶೋತ್ಸವ ಆಚರಿಸಿದ್ದು ಮಾತ್ರ ಗಮನಸೆಳೆಯುವಂತಿತ್ತು...  ಹಾಗೂ ಈ ಸಾರಿ ಜನರ ಆಕರ್ಷಣೆಯಾಗಿದ್ದು ಮಾತ್ರ ಕೊನೆ ದಿನದ ಗಣೇಶನ ವಿಸರ್ಜನೆ ಕಾರ್ಯಕ್ರಮ..  ನಗರದ ಇತಿಹಾಸದಲ್ಲೆ ಇದೇ ಮೊದಲು ದೂರದ ಮಂಗಳೂರಿನಿಂದ ಬಂದ ಕರಾವಳಿಯ ಆಯ್ದ ಕಲಾತಂಡಗಳಿಂದ ಚಂಡೆ, ನಾಸಿಕ್, ಬ್ಯಾಂಡ್, ಗೊಂಬೆ ಕುಣಿತ,  ಹುಲಿವೇಷಗಳೊಂದಿಗೆ .. ಅಬ್ಬರದ ಮೆರವಣಿಗೆ ನಗರ ಜನರನ್ನು ಮೂಕವಿಸ್ಮಿತರನ್ನಾಗಿ ಮಾಡಿದ್ದಂತು ನಿಜ.. ಅದರಲ್ಲೂ ಚಂಡೆವಾದನದೊಂದಿಗೆ ಸಮ್ಮಿಳಿತಗೊಂಡ ನೃತ್ಯವೈಭವವಂತೂ ಇಡೀ ನಗರವನ್ನೇ ತುಂಬಿಕೊಂಡುಬಿಟ್ಟಿದೆ.. ಅದರಲ್ಲೂ ನಮ್ಮೂರಿನ ಕಲಾವಿದ ಹರೀಶ್ ನರಹರಿರಾವ್ ನಿರ್ಮಿಸಿದ ಮೆರವಣಿಗೆಯ ಗಣಪತಿಯ ಮುಖಮಂಟಪ ಆಕರ್ಷಕವಾಗಿತ್ತು.. ಜನಮನ ರಂಜಿಸಿದ ಈಬಾರಿಯ ಗಣೇಶೋತ್ಸವ.. ಮುಂದುವರೆಯಲಿ.. ಮತ್ತಷ್ಟು ವಿಶೇಷತೆಯನ್ನು ಹೊತ್ತುತರಲಿ ಅಲ್ಲವೇ..!

ಚಿತ್ರ-ಬರಹ
ಕಾರ್ತಿಕ್ 'ನಮ್' ನಗರ

4 comments:

  1. 1997 ರಲ್ಲಿ ಮೊದಲ ವರ್ಷದ ಗಣೇಶೋತ್ಸವವನ್ನು ನೋಡಿದ್ದೆ ..ಶುಭವಾಗಲಿ! ..ಅಭಿನಂದನೆಗಳು ಚೇತನ ಬಳಗಕ್ಕೆ

    ReplyDelete
  2. This comment has been removed by the author.

    ReplyDelete
  3. 80ರ ದಶಕದಲ್ಲಿ ನಗರದ ಸಾರ್ವಜನಿಕ ಗಣೇಹ ಅಂದ್ರೆ ಸೊಸೈಟಿ ಗಣಪತಿಯ ಸಂಭ್ರಮ ಹೇಳಲು ನಾಲಿಗೆ ಸಾಲದು.ಅದರಲ್ಲೂ ವಿಸರ್ಜನೆ ರಾತ್ರಿ 2 ಗಂಟೆ ಆಗುತಿತ್ತು.ಚಿಕ್ಕಪೇಟೆ ಸರ್ಕಲ್ ನಲ್ಲಿ 12.30ಗೆ ತಲುಪುತಿತ್ತು...ಎಲ್ಲಾ ವಯೋಮಾನದವರು ಅನುಭವಿಸುತ್ತಿದ್ದ ಆನಂದ ಹೇಳತೀರದು...

    ReplyDelete
  4. ಚೇತನಬಳಗದ ಸ್ಥಾಪಕ ಸದಸ್ಯರಾದ ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ ಹಾಗೂ ನಮ್ಮಹಿರಿಯರು ಮಾಗ೯ದಶಿ೯ಗಳಾದ ಶ್ರೀ ದಿವಂಗತ ಗಿರಿಧರ್ ಶ್ಯಾನುಭಾಗ್ ರವರಿಗೆ ಗೌರವಪೂವ೯ಕ ನಮನಗಳು...

    ReplyDelete