Wednesday, October 3, 2018

ಗಾಂಧಿ ಚಿಂತನೆ ಅಳವಡಿಸಿಕೊಳ್ಳುವುದು ಮುಖ್ಯ: ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎ.ಎನ್.ಆದಿರಾಜ್ : ನೂಲಿಗ್ಗೇರಿ ಸರ್ಕಾರಿ ಶಾಲೆಯಲ್ಲಿ ಶ್ರಮದಾನದ ಮೂಲಕ ಗಾಂಧಿ ಜಯಂತಿ ಆಚರಣೆ


ಹಾತ್ಮಗಾಂಧೀಜಿಯ ಆದರ್ಶಗಳನ್ನು ಕೇವಲ ತಿಳಿದುಕೊಂಡರೆ ಸಾಲದು.. ಅವರ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಮುಖ್ಯ ಎಂದು ನೂಲಿಗ್ಗೇರಿ ಸರ್ಕಾರಿ ಶಾಲೆಯ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎ.ಎನ್.ಆದಿರಾಜ ಹೇಳಿದರು.
ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ಗಾಂಧಿ ಜಯಂತಿ ಕಾರ್ಯಕ್ರಮವನ್ನು ಗಾಂಧಿ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಗಾಂಧೀಜಿ ಬಗ್ಗೆ ತಾವು ಅರಿತುಕೊಂಡ ವಿಚಾರಗಳನ್ನು ಸಭೆಯಲ್ಲಿ ಹಂಚಿಕೊಂಡರು.
ಶ್ರಮದಾನ:
ಕಾರ್ಯಕ್ರಮಕ್ಕು ಮುನ್ನ, ಎ.ಎನ್.ಆದಿರಾಜ ನೇತೃತ್ವದಲ್ಲಿ ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಪೋಷಕರು, ಶಿಕ್ಷಕರು, ವಿದ್ಯಾರ್ಥಿಗಳ ಜೊತೆಗೂಡಿ ಶಾಲಾ ಆವರಣವನ್ನು ಸ್ವಚ್ಚಗೊಳಿಸಿದರು.
ಕಾರ್ಯಕ್ರಮದಲ್ಲಿ  ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಅನ್ನಪೂರ್ಣಮ್ಮ, ಸದಸ್ಯರಾದ ಶಾಂತಾ, ವೆಂಕಟೇಶ್, ದೀಪಾ, ಶಿಕ್ಷಕರಾದ ರೇಖಾ, ಫರೀದಾ, ಕಾವ್ಯಶ್ರೀ, ಸುಶ್ಮಿತಾ ಉಪಸ್ಥಿತರಿದ್ದರು.
ಮುಖ್ಯಶಿಕ್ಷಕ ಗಣೇಶ್ ಸ್ವಾಗತಿಸಿದರು. ತ್ರಿಷಾ ವಂದಿಸಿದರು. ಸ್ಪೂರ್ತಿ ಕಾರ್ಯಕ್ರಮ ನಿರ್ವಹಿಸಿದರು.

Monday, October 1, 2018

"ಶಿವಸಂಚಾರ" ದ ಮೂಲಕ ಗಾನಸುಧೆ ಹರಿಸುತ್ತಿರುವ ಬಿದನೂರು ಸಹೋದರಿಯರು

ಪ್ರತಿಭೆ ಯಾರೊಬ್ಬರ ಸ್ವತ್ತು ಅಲ್ಲ.. ಒಂದಷ್ಟು ಛಲದೊಂದಿಗೆ ಶ್ರಮದ ಹಾದಿಯಲ್ಲಿ ಗುರಿ ಇಟ್ಟರೇ.. ಯಶಸ್ಸು ಖಂಡಿತ.. ಇವರಿಬ್ಬರು ಅಪರೂಪದ ಅಪೂರ್ವ ಸಹೋದರಿಯರು.. ಚಿಕ್ಕಂದಿನಲ್ಲಿ ಕಿತ್ತು ತಿನ್ನುವ ಬಡತನ.. ಆದರೂ ಹಾಡುವ ಆಸಕ್ತಿ.. ಸಂಗೀತದ ಸಿದ್ದಿ ಎನ್ನುವುದು ಧೈವದತ್ತ ಕೊಡುಗೆ ಅಂತಾರೆ.. ಇಲ್ಲಿ ಬಡವ ಬಲ್ಲಿದ..ಮೇಲುಕೀಳು ಎಂಬ ಬೇಧಗಳು ಸಿಗಬಹುದಾದ ಅವಕಾಶದ ಸಂದರ್ಭದಲ್ಲಿ ಮೇಳೈಸಬಹುದೇ ಹೊರತು.. ಸಿದ್ದಿಯಲ್ಲಿ ಅಲ್ಲ.. ಇದಕ್ಕೊಂದು ಅಪರೂಪದ ಉದಾಹರಣೆ ಈ ಸಹೋದರಿಯರು..
ಹೌದು ತಮ್ಮ ಇಂಪಾದ ಕಂಠಸಿರಿಯ ಹೊತ್ತು ಶಿವಸಂಚಾರದ ಮೂಲಕ ಲೋಕಕ್ಕೆ ಗಾನಸುಧೆ ಹರಿಸಿದ ಈ ಅಪೂರ್ವ ಸಹೋದರಿಯರು ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಬಿದನೂರು ನಗರದವರು.. ಚಿಕ್ಕಪೇಟೆಯ ಕರುಣಾಕರ ಮತ್ತು ಮುತ್ತಮ್ಮ ದಂಪತಿಗಳ ಮಕ್ಕಳಾದ ಜ್ಯೋತಿ ಮತ್ತು ದಾಕ್ಷಾಯಿಣಿ ಗಾನಲೋಕದ ಅಪೂರ್ವ ಸಹೋದರಿಯರು..

ಬೆಳೆಯುವ ಸಿರಿ ಮೊಳಕೆಯಲ್ಲೆ ಎಂಬಂತೆ.. ಚಿಕ್ಕಂದಿನಲ್ಲೇ ಪ್ರತಿಭಾಗಾನ ಆಗಾಗ ಹೊರಹೊಮ್ಮುತ್ತಿತ್ತು.. ಬಡತನದಲ್ಲೂ ಕಷ್ಟಪಟ್ಟು ಸಂಗೀತಭ್ಯಾಸ ಮಾಡಿಕೊಂಡು.. ಸಂಗೀತದ ಒಂದೊಂದೆ ಮಜಲನ್ನು ಏರತೊಡಗಿದರು.. ಭಕ್ತಿಗೀತೆ, ಭಾವಗೀತೆ, ರಂಗಗೀತೆ, ನಾಟಕ, ಕಚೇರಿಯ ಮೂಲಕ ತಮಗೆ ಸಿದ್ದಿಸಿದ ಗಾನವನ್ನು ಶೋತೃಗಳಿಗೆ ಇಂಪಾಗಿ ಉಣಬಡಿಸುತ್ತಲೇ ಪ್ರವರ್ಧಮಾನಕ್ಕೆ ಬಂದರು.  ಬಿದನೂರು ಸಹೋದರಿಯರು ಅಂತಲೇ ಪ್ರಖ್ಯಾತಿ ಹೊಂದಿದ ಜ್ಯೋತಿ ಮತ್ತು ದಾಕ್ಷಾಯಿಣಿ..ತಮಗಿದ್ದ ಬಡತನದ ದಾರಿದ್ರ್ಯವನ್ನು ಕಿತ್ತೊಗೆದಿದ್ದು ಮಾತ್ರವಲ್ಲ ಸಂಗೀತ ಶಿಕ್ಷಕರಾಗಿ ಅದೆಷ್ಟೋ ಮಕ್ಕಳಿಗೆ ಸಂಗೀತದ ಧಾರೆ ಎರೆದಿದ್ದಾರೆ..

ನೆರವಿಗೆ ಬಂದ ಸಂಗೀತ ಮಾಷ್ಟ್ರು!
ಚಿಕ್ಕಂದಿನಲ್ಲಿ ಬಡತನದ ಬೇಗೆಯಲ್ಲಿ ಶಿಕ್ಷಣದ ಕಲಿಕೆಯೇ ದುಸ್ತರ ಎಂಬಂತಹ ಸ್ಥಿತಿಯಲ್ಲಿ ..ಇನ್ನು ಸಂಗೀತದ ಆಸಕ್ತಿಗೆ ಪ್ರೋತ್ಸಾಹ ಎಲ್ಲಿಂದ ಸಿಗಬೇಕು.. ಆದರೆ ಇವರಿಬ್ಬರ ಬದುಕಿನಲ್ಲಿ ಹಾಗಾಗಲಿಲ್ಲ.. ಬಿದನೂರು ನಗರದ ಸಂಗೀತ ಮಾಸ್ಟ್ರು ಎಂತಲೇ ಚಿರಪರಿಚಿತರಾದ ಸಂಗೀತ ವಿದ್ವಾನ್ ಬಾಲಕೃಷ್ಣರಾವ್.. ಈ ಮಕ್ಕಳಲ್ಲಿ ಸುಪ್ತವಾಗಿದ್ದ ಸಂಗೀತದ ಪ್ರತಿಭೆಯನ್ನು ಗುರುತಿಸಿ .. ಯಾವುದೇ ಫಲಾಪೇಕ್ಷೆ ಇಲ್ಲದೇ ಸಂಗೀತಭ್ಯಾಸ ಮಾಡಿಸಲು ಮುಂದಾದರು. ಇದು ಸಹೋದರಿಯರ ಪಾಲಿಗೆ ವರವಾಗಿ ಪರಿಣಮಿಸಿತು.
ಗುರುಗಳು ಇಟ್ಟ ಭರವಸೆಯನ್ನು ಹುಸಿಗೊಳಿಸದ ಈ ಮಕ್ಕಳು ಹಂತಹಂತವಾಗಿ ಬೆಳೆದರು.. ಮಾತ್ರವಲ್ಲ ಸಂಗೀತವನ್ನೆ ಬದುಕಾಗಿ ಮಾರ್ಪಡಿಸಿಕೊಂಡರು.

ಶಿವಸಂಚಾರ..ಲೋಕಸಂಚಾರ!
ಬಿದನೂನಗರದ ಸಂಗೀತ ಮಾಷ್ಟ್ರು ರವರ ಮಾರ್ಗದರ್ಶನದಲ್ಲಿ ಕನ್ನಡ ಶಾಸ್ತ್ರೀಯ ಸಂಗೀತದ ಜ್ಯೂನಿಯರ್ ನ್ನು ಪ್ರಥಮಶ್ರೇಣಿಯಲ್ಲಿ ಮುಗಿಸಿದ ಈ ಸಹೋದರಿಯರಿಗೆ ಆಸರೆಯಾಗಿ ನಿಂತಿದ್ದು ಚಿತ್ರದುರ್ಗದ ಮುರುಘಾಮಠ.. ಇಲ್ಲಿಯ ಸಂಗೀತ ನಾಟಕ, ನೃತ್ಯಶಾಲೆಯಲ್ಲಿ ಹಿಂದೂಸ್ತಾನಿ ಸಂಗೀತ ಅಭ್ಯಾಸ ಮಾಡಿಕೊಂಡ ಬಿದನೂರು ಸಹೋದರಿಯರು ಸೀದಾ ಹೋಗಿದ್ದು ಸಾಣೇಹಳ್ಳಿ ಮಠಕ್ಕೆ.. ಚಿತ್ರದುರ್ಗದ ಮಠದ ಸಂಗೀತ ಶಾಲೆಯ ಪ್ರಾಂಶುಪಾಲರಾಗಿದ್ದ ಅಶೋಕ ಬಾದರದಿನ್ನಿ ಈ ಸಹೋದರಿಯರ ಪ್ರತಿಭೆ ಮನಗಂಡು ಸಾಣೇಹಳ್ಳಿ ಮಠಕ್ಕೆ ಕರೆತಂದು ಅಲ್ಲಿನ ಶ್ರೀಗಳಿಗೆ ಪರಿಚಯಿಸಿದರು.. ಅಲ್ಲಿಂದ ಸಾಣೇಹಳ್ಳಿ ಮಠದ ಯಶಸ್ವಿ ತಿರುಗಾಟ ಕಾರ್ಯಕ್ರಮವಾದ "ಶಿವಸಂಚಾರ" ದ ಕಲಾವಿದರಾಗಿ ಬಿದನೂರು ಸಹೋದರಿಯರು ರೂಪುಗೊಂಡಿದ್ದು ಗಮನಾರ್ಹ.

ಈ ನಡುವೆಯೇ ಹಿಂದೂಸ್ತಾನಿ, ಶಾಸ್ತ್ರೀಯ ವಿದ್ವತ್ ಪೂರ್ವ ಮತ್ತು ಅಂತಿಮ ಪರೀಕ್ಷೆಯಲ್ಲಿ ತೇರ್ಗಡೆಯಾದ ಜ್ಯೋತಿ ಮತ್ತು ದಾಕ್ಷಾಯಿಣಿ ಸಂಗೀತದ ಕೃಷಿಯಲ್ಲಿ ಇನ್ನಷ್ಟು ಪಕ್ವವಾದರು.

ಸಂಗೀತ ಶಿಕ್ಷಕರಾದ ಬಿದನೂರು ಸಹೋದರಿಯರು!
2012 ರಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಮತ್ತು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸಂಗೀತ ಶಿಕ್ಷಕರಾಗಿ ಸರ್ಕಾರಿ ವೃತ್ತಿ ಪಡೆದುಕೊಂಡ ಇವರು ಸಂಗೀತದಲ್ಲೇ ತಮ್ಮ ಬದುಕನ್ನು ತೊಡಗಿಸಿಕೊಂಡರು.
ವೃತ್ತಿಯ ನಡುವೆಯೂ ಸಾಣೇಹಳ್ಳಿ ಶಿವಸಂಚಾರದ ಕಲಾವಿದರಾಗಿ ವಚನ ಸಾಹಿತ್ಯವನ್ನು ಲೋಕಕ್ಕೆ ಪ್ರಚುರ ಪಡಿಸುವ ಮೂಲಕ ಮನೆಮಾತಾಗಿದ್ದಾರೆ. ರಾಜ್ಯದಲ್ಲಿ ಮಾತ್ರವಲ್ಲದೆ ಹೊರರಾಜ್ಯ, ವಿದೇಶದಲ್ಲೂ ಕಾರ್ಯಕ್ರಮ ನೀಡಿ ಸೈ ಎನಿಸಿಕೊಂಡಿರುವ ಈ ಬಿದನೂರು ಸಹೋದರಿಯರು, ಚಂದನ, ಈಟಿವಿ, ಸುವರ್ಣ ಟಿವಿ ಮತ್ತು ಆಕಾಶವಾಣಿ ಕಾರ್ಯಕ್ರಮದಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ. ಇವರೀರ್ವರ ಪ್ರತಿಭೆಗೆ ಸಾಕಷ್ಟು ಸನ್ಮಾನ ಪುರಸ್ಕಾರಗಳು ಅರಸಿಕೊಂಡು ಬಂದಿವೆ.
ಇಂದು ಸಂಗೀತದಲ್ಲಿ ಅದೆಷ್ಟೇ ಕೃಷಿ ಮಾಡಿರಬಹುದು ಆದರೆ ಆರಂಭಿಕವಾಗಿ ಉಚಿತವಾಗಿ ಸಂಗೀತಭ್ಯಾಸ ಮಾಡಿಸಿದ ಬಿದನೂರುನಗರದ ಬಾಲಕೃಷ್ಣರಾವ್ ಮತ್ತು ತಮ್ಮ ಭವಿಷ್ಯ ರೂಪಿಸಿದ ಸಾಣೇಹಳ್ಳಿ ಮಠದ ಸ್ವಾಮೀಜಿಗಳನ್ನು ಬಿದನೂರು ಸಹೋದರಿಯರಾದ ಜ್ಯೋತಿ ಮತ್ತು ದಾಕ್ಷಾಯಿಣಿ ಧನ್ಯತೆಯಿಂದ ಸ್ಮರಿಸಿಕೊಳ್ಳುತ್ತಾರೆ..
ಸಾಣೇಹಳ್ಳಿ ಶ್ರೀಗಳ ಜೊತೆ




ಸಂಗೀತ ದಿಗ್ಗಜ ಎಸ್ ಪಿ ಬಾಲಸುಬ್ರಹ್ಮಣ್ಯಂ ಮತ್ತು ಮುರುಘಾ ಶ್ರೀಗಳೊಂದಿಗೆ

Wednesday, September 19, 2018

ಅಂದಿನ ಸಾರ್ವಜನಿಕ ಗಣೇಶೋತ್ಸವದ ನೆನಪು ಹೊತ್ತು ತಂದ ಈ ಬಾರಿಯ "ನಮ್ ನಗರ"ದ "ಗಣೇಶೋತ್ಸವ"*


ಸುಮಾರು ಇಪ್ಪತೈದು..ಮೂವತ್ತು  ವರ್ಷಗಳ ಹಿಂದೆ ನಗರದಲ್ಲಿ ಗಣೇಶೋತ್ಸವದ ಸಂಭ್ರಮ ಎಂದರೇ ಎಲ್ಲರೂ ನಿರೀಕ್ಷೆ ಇಟ್ಟುಕೊಳ್ಳುತ್ತಿದ್ದ ಸಮಯವಂತೆ.. ನಗರ ಸೊಸೈಟಿಯ ಹಿಂದಿನ ಗೋಡನ್ ನಲ್ಲಿ ವಿಘ್ನವಿನಾಯಕನನ್ನು ಕುಳ್ಳಿರಿಸಿ.. ಹಾಡು..ಭಜನೆ.. ಸಾಂಸ್ಕೃತಿಕ ಕಾರ್ಯಕ್ರಮಗಳ ರಸದೌತಣದೊಂದಿಗೆ.. ಎಲ್ಲರ ಗಮನಸೆಳೆಯುವಂತೆ ಗಣೇಶೋತ್ಸವ ಆಚರಿಸಲಾಗುತ್ತಿತ್ತು.. ಆಗಿನ ಸಾರ್ವಜನಿಕ ಗಣೇಶೋತ್ಸವದ ಪ್ರಮುಖ ಆಕರ್ಷಣೆ ಎಂದರೆ.. ವಿನಾಯಕನ ವಿಸರ್ಜನಾ ಮೆರವಣಿಗೆ.. ಅಷ್ಟೇ ಅಲ್ಲಾ ಚಿಕ್ಕಪೇಟೆ ಸೇತುವೆ ಭಾಗದಲ್ಲಿ ತುಂಬಿನಿಂತ ಹಿನ್ನೀರಲ್ಲಿ ನಡೆಯುತ್ತಿದ್ದ ತೆಪ್ಪೋತ್ಸವ ಎಂತವರ ಗಮನವನ್ನು ಸೆಳೆಯುತ್ತಿತ್ತು.. ಹೇಳಿಕೇಳಿ ಅಂದಿನ ವಿನಾಯಕ ಮೂರ್ತಿ ಕೂಡ ಇಂದಿನ ಚೇತನ ಬಳಗದ ಗಣಪತಿಯಂತೆ ದೊಡ್ಡಗಾತ್ರದಲ್ಲೇ ನಿರ್ಮಾಣ ಮಾಡಲಾಗುತ್ತಿತ್ತು ..ನಗರದ ಗುಂಡಪ್ಪ ಮಾಸ್ಟರ್ ವಿಶೇಷ ಆಸಕ್ತಿಯೊಂದಿಗೆ ಪ್ರತಿವರ್ಷವೂ ವಿಭಿನ್ನ ಶೈಲಿಯಲ್ಲಿ ಗಣಪತಿಯನ್ನು ನಿರ್ಮಿಸುತ್ತಿದ್ದರು.


ಗಣಪತಿ ವಿಸರ್ಜನೆ ವೇಳೆ ಎರಡು ದೋಣಿಗಳನ್ನು ಜೋಡಿಸಿ ಅಲಂಕೃತಗೊಳಿಸಲಾಗುತ್ತಿತ್ತು.. ಮೆರವಣಿಗೆಯಲ್ಲಿ ಬಂದ ಸಾರ್ವಜನಿಕ ಗಣಪತಿಯನ್ನು ದೋಣಿಯ ಮೇಲೆ ಏರಿಸಿಕೊಂಡು ಹಿನ್ನೀರ ಸುತ್ತಲೂ ಪ್ರದಕ್ಷಿಣೆ ಹಾಕಲಾಗುತ್ತಿತ್ತು.. ಅಲ್ಲದೇ ನೀರಿನ ಮೇಲೆ ದೀಪಗಳನ್ನು ತೇಲಿ ಬಿಡುತ್ತಿದ್ದು ಅದನ್ನು ನೋಡೋದೆ ಚಂದವಾಗಿತ್ತು.. ನೂರಾರು ದೀಪಗಳ ನಡುವೆ ಗಣಪತಿಯನ್ನು ಹೊತ್ತು ಸಾಗೋ ಅಲಂಕೃತ ದೋಣಿಯ ನೋಟ ಕಣ್ಣುಕುಕ್ಕುವಂತಿತ್ತು.. ತೆಪ್ಪೋತ್ಸವದ ಬಳಿಕ ಮದ್ಯಹೊಳೆಯಲ್ಲಿ ಗಣಪತಿ ವಿಸರ್ಜನೆ ಮಾಡುವ ಮೂಲಕ ಆ ವರ್ಷದ ಗಣೇಶೋತ್ಸವಕ್ಕೆ ತೆರೆ ಬೀಳುತ್ತಿತ್ತು..
ಊರಿನಜನರೆಲ್ಲಾ ಒಟ್ಟಾಗಿ ಸೇರಿ ಅತ್ಯಂತ ಜಾಗರೂಕತೆಯಿಂದ ನಡೆಸಿಕೊಡುತ್ತಿದ್ದ ಈ ಗಣೇಶೋತ್ಸವ ಸಾಕಷ್ಟು ಪ್ರಸಿದ್ಧಿಯನ್ನು ಪಡೆದಿತ್ತಂತೆ..  ಅಂತ ಅಂದಿನ ಸಾರ್ವಜನಿಕ ಗಣೇಶೋತ್ಸವ ಕಣ್ತುಂಬಿಕೊಂಡ ಹಿರಿಯರು ಹೇಳುತ್ತಿದ್ದರೆ.... ಕೇಳೋಕೆ ತುಂಬ ಖುಶಿ ಆಗತ್ತೆ.. ಅಂದು ಇನ್ನೆಷ್ಟು ಸೊಗಸಾಗಿದ್ದರಬಹುದು ಅಲ್ವಾ..
ಇಂದಿನ ಹಿರಿಯರಲ್ಲಿ ಅಂದಿನ ಗಣೇಶೋತ್ಸವದ ನೆನಪು.. ಈ ವರ್ಷ ತರಿಸಿದೆಯಂತೆ.. ಅದಕ್ಕೆ ಕಾರಣ ನಗರದ ಚೇತನಾ ಬಳಗ..
ಹೆಸರಿಗೆ ತಕ್ಕಂತೆ ಎಲ್ಲರು ಉತ್ಸಾಹಿ ಯುವಕರೇ ತುಂಬಿರುವ. ಈ ಚೇತನ ಬಳಗ ಈವರ್ಷ ಒಂದಷ್ಟು ಸುದ್ದಿ ಮಾಡಿದೆ.. 1997 ರಲ್ಲಿ ಪ್ರಾರಂಭವಾದ ಈ ಗಣೇಶೋತ್ಸವ ಕಾರ್ಯಕ್ರಮ ಸತತ 21 ವರ್ಷಗಳಿಂದ ಆಚರಿಸಿಕೊಂಡು ಬಂದಿದ್ದಾರೆ. ಮೊದಲೆಲ್ಲ ಸಾದರಣವಾಗಿ ಇರುತ್ತಿದ್ದ ಈ ಗಣೇಶೋತ್ಸವ  ವರ್ಷ ಕಳೆದಂತೆ ವಿಭಿನ್ನ ವಾದ ಕಾರ್ಯಕ್ರಮಗಳನ್ನು ಕೊಟ್ಟು ನಗರದ ಜನತೆಯ ಮೆಚ್ಚುಗೆ ಕಾರಣವಾಗಿದೆ... ಅದರಲ್ಲೂ ಈ ವರ್ಷ ತುಂಬಾ ಅದ್ದೂರಿಯಾಗಿ ಗಣೇಶೋತ್ಸವ ಆಚರಿಸಿದ್ದು ಮಾತ್ರ ಗಮನಸೆಳೆಯುವಂತಿತ್ತು...  ಹಾಗೂ ಈ ಸಾರಿ ಜನರ ಆಕರ್ಷಣೆಯಾಗಿದ್ದು ಮಾತ್ರ ಕೊನೆ ದಿನದ ಗಣೇಶನ ವಿಸರ್ಜನೆ ಕಾರ್ಯಕ್ರಮ..  ನಗರದ ಇತಿಹಾಸದಲ್ಲೆ ಇದೇ ಮೊದಲು ದೂರದ ಮಂಗಳೂರಿನಿಂದ ಬಂದ ಕರಾವಳಿಯ ಆಯ್ದ ಕಲಾತಂಡಗಳಿಂದ ಚಂಡೆ, ನಾಸಿಕ್, ಬ್ಯಾಂಡ್, ಗೊಂಬೆ ಕುಣಿತ,  ಹುಲಿವೇಷಗಳೊಂದಿಗೆ .. ಅಬ್ಬರದ ಮೆರವಣಿಗೆ ನಗರ ಜನರನ್ನು ಮೂಕವಿಸ್ಮಿತರನ್ನಾಗಿ ಮಾಡಿದ್ದಂತು ನಿಜ.. ಅದರಲ್ಲೂ ಚಂಡೆವಾದನದೊಂದಿಗೆ ಸಮ್ಮಿಳಿತಗೊಂಡ ನೃತ್ಯವೈಭವವಂತೂ ಇಡೀ ನಗರವನ್ನೇ ತುಂಬಿಕೊಂಡುಬಿಟ್ಟಿದೆ.. ಅದರಲ್ಲೂ ನಮ್ಮೂರಿನ ಕಲಾವಿದ ಹರೀಶ್ ನರಹರಿರಾವ್ ನಿರ್ಮಿಸಿದ ಮೆರವಣಿಗೆಯ ಗಣಪತಿಯ ಮುಖಮಂಟಪ ಆಕರ್ಷಕವಾಗಿತ್ತು.. ಜನಮನ ರಂಜಿಸಿದ ಈಬಾರಿಯ ಗಣೇಶೋತ್ಸವ.. ಮುಂದುವರೆಯಲಿ.. ಮತ್ತಷ್ಟು ವಿಶೇಷತೆಯನ್ನು ಹೊತ್ತುತರಲಿ ಅಲ್ಲವೇ..!

ಚಿತ್ರ-ಬರಹ
ಕಾರ್ತಿಕ್ 'ನಮ್' ನಗರ