![]() |
ಎನ್.ರವಿಕುಮಾರ್, ಟೆಲೆಕ್ಸ್ |
ಜೋರು ಧನಿಯ ಚೂಪಾದ ಮಾತಿನ ಕಷ್ಟ ಉಂಡ ಕಣ್ಣುಗಳ ಮಧುರ ಗೆಳೆಯನೀತ
'ಬಹಿಷ್ಕೃತ ಭಾರತ' ಪತ್ರಿಕೆ ಆರಂಭಿಸಿದಾಗ ಅಂಬೇಡ್ಕರ್ ಹೇಳಿದ ಮಾತು- 'ಪತ್ರಿಕೋದ್ಯಮ ದೇಶದ ನಾಲ್ಕನೆಯ ಅಂಗ. ಅದಕ್ಕಿರುವ ಪ್ರಬಲ ಶಕ್ತಿ ಶಾಸಕಾಂಗ, ನ್ಯಾಯಾಂಗ ಹಾಗೂ ಕಾರ್ಯಾಂಗಗಳನ್ನೂ ಕಣ್ಗಾವಲಿಟ್ಟು ಕೆಲಸ ನಿರ್ವಹಿಸುವುದು. ದುರಂತವೆಂದರೆ ಈ ದೇಶದ ಮುಖ್ಯವಾದ ಮೂರು ಅಂಗಗಳಲ್ಲಿ ದಲಿತರ, ದಮನಿತರ, ತಬ್ಬಲಿಗಳ ಪ್ರವೇಶವನ್ನು ತಾರತಮ್ಯದಿಂದ ನಿಯಂತ್ರಿಸಲಾಗಿದೆ.
ಅದಕ್ಕಾಗಿ ಈ ದೇಶದ ದಲಿತರು ಪತ್ರಿಕೋದ್ಯಮಕ್ಕೆ ಬರಬೇಕೆಂದು' ಕರೆನೀಡುತ್ತಾರೆ.
ಆದರೆ ಸ್ವಾತಂತ್ರ್ಯವೆಂಬ ರಾಜಕೀಯ ಹಸ್ತಾಂತರವಾಗಿ ಏಳು ದಶಕಗಳು ಸಂದರೂ ಎಲ್ಲ ಕ್ಷೇತ್ರಗಳಂತೆ ಪತ್ರಿಕೋದ್ಯಮ ಕೂಡ ಇನ್ನೂ ಪಟ್ಟಭದ್ರ ಹಿತಾಸಕ್ತರ ಕಪಿಮುಷ್ಟಿಯಲ್ಲೇ ಇದೆ. ಇಂತಹ ಕಷ್ಟದ ಹಾದಿಯನ್ನು ತುಳಿದು ಯಶಸ್ವಿಯಾದವರು ಕಡಿಮೆ.
ಆದರೆ ಗೆಳೆಯ ಇತ್ತೀಚೆಗೆ ಸರ್ಕಾರ ಕೊಡಮಾಡುವ 'ಮಾಧ್ಯಮ ಪ್ರಶಸ್ತಿ' ಪಡೆದಾಗ ಆ ಪುರಸ್ಕಾರವು ನಮ್ಮದೇ ಎನಿಸುವಷ್ಟು ಆಪ್ತವೆನಿಸಿತು.
ಕೇರಿ-ಹಟ್ಟಿಗಳಲ್ಲಿ ಅಕ್ಷರ ಮತ್ತು ಸ್ವಾಭಿಮಾನದ ಕನಸು ಕಂಡಿದ್ದ ಅಂಬೇಡ್ಕರ್ ಅವರ ಕಂಗಳಲ್ಲಿ ಆನಂದದ ಕಿರುಹನಿ ಕಂಡಂತಾಯಿತು. ನಿಮ್ಮ ಊಹೆ ನಿಜ. ಶಿವಮೊಗ್ಗದಲ್ಲಿ 'ಟೆಲೆಕ್ಸ್ ರವಿ' ಎಂದೇ ಸುಪರಿಚಿತನಾದ ಎನ್. ರವಿಕುಮಾರ್, ಮೂರೂವರೆ ದಶಕದ ಹಿಂದೆ ಮಾದಾರ ಹಟ್ಟಿಯಲ್ಲಿ ಗಂಗಮ್ಮ-ನಾಗಯ್ಯರ ವಂಶದ ಕುಡಿಯಾಗಿ ಹುಟ್ಟಿ, ಕಡು ಕಷ್ಟದ ಕುಲಸಂಬಂಧಿ ಕಾಯಕದಲ್ಲಿ ತಂದೆಗೆ ಸಹಾಯಕನಾಗಿ ದುಡಿಯುತ್ತಲೆ ಪದವಿ ಮುಗಿಸಿ, ಪತ್ರಿಕೋದ್ಯಮಕ್ಕೆ ಬಂದುದೇ ಒಂದು ಕಷ್ಟಕುಲದ ಕಥೆಯಾಗಿದೆ.
![]() |
ಮಾಧ್ಯಮ ಅಕಾಡೆಮಿ ಗೌರವ |
ನಾಟಕ, ಸಾಹಿತ್ಯ, ಹಾಗೂ ಸಾಮಾಜಿಕ ಹೋರಾಟಗಳಲ್ಲಿ ತೊಡಗಿಕೊಂಡು ಕಾಲಕಾಲಕ್ಕೆ ಕಷ್ಟಕುಲದ ಕಥೆಗೆ ಅಕ್ಷರ ಹಾಗೂ ಅಭಿನಯ ಮತ್ತು ಹೋರಾಟದ ರೂಪ ನೀಡುವ ರವಿ ಉರಿಯುವ ಸೂರ್ಯನಂತೆ ಇರುತ್ತಲೆ ತಣ್ಣನೆ ಚಂದ್ರನೂ ಆಗಬಲ್ಲ.
ಪಂಚವಟಿ ಕಾಲೋನಿಯ ದಲಿತರ ಸಮಸ್ಯೆ, ಸೂಳೆಬೈಲು, ಬೊಮ್ಮನಕಟ್ಟೆ ಸಾಮಾಜಿಕ ಬಹಿಷ್ಕಾರದಂತಹ ಉರಿವ ದುಃಖಕ್ಕೆ ಮಿತ್ರ ತೊಡಗಿಕೊಂಡ ರೀತಿ ನಿಜಕ್ಕೂ ಪ್ರಶಂಸನೀಯ. ಇಷ್ಟಾಗಿಯೂ ಅದ್ಭುತ ಕವನ ಬರೆಯುತ್ತಲೇ ಈ ನೆಲದ ದಲಿತರ ಆತ್ಮಕಥೆಯ ತುಣುಕುಗಳನ್ನು ಬಿಚ್ಚಿಡುವ ರವಿ ತನ್ನ ಪದ್ಯಗಳಿಗೆ ರಾಜ್ಯ ಮಟ್ಟದ ದೂ. ನಂ. ಬೆಳಗಲಿ ಸಾಹಿತ್ಯ ಪ್ರಶಸ್ತಿ ಹಾಗೂ ಬಿ.ಎಂ.ಶ್ರೀ ಕಾವ್ಯ ಪ್ರಶಸ್ತಿಯನ್ನು ಪಡೆದಿದ್ದಾರೆ.
![]() |
ಎಸ್.ಪಿ ರವಿ ಚನ್ನಣ್ಣನವರ್ ರನ್ನು ಗೌರವಿಸುತ್ತಿರುವ ರವಿ ಟೆಲೆಕ್ಸ್ |
ಈ ಎಲ್ಲವುಗಳಿಗೆ ಕಿರೀಟವಿಟ್ಟಂತೆ ಕರ್ನಾಟಕ ಸರ್ಕಾರದಿಂದ ಕೊಡಮಾಡುವ ಪ್ರತಿಷ್ಠಿತ 'ಕರ್ನಾಟಕ ಮಾಧ್ಯಮ ಅಕಾಡೆಮಿ-2014' ಪತ್ರಿಕೋದ್ಯಮದಲ್ಲಿನ ಸಾಧನೆಗೆ ದಕ್ಕಿದ ಪುರಸ್ಕಾರವಾಗಿದೆ. ಗೆಳೆಯ ರವಿ, ತನ್ನ ಇಬ್ಬರು ಕರುಳ ಕುಡಿಗಳಾದ ವರುಣ್ ಮತ್ತು ಆಕಾಶರ ಕಂಗಳಲ್ಲಿ ಹೊಸ ಕನಸು ಬಿತ್ತಲು ಸಂಗಾತಿ ಶಶಿಕಲಾರಿಗೆ ಒಂದಿಷ್ಟು ಹಿತವಾದ ಸಂತಸವಾಗಲು ನಮ್ಮಂತಹ ಎಲ್ಲ ಗೆಳೆಯರಿಗೆ ಪುಳಕಗೊಳ್ಳುವಂತೆ ಈ ಪ್ರಶಸ್ತಿ ದೊರಕಿರುವುದು ಸಂತಸ ಮತ್ತು ಹೆಮ್ಮೆ ತಂದಿದೆ.
ಇಷ್ಟಾಗಿ ಎನ್. ರವಿಕುಮಾರ್, 'ಟೆಲೆಕ್ಸ್ ರವಿ'ಯಾದ ಕಷ್ಟ ಕುಲದ ಕಥೆಯು ಯುವ ಬರಹಗಾರರಿಗೆ, ಹೋರಾಟಗಾರರಿಗೆ, ಪತ್ರಕರ್ತರಿಗೆ, ಸ್ಫೂರ್ತಿ ಆಗಲೆಂದು ಹಾರೈಸುತ್ತಾ, ಮತ್ತೊಮ್ಮೆ ಈ ಮೂಲಕ ನಮ್ಮೆಲ್ಲಾ ಮಿತ್ರರ ಬಳಗದ ವತಿಯಿಂದ ಮಿತ್ರ ರವಿಗೆ ಪ್ರೀತಿಯ... ಪ್ರೀತಿಯ ಅಭಿನಂದನೆಗಳು
.......................................................
ಬರೆದವರು:
ಡಾ.ಕುಂಸಿ ಉಮೇಶ್
ಸದಸ್ಯರು, ಕರ್ನಾಟಕ ಸಾಹಿತ್ಯ ಅಕಾಡೆಮಿ
.........................................................
No comments:
Post a Comment