Wednesday, October 3, 2018

ಗಾಂಧಿ ಚಿಂತನೆ ಅಳವಡಿಸಿಕೊಳ್ಳುವುದು ಮುಖ್ಯ: ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎ.ಎನ್.ಆದಿರಾಜ್ : ನೂಲಿಗ್ಗೇರಿ ಸರ್ಕಾರಿ ಶಾಲೆಯಲ್ಲಿ ಶ್ರಮದಾನದ ಮೂಲಕ ಗಾಂಧಿ ಜಯಂತಿ ಆಚರಣೆ


ಹಾತ್ಮಗಾಂಧೀಜಿಯ ಆದರ್ಶಗಳನ್ನು ಕೇವಲ ತಿಳಿದುಕೊಂಡರೆ ಸಾಲದು.. ಅವರ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಮುಖ್ಯ ಎಂದು ನೂಲಿಗ್ಗೇರಿ ಸರ್ಕಾರಿ ಶಾಲೆಯ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎ.ಎನ್.ಆದಿರಾಜ ಹೇಳಿದರು.
ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ಗಾಂಧಿ ಜಯಂತಿ ಕಾರ್ಯಕ್ರಮವನ್ನು ಗಾಂಧಿ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಗಾಂಧೀಜಿ ಬಗ್ಗೆ ತಾವು ಅರಿತುಕೊಂಡ ವಿಚಾರಗಳನ್ನು ಸಭೆಯಲ್ಲಿ ಹಂಚಿಕೊಂಡರು.
ಶ್ರಮದಾನ:
ಕಾರ್ಯಕ್ರಮಕ್ಕು ಮುನ್ನ, ಎ.ಎನ್.ಆದಿರಾಜ ನೇತೃತ್ವದಲ್ಲಿ ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಪೋಷಕರು, ಶಿಕ್ಷಕರು, ವಿದ್ಯಾರ್ಥಿಗಳ ಜೊತೆಗೂಡಿ ಶಾಲಾ ಆವರಣವನ್ನು ಸ್ವಚ್ಚಗೊಳಿಸಿದರು.
ಕಾರ್ಯಕ್ರಮದಲ್ಲಿ  ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಅನ್ನಪೂರ್ಣಮ್ಮ, ಸದಸ್ಯರಾದ ಶಾಂತಾ, ವೆಂಕಟೇಶ್, ದೀಪಾ, ಶಿಕ್ಷಕರಾದ ರೇಖಾ, ಫರೀದಾ, ಕಾವ್ಯಶ್ರೀ, ಸುಶ್ಮಿತಾ ಉಪಸ್ಥಿತರಿದ್ದರು.
ಮುಖ್ಯಶಿಕ್ಷಕ ಗಣೇಶ್ ಸ್ವಾಗತಿಸಿದರು. ತ್ರಿಷಾ ವಂದಿಸಿದರು. ಸ್ಪೂರ್ತಿ ಕಾರ್ಯಕ್ರಮ ನಿರ್ವಹಿಸಿದರು.

Monday, October 1, 2018

"ಶಿವಸಂಚಾರ" ದ ಮೂಲಕ ಗಾನಸುಧೆ ಹರಿಸುತ್ತಿರುವ ಬಿದನೂರು ಸಹೋದರಿಯರು

ಪ್ರತಿಭೆ ಯಾರೊಬ್ಬರ ಸ್ವತ್ತು ಅಲ್ಲ.. ಒಂದಷ್ಟು ಛಲದೊಂದಿಗೆ ಶ್ರಮದ ಹಾದಿಯಲ್ಲಿ ಗುರಿ ಇಟ್ಟರೇ.. ಯಶಸ್ಸು ಖಂಡಿತ.. ಇವರಿಬ್ಬರು ಅಪರೂಪದ ಅಪೂರ್ವ ಸಹೋದರಿಯರು.. ಚಿಕ್ಕಂದಿನಲ್ಲಿ ಕಿತ್ತು ತಿನ್ನುವ ಬಡತನ.. ಆದರೂ ಹಾಡುವ ಆಸಕ್ತಿ.. ಸಂಗೀತದ ಸಿದ್ದಿ ಎನ್ನುವುದು ಧೈವದತ್ತ ಕೊಡುಗೆ ಅಂತಾರೆ.. ಇಲ್ಲಿ ಬಡವ ಬಲ್ಲಿದ..ಮೇಲುಕೀಳು ಎಂಬ ಬೇಧಗಳು ಸಿಗಬಹುದಾದ ಅವಕಾಶದ ಸಂದರ್ಭದಲ್ಲಿ ಮೇಳೈಸಬಹುದೇ ಹೊರತು.. ಸಿದ್ದಿಯಲ್ಲಿ ಅಲ್ಲ.. ಇದಕ್ಕೊಂದು ಅಪರೂಪದ ಉದಾಹರಣೆ ಈ ಸಹೋದರಿಯರು..
ಹೌದು ತಮ್ಮ ಇಂಪಾದ ಕಂಠಸಿರಿಯ ಹೊತ್ತು ಶಿವಸಂಚಾರದ ಮೂಲಕ ಲೋಕಕ್ಕೆ ಗಾನಸುಧೆ ಹರಿಸಿದ ಈ ಅಪೂರ್ವ ಸಹೋದರಿಯರು ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಬಿದನೂರು ನಗರದವರು.. ಚಿಕ್ಕಪೇಟೆಯ ಕರುಣಾಕರ ಮತ್ತು ಮುತ್ತಮ್ಮ ದಂಪತಿಗಳ ಮಕ್ಕಳಾದ ಜ್ಯೋತಿ ಮತ್ತು ದಾಕ್ಷಾಯಿಣಿ ಗಾನಲೋಕದ ಅಪೂರ್ವ ಸಹೋದರಿಯರು..

ಬೆಳೆಯುವ ಸಿರಿ ಮೊಳಕೆಯಲ್ಲೆ ಎಂಬಂತೆ.. ಚಿಕ್ಕಂದಿನಲ್ಲೇ ಪ್ರತಿಭಾಗಾನ ಆಗಾಗ ಹೊರಹೊಮ್ಮುತ್ತಿತ್ತು.. ಬಡತನದಲ್ಲೂ ಕಷ್ಟಪಟ್ಟು ಸಂಗೀತಭ್ಯಾಸ ಮಾಡಿಕೊಂಡು.. ಸಂಗೀತದ ಒಂದೊಂದೆ ಮಜಲನ್ನು ಏರತೊಡಗಿದರು.. ಭಕ್ತಿಗೀತೆ, ಭಾವಗೀತೆ, ರಂಗಗೀತೆ, ನಾಟಕ, ಕಚೇರಿಯ ಮೂಲಕ ತಮಗೆ ಸಿದ್ದಿಸಿದ ಗಾನವನ್ನು ಶೋತೃಗಳಿಗೆ ಇಂಪಾಗಿ ಉಣಬಡಿಸುತ್ತಲೇ ಪ್ರವರ್ಧಮಾನಕ್ಕೆ ಬಂದರು.  ಬಿದನೂರು ಸಹೋದರಿಯರು ಅಂತಲೇ ಪ್ರಖ್ಯಾತಿ ಹೊಂದಿದ ಜ್ಯೋತಿ ಮತ್ತು ದಾಕ್ಷಾಯಿಣಿ..ತಮಗಿದ್ದ ಬಡತನದ ದಾರಿದ್ರ್ಯವನ್ನು ಕಿತ್ತೊಗೆದಿದ್ದು ಮಾತ್ರವಲ್ಲ ಸಂಗೀತ ಶಿಕ್ಷಕರಾಗಿ ಅದೆಷ್ಟೋ ಮಕ್ಕಳಿಗೆ ಸಂಗೀತದ ಧಾರೆ ಎರೆದಿದ್ದಾರೆ..

ನೆರವಿಗೆ ಬಂದ ಸಂಗೀತ ಮಾಷ್ಟ್ರು!
ಚಿಕ್ಕಂದಿನಲ್ಲಿ ಬಡತನದ ಬೇಗೆಯಲ್ಲಿ ಶಿಕ್ಷಣದ ಕಲಿಕೆಯೇ ದುಸ್ತರ ಎಂಬಂತಹ ಸ್ಥಿತಿಯಲ್ಲಿ ..ಇನ್ನು ಸಂಗೀತದ ಆಸಕ್ತಿಗೆ ಪ್ರೋತ್ಸಾಹ ಎಲ್ಲಿಂದ ಸಿಗಬೇಕು.. ಆದರೆ ಇವರಿಬ್ಬರ ಬದುಕಿನಲ್ಲಿ ಹಾಗಾಗಲಿಲ್ಲ.. ಬಿದನೂರು ನಗರದ ಸಂಗೀತ ಮಾಸ್ಟ್ರು ಎಂತಲೇ ಚಿರಪರಿಚಿತರಾದ ಸಂಗೀತ ವಿದ್ವಾನ್ ಬಾಲಕೃಷ್ಣರಾವ್.. ಈ ಮಕ್ಕಳಲ್ಲಿ ಸುಪ್ತವಾಗಿದ್ದ ಸಂಗೀತದ ಪ್ರತಿಭೆಯನ್ನು ಗುರುತಿಸಿ .. ಯಾವುದೇ ಫಲಾಪೇಕ್ಷೆ ಇಲ್ಲದೇ ಸಂಗೀತಭ್ಯಾಸ ಮಾಡಿಸಲು ಮುಂದಾದರು. ಇದು ಸಹೋದರಿಯರ ಪಾಲಿಗೆ ವರವಾಗಿ ಪರಿಣಮಿಸಿತು.
ಗುರುಗಳು ಇಟ್ಟ ಭರವಸೆಯನ್ನು ಹುಸಿಗೊಳಿಸದ ಈ ಮಕ್ಕಳು ಹಂತಹಂತವಾಗಿ ಬೆಳೆದರು.. ಮಾತ್ರವಲ್ಲ ಸಂಗೀತವನ್ನೆ ಬದುಕಾಗಿ ಮಾರ್ಪಡಿಸಿಕೊಂಡರು.

ಶಿವಸಂಚಾರ..ಲೋಕಸಂಚಾರ!
ಬಿದನೂನಗರದ ಸಂಗೀತ ಮಾಷ್ಟ್ರು ರವರ ಮಾರ್ಗದರ್ಶನದಲ್ಲಿ ಕನ್ನಡ ಶಾಸ್ತ್ರೀಯ ಸಂಗೀತದ ಜ್ಯೂನಿಯರ್ ನ್ನು ಪ್ರಥಮಶ್ರೇಣಿಯಲ್ಲಿ ಮುಗಿಸಿದ ಈ ಸಹೋದರಿಯರಿಗೆ ಆಸರೆಯಾಗಿ ನಿಂತಿದ್ದು ಚಿತ್ರದುರ್ಗದ ಮುರುಘಾಮಠ.. ಇಲ್ಲಿಯ ಸಂಗೀತ ನಾಟಕ, ನೃತ್ಯಶಾಲೆಯಲ್ಲಿ ಹಿಂದೂಸ್ತಾನಿ ಸಂಗೀತ ಅಭ್ಯಾಸ ಮಾಡಿಕೊಂಡ ಬಿದನೂರು ಸಹೋದರಿಯರು ಸೀದಾ ಹೋಗಿದ್ದು ಸಾಣೇಹಳ್ಳಿ ಮಠಕ್ಕೆ.. ಚಿತ್ರದುರ್ಗದ ಮಠದ ಸಂಗೀತ ಶಾಲೆಯ ಪ್ರಾಂಶುಪಾಲರಾಗಿದ್ದ ಅಶೋಕ ಬಾದರದಿನ್ನಿ ಈ ಸಹೋದರಿಯರ ಪ್ರತಿಭೆ ಮನಗಂಡು ಸಾಣೇಹಳ್ಳಿ ಮಠಕ್ಕೆ ಕರೆತಂದು ಅಲ್ಲಿನ ಶ್ರೀಗಳಿಗೆ ಪರಿಚಯಿಸಿದರು.. ಅಲ್ಲಿಂದ ಸಾಣೇಹಳ್ಳಿ ಮಠದ ಯಶಸ್ವಿ ತಿರುಗಾಟ ಕಾರ್ಯಕ್ರಮವಾದ "ಶಿವಸಂಚಾರ" ದ ಕಲಾವಿದರಾಗಿ ಬಿದನೂರು ಸಹೋದರಿಯರು ರೂಪುಗೊಂಡಿದ್ದು ಗಮನಾರ್ಹ.

ಈ ನಡುವೆಯೇ ಹಿಂದೂಸ್ತಾನಿ, ಶಾಸ್ತ್ರೀಯ ವಿದ್ವತ್ ಪೂರ್ವ ಮತ್ತು ಅಂತಿಮ ಪರೀಕ್ಷೆಯಲ್ಲಿ ತೇರ್ಗಡೆಯಾದ ಜ್ಯೋತಿ ಮತ್ತು ದಾಕ್ಷಾಯಿಣಿ ಸಂಗೀತದ ಕೃಷಿಯಲ್ಲಿ ಇನ್ನಷ್ಟು ಪಕ್ವವಾದರು.

ಸಂಗೀತ ಶಿಕ್ಷಕರಾದ ಬಿದನೂರು ಸಹೋದರಿಯರು!
2012 ರಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಮತ್ತು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸಂಗೀತ ಶಿಕ್ಷಕರಾಗಿ ಸರ್ಕಾರಿ ವೃತ್ತಿ ಪಡೆದುಕೊಂಡ ಇವರು ಸಂಗೀತದಲ್ಲೇ ತಮ್ಮ ಬದುಕನ್ನು ತೊಡಗಿಸಿಕೊಂಡರು.
ವೃತ್ತಿಯ ನಡುವೆಯೂ ಸಾಣೇಹಳ್ಳಿ ಶಿವಸಂಚಾರದ ಕಲಾವಿದರಾಗಿ ವಚನ ಸಾಹಿತ್ಯವನ್ನು ಲೋಕಕ್ಕೆ ಪ್ರಚುರ ಪಡಿಸುವ ಮೂಲಕ ಮನೆಮಾತಾಗಿದ್ದಾರೆ. ರಾಜ್ಯದಲ್ಲಿ ಮಾತ್ರವಲ್ಲದೆ ಹೊರರಾಜ್ಯ, ವಿದೇಶದಲ್ಲೂ ಕಾರ್ಯಕ್ರಮ ನೀಡಿ ಸೈ ಎನಿಸಿಕೊಂಡಿರುವ ಈ ಬಿದನೂರು ಸಹೋದರಿಯರು, ಚಂದನ, ಈಟಿವಿ, ಸುವರ್ಣ ಟಿವಿ ಮತ್ತು ಆಕಾಶವಾಣಿ ಕಾರ್ಯಕ್ರಮದಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ. ಇವರೀರ್ವರ ಪ್ರತಿಭೆಗೆ ಸಾಕಷ್ಟು ಸನ್ಮಾನ ಪುರಸ್ಕಾರಗಳು ಅರಸಿಕೊಂಡು ಬಂದಿವೆ.
ಇಂದು ಸಂಗೀತದಲ್ಲಿ ಅದೆಷ್ಟೇ ಕೃಷಿ ಮಾಡಿರಬಹುದು ಆದರೆ ಆರಂಭಿಕವಾಗಿ ಉಚಿತವಾಗಿ ಸಂಗೀತಭ್ಯಾಸ ಮಾಡಿಸಿದ ಬಿದನೂರುನಗರದ ಬಾಲಕೃಷ್ಣರಾವ್ ಮತ್ತು ತಮ್ಮ ಭವಿಷ್ಯ ರೂಪಿಸಿದ ಸಾಣೇಹಳ್ಳಿ ಮಠದ ಸ್ವಾಮೀಜಿಗಳನ್ನು ಬಿದನೂರು ಸಹೋದರಿಯರಾದ ಜ್ಯೋತಿ ಮತ್ತು ದಾಕ್ಷಾಯಿಣಿ ಧನ್ಯತೆಯಿಂದ ಸ್ಮರಿಸಿಕೊಳ್ಳುತ್ತಾರೆ..
ಸಾಣೇಹಳ್ಳಿ ಶ್ರೀಗಳ ಜೊತೆ




ಸಂಗೀತ ದಿಗ್ಗಜ ಎಸ್ ಪಿ ಬಾಲಸುಬ್ರಹ್ಮಣ್ಯಂ ಮತ್ತು ಮುರುಘಾ ಶ್ರೀಗಳೊಂದಿಗೆ

Wednesday, September 19, 2018

ಅಂದಿನ ಸಾರ್ವಜನಿಕ ಗಣೇಶೋತ್ಸವದ ನೆನಪು ಹೊತ್ತು ತಂದ ಈ ಬಾರಿಯ "ನಮ್ ನಗರ"ದ "ಗಣೇಶೋತ್ಸವ"*


ಸುಮಾರು ಇಪ್ಪತೈದು..ಮೂವತ್ತು  ವರ್ಷಗಳ ಹಿಂದೆ ನಗರದಲ್ಲಿ ಗಣೇಶೋತ್ಸವದ ಸಂಭ್ರಮ ಎಂದರೇ ಎಲ್ಲರೂ ನಿರೀಕ್ಷೆ ಇಟ್ಟುಕೊಳ್ಳುತ್ತಿದ್ದ ಸಮಯವಂತೆ.. ನಗರ ಸೊಸೈಟಿಯ ಹಿಂದಿನ ಗೋಡನ್ ನಲ್ಲಿ ವಿಘ್ನವಿನಾಯಕನನ್ನು ಕುಳ್ಳಿರಿಸಿ.. ಹಾಡು..ಭಜನೆ.. ಸಾಂಸ್ಕೃತಿಕ ಕಾರ್ಯಕ್ರಮಗಳ ರಸದೌತಣದೊಂದಿಗೆ.. ಎಲ್ಲರ ಗಮನಸೆಳೆಯುವಂತೆ ಗಣೇಶೋತ್ಸವ ಆಚರಿಸಲಾಗುತ್ತಿತ್ತು.. ಆಗಿನ ಸಾರ್ವಜನಿಕ ಗಣೇಶೋತ್ಸವದ ಪ್ರಮುಖ ಆಕರ್ಷಣೆ ಎಂದರೆ.. ವಿನಾಯಕನ ವಿಸರ್ಜನಾ ಮೆರವಣಿಗೆ.. ಅಷ್ಟೇ ಅಲ್ಲಾ ಚಿಕ್ಕಪೇಟೆ ಸೇತುವೆ ಭಾಗದಲ್ಲಿ ತುಂಬಿನಿಂತ ಹಿನ್ನೀರಲ್ಲಿ ನಡೆಯುತ್ತಿದ್ದ ತೆಪ್ಪೋತ್ಸವ ಎಂತವರ ಗಮನವನ್ನು ಸೆಳೆಯುತ್ತಿತ್ತು.. ಹೇಳಿಕೇಳಿ ಅಂದಿನ ವಿನಾಯಕ ಮೂರ್ತಿ ಕೂಡ ಇಂದಿನ ಚೇತನ ಬಳಗದ ಗಣಪತಿಯಂತೆ ದೊಡ್ಡಗಾತ್ರದಲ್ಲೇ ನಿರ್ಮಾಣ ಮಾಡಲಾಗುತ್ತಿತ್ತು ..ನಗರದ ಗುಂಡಪ್ಪ ಮಾಸ್ಟರ್ ವಿಶೇಷ ಆಸಕ್ತಿಯೊಂದಿಗೆ ಪ್ರತಿವರ್ಷವೂ ವಿಭಿನ್ನ ಶೈಲಿಯಲ್ಲಿ ಗಣಪತಿಯನ್ನು ನಿರ್ಮಿಸುತ್ತಿದ್ದರು.


ಗಣಪತಿ ವಿಸರ್ಜನೆ ವೇಳೆ ಎರಡು ದೋಣಿಗಳನ್ನು ಜೋಡಿಸಿ ಅಲಂಕೃತಗೊಳಿಸಲಾಗುತ್ತಿತ್ತು.. ಮೆರವಣಿಗೆಯಲ್ಲಿ ಬಂದ ಸಾರ್ವಜನಿಕ ಗಣಪತಿಯನ್ನು ದೋಣಿಯ ಮೇಲೆ ಏರಿಸಿಕೊಂಡು ಹಿನ್ನೀರ ಸುತ್ತಲೂ ಪ್ರದಕ್ಷಿಣೆ ಹಾಕಲಾಗುತ್ತಿತ್ತು.. ಅಲ್ಲದೇ ನೀರಿನ ಮೇಲೆ ದೀಪಗಳನ್ನು ತೇಲಿ ಬಿಡುತ್ತಿದ್ದು ಅದನ್ನು ನೋಡೋದೆ ಚಂದವಾಗಿತ್ತು.. ನೂರಾರು ದೀಪಗಳ ನಡುವೆ ಗಣಪತಿಯನ್ನು ಹೊತ್ತು ಸಾಗೋ ಅಲಂಕೃತ ದೋಣಿಯ ನೋಟ ಕಣ್ಣುಕುಕ್ಕುವಂತಿತ್ತು.. ತೆಪ್ಪೋತ್ಸವದ ಬಳಿಕ ಮದ್ಯಹೊಳೆಯಲ್ಲಿ ಗಣಪತಿ ವಿಸರ್ಜನೆ ಮಾಡುವ ಮೂಲಕ ಆ ವರ್ಷದ ಗಣೇಶೋತ್ಸವಕ್ಕೆ ತೆರೆ ಬೀಳುತ್ತಿತ್ತು..
ಊರಿನಜನರೆಲ್ಲಾ ಒಟ್ಟಾಗಿ ಸೇರಿ ಅತ್ಯಂತ ಜಾಗರೂಕತೆಯಿಂದ ನಡೆಸಿಕೊಡುತ್ತಿದ್ದ ಈ ಗಣೇಶೋತ್ಸವ ಸಾಕಷ್ಟು ಪ್ರಸಿದ್ಧಿಯನ್ನು ಪಡೆದಿತ್ತಂತೆ..  ಅಂತ ಅಂದಿನ ಸಾರ್ವಜನಿಕ ಗಣೇಶೋತ್ಸವ ಕಣ್ತುಂಬಿಕೊಂಡ ಹಿರಿಯರು ಹೇಳುತ್ತಿದ್ದರೆ.... ಕೇಳೋಕೆ ತುಂಬ ಖುಶಿ ಆಗತ್ತೆ.. ಅಂದು ಇನ್ನೆಷ್ಟು ಸೊಗಸಾಗಿದ್ದರಬಹುದು ಅಲ್ವಾ..
ಇಂದಿನ ಹಿರಿಯರಲ್ಲಿ ಅಂದಿನ ಗಣೇಶೋತ್ಸವದ ನೆನಪು.. ಈ ವರ್ಷ ತರಿಸಿದೆಯಂತೆ.. ಅದಕ್ಕೆ ಕಾರಣ ನಗರದ ಚೇತನಾ ಬಳಗ..
ಹೆಸರಿಗೆ ತಕ್ಕಂತೆ ಎಲ್ಲರು ಉತ್ಸಾಹಿ ಯುವಕರೇ ತುಂಬಿರುವ. ಈ ಚೇತನ ಬಳಗ ಈವರ್ಷ ಒಂದಷ್ಟು ಸುದ್ದಿ ಮಾಡಿದೆ.. 1997 ರಲ್ಲಿ ಪ್ರಾರಂಭವಾದ ಈ ಗಣೇಶೋತ್ಸವ ಕಾರ್ಯಕ್ರಮ ಸತತ 21 ವರ್ಷಗಳಿಂದ ಆಚರಿಸಿಕೊಂಡು ಬಂದಿದ್ದಾರೆ. ಮೊದಲೆಲ್ಲ ಸಾದರಣವಾಗಿ ಇರುತ್ತಿದ್ದ ಈ ಗಣೇಶೋತ್ಸವ  ವರ್ಷ ಕಳೆದಂತೆ ವಿಭಿನ್ನ ವಾದ ಕಾರ್ಯಕ್ರಮಗಳನ್ನು ಕೊಟ್ಟು ನಗರದ ಜನತೆಯ ಮೆಚ್ಚುಗೆ ಕಾರಣವಾಗಿದೆ... ಅದರಲ್ಲೂ ಈ ವರ್ಷ ತುಂಬಾ ಅದ್ದೂರಿಯಾಗಿ ಗಣೇಶೋತ್ಸವ ಆಚರಿಸಿದ್ದು ಮಾತ್ರ ಗಮನಸೆಳೆಯುವಂತಿತ್ತು...  ಹಾಗೂ ಈ ಸಾರಿ ಜನರ ಆಕರ್ಷಣೆಯಾಗಿದ್ದು ಮಾತ್ರ ಕೊನೆ ದಿನದ ಗಣೇಶನ ವಿಸರ್ಜನೆ ಕಾರ್ಯಕ್ರಮ..  ನಗರದ ಇತಿಹಾಸದಲ್ಲೆ ಇದೇ ಮೊದಲು ದೂರದ ಮಂಗಳೂರಿನಿಂದ ಬಂದ ಕರಾವಳಿಯ ಆಯ್ದ ಕಲಾತಂಡಗಳಿಂದ ಚಂಡೆ, ನಾಸಿಕ್, ಬ್ಯಾಂಡ್, ಗೊಂಬೆ ಕುಣಿತ,  ಹುಲಿವೇಷಗಳೊಂದಿಗೆ .. ಅಬ್ಬರದ ಮೆರವಣಿಗೆ ನಗರ ಜನರನ್ನು ಮೂಕವಿಸ್ಮಿತರನ್ನಾಗಿ ಮಾಡಿದ್ದಂತು ನಿಜ.. ಅದರಲ್ಲೂ ಚಂಡೆವಾದನದೊಂದಿಗೆ ಸಮ್ಮಿಳಿತಗೊಂಡ ನೃತ್ಯವೈಭವವಂತೂ ಇಡೀ ನಗರವನ್ನೇ ತುಂಬಿಕೊಂಡುಬಿಟ್ಟಿದೆ.. ಅದರಲ್ಲೂ ನಮ್ಮೂರಿನ ಕಲಾವಿದ ಹರೀಶ್ ನರಹರಿರಾವ್ ನಿರ್ಮಿಸಿದ ಮೆರವಣಿಗೆಯ ಗಣಪತಿಯ ಮುಖಮಂಟಪ ಆಕರ್ಷಕವಾಗಿತ್ತು.. ಜನಮನ ರಂಜಿಸಿದ ಈಬಾರಿಯ ಗಣೇಶೋತ್ಸವ.. ಮುಂದುವರೆಯಲಿ.. ಮತ್ತಷ್ಟು ವಿಶೇಷತೆಯನ್ನು ಹೊತ್ತುತರಲಿ ಅಲ್ಲವೇ..!

ಚಿತ್ರ-ಬರಹ
ಕಾರ್ತಿಕ್ 'ನಮ್' ನಗರ

Wednesday, June 17, 2015

ಇಲ್ಲಿದೆ ನೋಡಿ.... ಹೆತ್ತ ಕರುಳಿಗೆ ಕೊಳ್ಳಿ ಇಡುವಂತ ಬದುಕು

ಈ ಎರಡು ಕಂದಮ್ಮಗಳ ಜೀವ ಹಿಂಡುತ್ತಿರುವ ಕಲ್ಲುಮೂಳೆ ಕಾಯಿಲೆ
ಪ್ರತಿದಿನ ಕಣ್ಣೀರಲ್ಲಿ ಕೈತೊಳೆಯುತ್ತಿರುವ ಬಡ ಕುಟುಂಬದ ದಶಕದ ಗೋಳು
ಖಾಯಿಲೆ ಚಿಕಿತ್ಸೆಗೆ ಬೇಕು ತಲಾ ರು.15 ಲಕ್ಷ. ವಾರ್ಷಿಕ ಚಿಕಿತ್ಸಾ ನಿರ್ವಹಣೆಗೆ ಬೇಕು ತಲಾ 1 ಲಕ್ಷ
 ಪ್ರತಿ ಕುಟುಂಬದಲ್ಲು ಕೀರ್ತಿಗೊಬ್ಬ ಮಗ, ಆರತಿಗೊಬ್ಬಳು ಮಗಳು ಇದ್ದರೆ ಎಷ್ಟು ಚೆನ್ನ ಎಂಬುದು ಬಹುತೇಕರ ಬಯಕೆ. ಆದರೆ ಇಲ್ಲೊಂದು ಕುಟುಂಬದಲ್ಲಿ ಎರಡು ಮುದ್ದಾದ ಮಕ್ಕಳು. ಆದರೆ ಕ್ರೂರ ವಿಧಿಗೆ ಸಾಕ್ಷಿ ಎಂಬಂತೆ ಈ ಮಕ್ಕಳಿಗೆ ಲಕ್ಷ ಮಂದಿಗೆ ಒಬ್ಬರಿಗೆ ಕಾಣಿಸಿಕೊಳ್ಳಬಹುದಾದ ರೋಗ ಕಾಣಿಸಿಕೊಂಡು ಜೀವ ಹಿಂಡುತ್ತಿದೆ.


 ಶಿವಮೊಗ್ಗ ಜಿಲ್ಲೆ ಹೊಸನಗರ ಪಟ್ಟಣಕ್ಕೆ ಸಮೀಪವಿರುವ ಗಂಗನಕೊಪ್ಪದಲ್ಲಿರುವ ಕೂಲಿ ಮಾಡಿ ಜೀವನ ಸಾಗಿಸುತ್ತಿರುವ ಕೃಷ್ಣ ಮತ್ತು ವನಿತಾ ಕುಟುಂಬದ ನರಕ ಸದೃಶ ಬದುಕಿನ ಯಾತನೆ ಇದು.
ಕೃಷ್ಣ ಮತ್ತು ವನಿತಾ ಮದುವೆಯಾಗಿ 14 ವರ್ಷ. ಮೊದಲು ಹುಟ್ಟಿದ ನಂದೀಶ್ ಗೆ ಈಗ 12ರ ಪ್ರಾಯ. ಆದರೆ ಬೆಳವಣಿಗೆ ಕಾಣದೆ ಈಗಲು ಮುದ್ದು ಮಗುವಿನಂತೆ ಕಾಣುತ್ತಾನೆ. ಮೊದಲೆರಡು ವರ್ಷ ಆಡಿ ಬೆಳದ ನಂದೀಶ್ 2 ವರ್ಷ ವಿರುವಾಗಿಲೆ ಮುಖ ಊದಿಕೊಳ್ಳುವುದು. ಕಾಲು ದಪ್ಪಗಾಗುವುದು ಕಂಡುಬಂದಿತು. ಅಲ್ಲಿಂದಲೇ ಆಸ್ಪತ್ರೆ ಅಲೆದಾಟ ಶುರುವಾಯ್ತು. ನಂತರ ಹುಟ್ಟಿದ ಮಗು ಕಾವ್ಯಾಗೆ 8 ವರ್ಷ ಪ್ರಾಯ. ಐದಾರು ವರ್ಷ ಉತ್ತಮ ಆರೋಗ್ಯ ಹೊಂದಿದ್ದಳು. ನಂತರ ಅಣ್ಣನ ಹಾಗೆ ರೋಗಬಾಧೆಗೆ ತುತ್ತಾಗಿದ್ದು ಬಡ ತಂದೆತಾಯಿಯ ಹೃದಯ ಬಡಿತವೇ ನಿಂತುಹೋದಂತಾಗಿದೆ.
ಆಸ್ಪತ್ರೆ ಅಲೆದಾಟ:
ಕಳೆದ ಹತ್ತು ವರ್ಷದಿಂದ ಸ್ಥಳೀಯ ಆಸ್ಪತ್ರೆಗಳು, ಹಳ್ಳಿ ಔಷಧಕ್ಕಾಗಿ ಅಲೆದಾಡಿದ್ದಕ್ಕೆ ಲೆಕ್ಕವಿಲ್ಲ. ಮಂಗಳೂರಿನ ವೆನ್ಲಾಕ್ ಆಸ್ಪತ್ರೆ ಸೇರಿದಂತೆ ಬಹುತೇಕ ಆಸ್ಪತ್ರೆಗೆ ಎಡತಾಕಿ ಮಕ್ಕಳ ರೋಗಮುಕ್ತಿಗೆ ಪರದಾಡಿದರು ಪ್ರಯೋಜನವಾಗಿಲ್ಲ. ಪ್ರತಿಸಲ ಆಸ್ಪತ್ರೆಗೆ ದಾಖಲಿಸಿದಾಗಲೂ ರು.50 ರಿಂದ 60 ಸಾವಿರ ಖಚರ್ು ಮಾಡಬೇಕು. ಒಂದು ಕಡೆ ಮಕ್ಕಳ ಹದಗೆಟ್ಟ ಆರೋಗ್ಯ. ಇನ್ನೊಂದಡೆ ಸಾವಿರ ರುಪಾಯಿನ್ನು ಒಟ್ಟುಗೂಡಿಸಲಾಗದ ಪರಿಸ್ಥಿತಿ. ಒಟ್ಟಾರೆ ಇಡೀ ಕುಟುಂಬವೇ ಸಂಪೂರ್ಣ ಬೆತ್ತಲಾಗಿದೆ.
ಕಣ್ಣು ಕಳೆದುಕೊಂಡರು:
ಮೊದನಲೆ ಮಗ ನಂದೀಶ್ ಹುಟ್ಟಿದಾಗ ಕಣ್ಣುಗಳ ದೃಷ್ಟಿ ಉತ್ತಮವಾಗಿತ್ತು. ಆದರೆ ರೋಗ ಬಾಧೆಯಿಂದಾಗಿ ತನ್ನ ಎರಡು ಕಣ್ಣುಗಳ ದೃಷ್ಟಿ ಕಳೆದುಕೊಂಡಿದ್ದಾನೆ. ಇದ್ದುದರಲ್ಲಿ ಚ್ಯೂಟಿಯಾಗಿರುವ ಕಾವ್ಯಾಳ ಒಂದು ಕಣ್ಣು ಈಗಾಗಲೇ ದೃಷ್ಟಿ ಕಳೆದುಕೊಂಡಿದೆ. ಮೊದಲು ಶಾಲೆಗೆ ಹೋಗಿ ಬರುತ್ತಿದ್ದ ಕಾವ್ಯಾಳಿಗೆ ಈಗ ಸಾಧ್ಯವಾಗುತ್ತಿಲ್ಲ. ಕೈಕಾಲು ಸ್ವಾಧೀನ ತಪ್ಪುತ್ತಿರುವ ಕಾರಣ ತಂದೆತಾಯಿ ಹೊತ್ತೆ ತಿರುಗಬೇಕು. ಕೆಲವು ಸಮಯ ಶಿಕ್ಷಕರೇ ಮನೆಗೆ ಬಂದು ಪಾಠ ಹೇಳುತ್ತಿದ್ದರು. ಅದು ಕೂಡ ಈಗ ಸಾಧ್ಯವಾಗುತ್ತಿಲ್ಲ. ಆರೋಗ್ಯ ಶಿಕ್ಷಣದಿಂದ ವಂಚಿತರಾಗುತ್ತಿರುವ ಮಕ್ಕಳನ್ನು ನೋಡುತ್ತ ತಂದೆತಾಯಿ  ಬದುಕು ಕೂಡ ಮೂರಾಬಟ್ಟೆಯಾಗಿದೆ.
ಏನಿದು ಕಾಯಿಲೆ?
ಕಳೆದ ಫೆಬ್ರವರಿಯಲ್ಲಿ ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಿದ ಮೇಲೆ ಇದು ಕಲ್ಲುಮೂಳೆ ಕಾಯಿಲೆ ಎನ್ನಲಾದ ಆಸ್ಟಿಯೋಪೆಟ್ರೋಸಿಸ್  ಎಂದು ತಿಳಿದು ಬಂದಿದೆ. ವೈದ್ಯರೇ ಹೇಳುವಂತೆ ಬೋನ್ ಮ್ಯಾರೋ ಟ್ರಾನ್ಸ್ ಪ್ಲಾಂಟ್ ಮಾಡಲು ಎರಡು ಮಕ್ಕಳಿಂದ ತಲಾ 15 ಲಕ್ಷ ಒಟ್ಟು 30 ಲಕ್ಷ ರೂಪಾಯಿ ಖರ್ಚು ಮಾಡಬೇಕಾಗುತ್ತದೆ. ಅಲ್ಲದೆ ವಾರ್ಷಿಕ ಔಷಧಿ ಮತ್ತು ಚಿಕಿತ್ಸೆ ನಿರ್ವಹಣೆಗಾಗಿ ತಲಾ 1 ಲಕ್ಷ ರೂಪಾಯಿ ಬೇಕು. ಆದರೆ ಈ ವೆಚ್ಚದ ಮಾಹಿತಿ ಕಂಡು ಬಡಕುಟುಂಬಕ್ಕೆ ದಿಕ್ಕು ತೋಚದಂತಾಗಿದೆ.
ಕಡು ಬಡತನ:
ಗಂಗನಕೊಪ್ಪದ ನಿವಾಸಿ ಕೃಷ್ಣ ಹೇಳಿಕೇಳಿ ಕೂಲಿಗಾರ. ಬರುವ ಸಂಬಳಕ್ಕೆ ಹೊಟ್ಟೆತುಂಬ ಊಟಮಾಡಿ ಮಲಗುವುದೆ ದೊಡ್ಡ ಸಾಹಸ. ಆದರೆ ತನ್ನ ಎರಡು ಮಕ್ಕಳ ಖಾಯಿಲೆಗೆ ಈಗಾಗಲೇ ಕಂಡಕಂಡವರ ಕೈಕಾಲು ಹಿಡಿದು ಲಕ್ಷಾಂತರ ರುಪಾಯಿ ಖರ್ಚು ಮಾಡಿದ್ದಾರೆ. ಆದರೆ ಮಕ್ಕಳು ಮಾತ್ರ ಅದೇ ರೋಗ ಬಾಧೆಯಿಂದ ಬಳಲುತ್ತಿದ್ದಾರೆ. ಈಗ ಖಾಯಿಲೆ ಚಿಕಿತ್ಸೆಗೆ ಎರಡು ಮಕ್ಕಳಿಂದ 30 ಲಕ್ಷ ದುಡ್ಡು ಬೇಕು ಎಂದು ಕೇಳಿ ಗರಬಡಿದು ಕೂತಿದ್ದಾರೆ.
ಇನ್ನು ಮಕ್ಕಳ ಲಾಲನೆ ಪಾಲನೆಯಲ್ಲಿ ಕಾಲ ಕಳೆಯುತ್ತಿರುವ ತಾಯಿ ರೇವತಿ ಮಕ್ಕಳ ಬಗ್ಗೆ ಮಾತನಾಡುವ ಸ್ಥಿತಿಯಲ್ಲಿಲ್ಲ. ಏನು ಕೇಳಿದರು ಎದೆಬಡಿದುಕೊಂಡು ಅಳುವುದೆ ಅವರ ಉತ್ತರ. ತನ್ನೆರಡು ಮಕ್ಕಳ ಸ್ಥಿತಿ ನೋಡಿ ಏನು ಮಾಡಲಾಗದೆ ಕುಗ್ಗಿ ಹೋಗುತ್ತಿರುವ ಕುಟುಂಬ ಸಾಂತ್ವಾನ ಬೇಡುತ್ತಿದೆ. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಎಲ್ಲರ ಮೊರೆ ಹೋಗುವಂತಾಗಿದೆ ಆದರೆ ಇಲ್ಲಿಯವರೆಗೆ ಯಾವುದೆ ಪ್ರಯೋಜನವಿಲ್ಲ.
ನೆರವು ನೀಡುವಿರಾ?
ಆಟ, ಊಟ, ಪಾಠ ಮಾಡಿಕೊಂಡು ಓಡಾಡಿಕೊಂಡು ಇರಬೇಕಾದ ಮಕ್ಕಳಿಬ್ಬರು ಭೀಕರ ಕಾಯಿಲೆಯಿಂದ ನಲುತ್ತಿರುವುದನ್ನು ನೋಡಿದರೆ ಎಂತವರ ಹೃದಯವು ಕರಗಲೇಬೇಕು. ನೆರವು ನೀಡುವವರು ನಂದೀಶ್ ಮತ್ತು ತಾಯಿ ಜಂಟಿ ಖಾತೆ ಇರುವ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಹೊಸನಗರ ಶಾಖೆ ಹಣ ಕಳುಹಿಸಬಹುದು. SBMY0040307- 64106579263 ಕ್ಕೆ ಜಮಾ ಮಾಡಬಹುದು. ಮಾಹಿತಿ ತಿಳಿಯಲು 9964439782
ಸಹಾಯ ಮಾಡುವ ಮನಸ್ಸಿದ್ದವರು ಮೊದಲು ಖಾತ್ರಿ ಮಾಡಿಕೊಳ್ಳಿ. ಬಡಕುಟುಂಬದ ದಶಕದ ಬವಣೆಗೆ ಸಹಕರಿಸಿ.

ಇವರೇನಂತಾರೆ:
ನಾವು ಪಾಪಿಗಳು
ಹತ್ತು ವರ್ಷದಿಂದ ಮಕ್ಕಳ ನೋವಿನ ಆಕ್ರಂದನ ಕೇಳಲು ಸಾಧ್ಯವಾಗುತ್ತಿಲ್ಲ. ಶಕ್ತಿಮೀರಿ ನಮ್ಮ ಪ್ರಯತ್ನ ಮಾಡಿದ್ದೇವೆ. ಇನ್ನು ನಮ್ಮಿಂದ ಚಿಕಿತ್ಸೆ ನೀಡುವುದು ಸಾಧ್ಯವಿಲ್ಲ. ನಾವು ಪಾಪಿಗಳು
ಕೃಷ್ಣ ದಂಪತಿಗಳು
ರೋಗ ಪೀಡಿತ ಮಕ್ಕಳ ತಂದೆ.

ಸರ್ಕಾರ ಗಮನ ಹರಿಸಲಿ
ಕಳೆದ ಹತ್ತು ವರ್ಷದಿಂದ ಈ ಕುಟುಂಬವನ್ನ ನೋಡುತ್ತಾ ಬಂದಿದ್ದೇನೆ. ಮಕ್ಕಳ ಅನಾರೋಗ್ಯ ಕುಟುಂಬದ ನೆಮ್ಮದಿಯನ್ನೆ ಹಾಳು ಮಾಡಿದೆ. ಸಾಲ ಸೋಲ ಮಾಡಿ ಬೀದಿಗೆ ಬಂದಿದ್ದಾರೆ. ಹೆಚ್ಚಿನ ಚಿಕಿತ್ಸೆಗೆ ಸರ್ಕಾರ  ತುರ್ತು ಸ್ಪಂದಿಸುವ ಅಗತ್ಯವಿದೆ.
ಉಮೇಶ್
ಗ್ರಾಪಂ ಸದಸ್ಯರು ಗಂಗನಕೊಪ್ಪ
9591754602

ಲಕ್ಷಕೊಬ್ಬರಿಗೆ ಕಾಯಿಲೆ
ಕಲ್ಲು ಮೂಳೆ ಕಾಯಿಲೆ ಲಕ್ಷಂತಾರ ಮಂದಿಯಲ್ಲಿ ಒಬ್ಬರಿಗೆ ಬರುತ್ತದೆ.  ಇದು ತುಂಬಾ ಅಪರೂಪ. ಅಲ್ಲದೆ ತಕ್ಕಮಟ್ಟಿಗೆ ವಾಸಿ ಮಾಡಬೇಕೆಂದರು ದುಬಾರಿ ವೆಚ್ಚ ಮಾಡಬೇಕು. ಬಡಕುಟುಂಬಕ್ಕೆ ಈ ಕಾಯಿಲೆ ಬಂದಿರುವುದು ವಿಧಿಯ ಅಟ್ಟಹಾಸ ಎನ್ನಬೇಕು.
ಡಾ.ಪ್ರವೀಣ್ ಹೊಸನಗರ
9448571695


Sunday, May 24, 2015

ಮನಮೋಹಕ ಕುಂಚಿಕಲ್ ಜಲಪಾತ... ಚಾರಣಿಗರ ಹಾಟ್ ಸ್ಪಾಟ್

ಕುಂಚಿಕಲ್ ಜಲಪಾತ
ಭಾರತದ ಅತ್ಯಂತ ದೊಡ್ಡ ಜಲಪಾತಯಾವುದು ಅಂತ ನಿಮಗೆ ಕೇಳಿದ್ರೆ,ನೀವು
ಜೋಗ ಜಲಪಾತ ಅಂತೀರ. ಅಲ್ವಾ......?
ಇದು ನಿಜಕ್ಕೂ ತಪ್ಪು.

ಹೊಸನಗರ ತಾಲೂಕು ಯಡೂರಿನಿಂದ ಅಡ್ಠಲಾಗಿ ಸುಮಾರು 5 ಕಿ
ಮಿ ಸಾಗಿದರೆ ಪ್ರಸಿಧ್ಧವಾದ ಮಾಣಿ ಜಲಾಶಯ
ಇದೆ. ಅಲ್ಲಿಂದ ಸುಮಾರು 3
ಕಿ.ಮೀ.ಪ್ರಯಾಣ ಮಾಡಿದರೆ ಈ ಕುಂಚಿಕಲ್
ಜಲಪಾತ ಸಿಗುತ್ತದೆ. ಸುಮಾರು 1450 ಅಡಿ
ಎತ್ತರವಿದೆ. (ಜೋಗ 829 ಅಡಿ).ಸುಂದರ
ಪ್ರಕೃತಿಯ ಮಡಿಲಿನಲ್ಲಿ ದಟ್ಟ ಕಾಡಿನ ಮಧ್ಯೆ
ವರಾಹಿ ನದಿಯ ಹಿನ್ನೀರಿನಲ್ಲಿ ರಚಿತವಾದ ಈ
ಜಲಪಾತ
ನೋಡಲು ತುಂಬ ಸೊಗಸಾಗಿದೆ.ಚಂದ್ರನ
ಆಕೃತಿಯಲ್ಲಿ ಬೀಳುವ ನೀರಿನಿಂದ
ಹೊರಹೊಮ್ಮುವ ಆ ದೃಶ್ಯ ನಿಜಕ್ಕೊ
ಸುಂದರವಾಗಿದೆ.ದಿಂದ
ಸೂರ್ಯ ಮುಳುಗುವ ನಿಜಕ್ಕೂ
ಮನಸ್ಸಿಗೆ ಮುದ ನಿಡುತ್ತದೆ.
ಇದು ಜನಪ್ರಿಯತೆ ಪಡೆದಿಲ್ಲ. ಹೋಗಲಿ, ಇದಕ್ಕೆ
ಕಾರಣ ಏನಿರಬಹುದು?
೧೪೯೩ ಅಡಿ ಎತ್ತರದಿಂದ ಧುಮ್ಮಿಕ್ಕುವ
ಭಾರತದ ಅತಿ ಎತ್ತರದ ಜಲಪಾತದ
ಹೆಸರನ್ನೇ ಎಷ್ಟೋ ಜನ ಕೇಳಿಲ್ಲ ಅಂದ
ಮೇಲೆ ನಮ್ಮ ಸರ್ಕಾರ ಏನ್ ಮಾಡ್ತಿದೆ?
ಜೋಗಕ್ಕಾದ್ರೆ ಸುಮಾರು ೧
ಕಿಲೋಮೀಟರ್ ದೂರದವರೆಗೆ ರಾಷ್ಟ್ರೀಯ
ಹೆದ್ದಾರಿ ಇದೆ. ಕುಂಚಿಕಲ್ಲಿಗೆ? ಮೊದಲೇ
ಘಾಟಿ ಹತ್ರ ಇರೋ ಜಾಗ, ಅಂಥದ್ರಲ್ಲಿ
ರಸ್ತೆ ಬೇರೆ ಸರಿ ಇಲ್ಲ ಅಂದ್ರೆ ಯಾರ್
ಹೋಗ್ತಾರೆ ಹೇಳಿ? ಇನ್ನು ಚಾರಣಕ್ಕೆ
ಹೋಗುವವರಿಗಾದರೂ ಆ ಸ್ಥಳದ ಬಗ್ಗೆ
ಮಾಹಿತಿ ಬೇಡವೆ? ಕರ್ನಾಟಕ
ಪ್ರವಾಸೋದ್ಯಮ ಇಲಾಖೆಯ ದೃಷ್ಟಿಗೆ
ಇನ್ನೂ ಈ ಕುಂಚಿಕಲ್ ಜಲಪಾತ ಬಿದ್ದಿಲ್ವೆ?
ನಮ್ಮ ಸುತ್ತಮುತ್ತಲಿನ ಸ್ಥಳಗಳು ನಮಗೇ
ಗೊತ್ತಿಲ್ಲದಿದ್ದರೆ ಇತರರಿಗೆ
ತಿಳಿಯುವುದಾದರೂ ಹೇಗೆ? ಜೋಗದ ಸಿರಿ
ಬೆಳಕಿನಲ್ಲಿ ಇಂಥ ಎಷ್ಟೋ ಜಲಪಾತಗಳು
ಮಬ್ಬಾಗಿವೆ.
.................................
ಚಿತ್ತ - ಬರಹ
-ಶರತ್ ರಾಜ್ ಯಡೂರು
.................................

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಹಿರಿಯ ಪತ್ರಕರ್ತ, ಸಾಹಿತಿ, ಕಥೆಗಾರ ಹೀಗೆ ಬಹುಮುಖ ಪ್ರತಿಭೆ ಲಕ್ಷ್ಮಣ ಕೊಡಸೆ ಇವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿಷ್ಠಿತ ಶ್ರೀ ನಾಗಡಿಕೆರೆ ಕಿಟ್ಟಪ್ಪ ರುಕ್ಷ್ಮಿಣಿ ದತ್ತಿನಿಧಿ ಪ್ರಶಸ್ತಿ ಲಭಿಸಿದೆ. ನಮ್ಮ ಶಿವಮೊಗ್ಗ ಜಿಲ್ಲೆಯ ಹೆಮ್ಮೆಯ ಪ್ರತೀಕ ದಂತಿರುವ ಲಕ್ಷ್ಮಣ ಕೊಡಸೆ ಯವರ ಬದುಕು, ಬರಹದ ಬಗ್ಗೆ ಇಲ್ಲಿ ಬೆಳಕು ಚೆಲ್ಲುವ ಪ್ರಯತ್ನ ಮಾಡಲಾಗಿದೆ.

ಶ್ರೀಯುತ ಲಕ್ಷ್ಮಣ ಕೊಡಸೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಕೊಡಸೆ ಗ್ರಾಮದವರು. ಇವರು ಹುಟ್ಟಿದ್ದು 25.04.1953ರಲ್ಲಿ

ಕಥೆಗಾರ ಲಕ್ಷ್ಮಣ ಕೊಡಸೆಯವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಕೊಡಸೆ ಎಂಬ ಗ್ರಾಮದಲ್ಲಿ. ತಂದೆ ಕರಿಯನಾಯ್ಕ, ತಾಯಿ ಭರ್ಮಮ್ಮ. ತಂದೆ ಅಲ್ಪಸ್ವಲ್ಪ ವಿದ್ಯೆ ಕಲಿತುದರ ಫಲವೇ ಮಗನನ್ನು ವಿದ್ಯಾವಂತನನ್ನಾಗಿಸ ಬೇಕೆಂಬ ಆಸೆ. ಶಾಲೆಗೆ ಸೇರಿದ್ದು ಹೊಸನಗರ ತಾಲ್ಲೂಕಿನ ರಿಪ್ಪನ್ ಪೇಟೆ ಸರ್ಕಾರಿ ಪ್ರೌಢಶಾಲೆಗೆ. ವಾಹನ ಸೌಕರ‍್ಯವಿರದಿದ್ದ ಕಾಲ. ಓದಿನ ಹಂಬಲದಿಂದ ನಡೆದೇ ಶಾಲೆಗೆ ಹೋಗಿ ಎಸ್.ಎಸ್.ಎಲ್.ಸಿ. ತೇರ್ಗಡೆ. ತಂದೆಗೆ ಹಿಡಿಸಲಾರದ ಸಂತಸ. ಕಾಲೇಜಿಗೆ ಸೇರಿದ್ದು ಬೆಂಗಳೂರಿನ ರೇಣುಕಾಚಾರ‍್ಯ ಕಾಲೇಜಿಗೆ ಪಿ.ಯು.ಗಾಗಿ. ಓದಲು ದೂರದೂರಿಗೆ ಹೋಗಿ ಬಿಡುತ್ತಾನೆಂದು ತಾಯಿಗೆ ದುಃಖ, ಮಗ ಓದಿ ಮುಂದೆ ಬರುತ್ತಾನೆಂದು ತಂದೆಗೆ ಸಂತಸ. ರಜಕ್ಕೆ ಊರಿಗೆ ಹೋದರೆ ಮನೆಯಲ್ಲಿ ಹಬ್ಬದ ವಾತಾವರಣ. ಬೆಂಗಳೂರಿನ ಸೆಂಟ್ರಲ್ ಕಾಲೇಜಿನಿಂದ ಬಿ.ಎ. (ಆನರ್ಸ್‌) ಪದವಿ. ಜ್ಞಾನಭಾರತಿ, ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಿಂದ ಎಂ.ಎ. ಪದವಿ.

ವಿದ್ಯಾರ್ಥಿ ದೆಸೆಯಿಂದಲೇ ಸಾಹಿತ್ಯದಲ್ಲಿ ಆಸಕ್ತಿ. 1972ರಲ್ಲಿ ವಿಶ್ವವಿದ್ಯಾಲಯ ಮಟ್ಟದಲ್ಲಿ ಎಂ.ಇ.ಎಸ್. ಕಾಲೇಜು ನಡೆಸಿದ ಕಥಾ ಸ್ಪರ್ಧೆಯಲ್ಲಿ ಮೊದಲ ಬಹುಮಾನ. ನಂತರ ಬರೆದದ್ದು ಹಲವಾರು ಸಣ್ಣಕಥೆಗಳು. ಹಲವಾರು ಸಂಘ ಸಂಸ್ಥೆಗಳೊಡನೆ ಒಡನಾಟ. ಉದಯಕಲಾ ಸಂಘ, ಯುವ ಬರಹಗಾರರು ಮತ್ತು ಕಲಾವಿದರ ಸಂಘದ ಸಕ್ರಿಯ ಸದಸ್ಯ. ಛಾಯಾಗ್ರಹಣ ಮತ್ತು ಯಕ್ಷಗಾನ ಕಲೆಯಲ್ಲಿ ವಿಶೇಷ ಆಸಕ್ತಿ.
ಉದ್ಯೋಗಕ್ಕಾಗಿ ಆಯ್ದುಕೊಂಡದ್ದು ಪತ್ರಿಕಾರಂಗ. ಕೆಲಕಾಲ ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸುತ್ತಿರುವ ಸಾಹಿತ್ಯ ಪರಿಷತ್ ಪತ್ರಿಕೆಯ ಗೌರವ ಸಂಪಾದಕರಾಗಿ ಪ್ರೊ. ದೊಡ್ಡರಂಗೇ ಗೌಡರೊಡನೆ ಪಡೆದ ಅನುಭವ. ನಂತರ ೧೯೭೮ರಲ್ಲಿ ಸೇರಿದ್ದು ಪ್ರಜಾವಾಣಿಯ ಬಳಗ. ಉಪಸಂಪಾದಕರಾಗಿ, ಮುಖ್ಯವರದಿಗಾರರಾಗಿ, ಸುದ್ದಿ ವಿಭಾಗದ ಮುಖ್ಯಸ್ಥರಾಗಿ ಇದೀಗ ಸಹಾಯಕ ಸಂಪಾದಕರಾಗಿ ಕಾರ್ಯನಿರ್ವಹಣೆ.
ಹಲವಾರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರತಿನಿಯಾಗಿ ಭಾಗವಹಿಸಿದ ಅನುಭವ. ದೆಹಲಿ ಮತ್ತು ತಿರುವನಂತಪುರದಲ್ಲಿ ನಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಸುದ್ದಿ ವಿವರಗಳನ್ನು ವಿಶೇಷ ರೀತಿಯಲ್ಲಿ ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟಿಸಿದ ಹೆಗ್ಗಳಿಕೆ. ಪ್ರಕಟಿತ ಕಥಾಸಂಕಲನಗಳು-೧೯೮೨ರಲ್ಲಿ ಬಲಿ ಮತ್ತು ೧೯೯೯ರಲ್ಲಿ ಮೈತ್ರಿ, ಇನ್ನಷ್ಟು ಕಥೆಗಳು ಸಂಕಲನ ರೂಪದಲ್ಲಿ ಹೊರಬರಲು ಕಾದು ಕುಳಿತಿವೆ. ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯರೊಡನೆ ಕ್ರಿಸ್ತನ ಕುರಿತಾದ ಕವನ ಸಂಕಲನ ಸಂಪಾದಿತ ಕೃತಿ ‘ಕ್ರಿಸ್ತಾಂಜಲಿ.’
ಬಿಡುವಿನ ವೇಳೆಯಲ್ಲಿ ಕೃಷಿ
................................................
ಲೇಖಕರು: ವೈ.ಎನ್.ಗುಂಡೂರಾವ್
...............................................
ಜೂನ್ 4 ರಂದು ಪ್ರಶಸ್ತಿ ಪ್ರಧಾನ;
ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಕೊಡಮಾಡುವ ಪ್ರತಿಷ್ಠಿತ ಶ್ರೀ ನಾಗಡಿಕೆರೆ ಕಿಟ್ಟಪ್ಪ ರುಕ್ಷ್ಮಿಣಿ ದತ್ತಿನಿಧಿ ಪ್ರಶಸ್ತಿ ಪ್ರಧಾನ ಸಮಾರಂಭ ಜೂನ್ 4 2015 ರಂದು ಬೆಂಗಳೂರಿನ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ನಡೆಯಲಿದೆ. ನಗದು ರೂ.10000 ಜೊತೆಗೆ ಪ್ರಶಸ್ತಿ ಫಲಕ ನೀಡಿ ಗೌರವಿಸಲಾಗುವುದು. ಪ್ರಶಸ್ತಿ ಭಾಜನರಾಗಿರುವ ಲಕ್ಷಣಕೊಡಸೆಯವರಿಗೆ ಅಭಿನಂದನೆಗಳು.
ನಮ್ಮ ಹೆಮ್ಮೆ ಕೊಡಸೆಯವರ ಸಾಧನೆಗೆ ಅಭಿನಂದನೆ ಸಲ್ಲಿಸಲು
09448484726.

...............................

ಲಕ್ಷ್ಮಣ ಕೊಡಸೆ ಸಾಹಿತ್ಯ ಕೃತಿಗಳು 
           1. ಕಥಾ ಸಂಕಲನಗಳು: ಐದು
1. ಬಲಿ (ಮಲ್ಲೇಪುರಂ ಜಿ. ವೆಂಕಟೇಶ ಅವರ ವಿಚಾರ ಪ್ರಕಾಶನ)- ಪ್ರತಿಗಳು ಮುಗಿದಿವೆ
2. ಮೈತ್ರಿ (1988) - ಪ್ರತಿಗಳು ಮುಗಿದಿವೆ
3. ವಿಚಾರಣೆ (ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಟಣೆ)
4. ಅವ್ವ (ಸಂಪರ್ಕಕ್ಕೆ ರಾಘವೇಂದ್ರ ಪ್ರಕಾಶನ, ಅಂಬಾರಕೊಡ್ಲ, ಅಂಕೋಲ, ಉತ್ತರ ಕನ್ನಡ ಜಿಲ್ಲೆ)
5. ಊರು-ಮನೆ (ಸಮಗ್ರ ಕಥೆಗಳ ಸಂಗ್ರಹ) ಸಂಪರ್ಕಕ್ಕೆ ದೇಸಿ ಪ್ರಕಾಶನ, ನಂ.121, 13ನೇ ಮುಖ್ಯರಸ್ತೆ, ಎಂ ಸಿ ಲೇಔಟ್, ವಿಜಯನಗರ, ಹಂಪಿನಗರ, ಬೆಂಗಳೂರು-560040) 

           2. ಕಾದಂಬರಿಗಳು: ಎಂಟು
6. ಪಯಣ (ಬೆಂಗಳೂರಿನ ಸುಮುಖ ಪ್ರಕಾಶನ -2008; ಇದು ಮಂಗಳೂರು ವಿವಿ ಬಿಕಾಂ ತರಗತಿಗಳಿಗೆ ಪಠ್ಯವೂ ಆಗಿದೆ 2011-2014)  
7. ಭೂಮಿ ಹುಣ್ಣಿಮೆ (ಸಂಪರ್ಕಕ್ಕೆ ರೂಪ ಪ್ರಕಾಶನ, ನಂ.26, 11ನೇ ಬ್ಲಾಕ್, ಡಾ.ರಾಜ್ ಕುಮಾರ್ ರಸ್ತೆ, ನಜರಾಬಾದ್ ಮೊಹಲ್ಲ, ಮೈಸೂರು -570013) 
8. ನೆರಳು (ಸಂಪರ್ಕಕ್ಕೆ ಮೈಸೂರಿನ ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ, ನಂ. 9, ರಮ್ಯ, ಗೋಕುಲಂ 3ನೇ ಹಂತ, ಮೈಸೂರು-570002)
9. ಪಾಡು (ಸಂಪರ್ಕಕ್ಕೆ ಮೈಸೂರಿನ ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ, ನಂ. 9, ರಮ್ಯ, ಗೋಕುಲಂ 3ನೇ ಹಂತ, ಮೈಸೂರು-570002)
10. ಹಾಲಪ್ಪ (ಸಂಪರ್ಕಕ್ಕೆ ಮೈಸೂರಿನ ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ, ನಂ. 9, ರಮ್ಯ, ಗೋಕುಲಂ 3ನೇ ಹಂತ, ಮೈಸೂರು-570002)
11. ಪಾಲು (ಸಂಪರ್ಕಕ್ಕೆ ಲಹರಿ ಪ್ರಕಾಶನ, ನಂ.240, 5ನೇ ಮುಖ್ಯರಸ್ತೆ, 2ನೇ ಅಡ್ಡರಸ್ತೆ, ಕಾಫಿಬೋಡರ್್ ಲೇಔಟ್, ಹೆಬ್ಬಾಳ, ಕೆಂಪಾಪುರ, ಬೆಂಗಳೂರು -560024)
12. ಕಾಮಾಕ್ಷಿ ಸಂಸಾರನೌಕೆ (ಸಂಪರ್ಕಕ್ಕೆ, ಸಿರಿವರ ಪ್ರಕಾಶನ, ನಂ. ಎಂ37/ಬಿ, 8ನೇ ಕ್ರಾಸ್, ಲಕ್ಷ್ಮೀನಾರಾಯಣಪುರ, ಬೆಂಗಳೂರು-5600021) 
13. ಶ್ರೀ ಚೌಡೇಶ್ವರಿ ಪ್ರಸನ್ನ (ಸಂಪರ್ಕಕ್ಕೆ ಸಿವಿಜಿ ಪ್ರಕಾಶನ, ಕಸ್ತೂರ ಬಾ ಭವನ, ಗಾಂಧಿಭವನ ಆವರಣ, ಕುಮಾರಪಾರ್ಕ್ ಪೂರ್ವ, ಬೆಂಗಳೂರು-560001)

            3. ಸಂಪಾದಿತ: ನಾಲ್ಕು
14. ಕ್ರಿಸ್ತಾಂಜಲಿ (ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಅವರೊಂದಿಗೆ ಸಂಪಾದಿತ. ಬೆಂಗಳೂರಿನ ಕ್ರೈಸ್ಟ್ ಕಾಲೇಜು ಕನ್ನಡ ಸಂಘದ ಪ್ರಕಟಣೆ)
15. ಕನ್ನಡ ವಿಮಶರ್ಾ ವಿವೇಕ (ನರಹಳ್ಳಿ ಗೌರವ ಗ್ರಂಥದ ಸಂಪಾದನೆ, ಬೆಂಗಳೂರಿನ ಸುಮುಖ ಪ್ರಕಾಶನ)
16. ಮಾಧ್ಯಮ (ಸಂಪಾದನೆ, ಡಾ.ಬಿ.ಕೆ.ರವಿ ಗೌರವ ಗ್ರಂಥ, ಪ್ರಕಾಶಕರು: ಹಂಸಲೇಖ)
17. ಹಾಸು ಹೊಕ್ಕು (ಇತರರೊಡನೆ ಸಂಪಾದನೆ, ಜಿ.ಆರ್.ಮಂಜೇಶ್ ಗೌರವ ಗ್ರಂಥ, ಸಿರಿವರ ಪ್ರಕಾಶನ) 
ಚಾರುಕೀರ್ತಿ ಸ್ವಾಮೀಜಿಯವರಿಂದ 1981ರಲ್ಲಿ ಪ್ರಶಸ್ತಿ ಸ್ವೀಕಾರ

            4. ಸಂಕೀರ್ಣ: ಹನ್ನೆರಡು
18. ಮೆಲುಕು (ನೆನಪುಗಳ ಸಂಕಲನ. ಸುಮುಖ ಪ್ರಕಾಶನ)
19. ಬಲ್ಲಿದರೊಡನೆ (ಪತ್ರಿಕಾ ಭಾಷೆಯಲ್ಲಿ ಪರಿಚಯ, ವ್ಯಕ್ತಿತ್ವ, ವಿಮರ್ಶೆ, ಬೆಂಗಳೂರಿನ ದಾಮಿನಿ ಪ್ರಕಾಶನ) 
20. ಟಿ.ಆರ್.ನರಸಿಂಹರಾಜು (ವ್ಯಕ್ತಿಚಿತ್ರ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಲಿ ಪ್ರಕಟಣೆ)
21. ಅಜಲು (ಪತ್ರಿಕಾ ಲೇಖನಗಳು, ಬೆಂಗಳೂರಿನ ಪ್ರೆಸ್ ಕ್ಲಬ್ ಪ್ರಕಟಣೆ)
22. ಕುವೆಂಪು ಮತ್ತು...(ವ್ಯಕ್ತಿ ಚಿತ್ರಣ, ವಿಮರ್ಶೆ, ಅನ್ನಪೂರ್ಣ ಪ್ರಕಾಶನ, ಸಿರಿಗೇರಿ, ಬಳ್ಳಾರಿ)
23. ರಾಜ ಉದ್ಯಮಿ ಜೆಪಿ (ವ್ಯಕ್ತಿಚಿತ್ರಣ, ಬೆಂಗಳೂರಿನ ಸ್ವರ್ಣವೇಣಿ ಪ್ರಕಾಶನ)
24. ಹಾಯಿ ದೋಣಿ (ಸಂಪರ್ಕಕ್ಕೆ ಮೈಸೂರಿನ ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ, ನಂ. 9, ರಮ್ಯ, ಗೋಕುಲಂ 3ನೇ ಹಂತ, ಮೈಸೂರು-570002)
25. ಅಪ್ಪನ ಪರಪಂಚ (ಸಂಪರ್ಕಕ್ಕೆ ಅಂಕಿತ ಪ್ರಕಾಶನ, 53, ಶಾಮ್ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು-560004)
26. ಗೆದ್ದವರು (ವ್ಯಕ್ತಿ ಚಿತ್ರಣಗಳು, ಸಿವಿಜಿ ಪ್ರಕಾಶನ, ಕಸ್ತೂರ ಬಾ ಭವನ, ಗಾಂಧಿಭವನ ಆವರಣ, ಕುಮಾರಪಾಕರ್್ ಪೂರ್ವ, ಬೆಂಗಳೂರು-560001)
27. ಆಗು ಹೋಗು (ಮಾಧ್ಯಮ ಚಿಂತನೆ, ವಿಸ್ಮಯ ಪಬ್ಲಿಕೇಷನ್ಸ್, ಬೆಂಗಳೂರು-2012)
28. ಅಬ್ದುಲ್ ಹಮೀದ್ (ಜೀವನಚಿತ್ರ) ಸಂಪರ್ಕಕ್ಕೆ ರಾಷ್ಟ್ರೋತ್ಥಾನ ಸಾಹಿತ್ಯ ಪ್ರಕಾಶನ, ಕೆಂಪೇಗೌಡ ನಗರ, ಬೆಂಗಳೂರು-560019)
29. ಸಹಪಥಿಕ (ಪ್ರವಾಸ ಕಥನ( ಸಂಪರ್ಕಕ್ಕೆ, ಐಸಿರಿ ಪ್ರಕಾಶನ, ನಂ.33(1126) 3ನೇ ಮಹಡಿ, 3ನೇ ಮುಖ್ಯರಸ್ತೆ, ಎಂಸಿ ಲೇಔಟ್, ವಿಜಯನಗರ, ಬೆಂಗಳೂರು-40)

ಲಕ್ಷ್ಮಣ ಕೊಡಸೆ ಅವರ ಬರಹಗಳ ಬಗ್ಗೆ ಹಿರಿಯ ಸಾಹಿತಿ ವಿಮರ್ಶಕರ ಅನಿಸಿಕೆ- ಅಭಿಪ್ರಾಯಗಳು

ಕತೆಗಳು

 ವರ್ತಮಾನದ ಪ್ರಶ್ನೆಗಳಾಗಿಯೂ ಮುಂದುವರಿದಿರುವ ಬದುಕಿನ ಒಂದಷ್ಟು ಅರ್ಥಹೀನ ಸಿದ್ಧ ನಂಬಿಕೆಗಳ ಬಗ್ಗೆ ಹಾಗೂ ಅವುಗಳಿಂದ ಬಿಡಿಸಿಕೊಳ್ಳಲು ಅಗತ್ಯವಿರುವ 'ಉತ್ತರಣಕ್ರಿಯೆ'ಗಳ ಬಗ್ಗೆ ಇಲ್ಲಿಯ ಕೆಲವು ಕತೆಗಳು ತುಂಬ ಎಚ್ಚರದಿಂದ ಮಾತನಾಡುತ್ತವೆ. 'ಅವ್ವ' ಅಂಥ ಉತ್ತಮ ಕತೆಗಳಲ್ಲಿ ಒಂದು. ದುಡಿಯುವ ವರ್ಗಕ್ಕೆ ಸೇರಿದ ಗಂಡು ಹೆಣ್ಣುಗಳ ಮಧ್ಯದ ದೈಹಿಕ ಸೆಳೆತಗಳು ಕುಟುಂಬವೆಂಬ ಸಾಮಾಜಿಕ ವ್ಯವಸ್ಥೆಗೆ ಮಣಿಯಲೇಬೇಕಾದ ಸೂಕ್ಷ್ಮ ಬಿಕ್ಕಟ್ಟುಗಳ ಸೊಗಸಾದ ಚಿತ್ರಣವನ್ನು ಎರಡು ಕತೆಗಳಲ್ಲಿ (ಮೈತ್ರಿ, ಸಪ್ತಪದಿ) ಕಾಣಬಹುದಾಗಿದೆ. ಕಳೆಗೆಟ್ಟ ಕಾನೂನು ಹಾಗೂ ಅವಕಾಶವಾದವನ್ನು ಚೆನ್ನಾಗಿ ವಿಡಂಬಿಸುವ ಕತೆ 'ಅಪಘಾತ'. ಬೆಳೆದ ಮಕ್ಕಳ ಮುಂದೆ ಹೇಳಿಕೊಳ್ಳಲಾಗದ ಒಳಗಿನ ವಾಂಛೆಯನ್ನು ಹಿಕ್ಮತ್ತಿನಿಂದ ಈಡೇರಿಸಿಕೊಳ್ಳಲು ಯತ್ನಿಸುವ 'ಅಣ್ಣ', ಅತಿಮುದ್ದಿನ ಅಡ್ಡ ಪರಿಣಾಮಗಳ ತೋರುಬೆರಳಂತಿರುವ 'ಒಬ್ಬಳೇ ಮಗಳೆಂದು..' - ಒಂದು ಮಾಗಿದ ಮನಸಿನ ಪಳಗಿದ ಕತೆಗಾರನ ಸಹವಾಸದಲ್ಲಿ ನಾವಿದ್ದೇವೆ ಎಂಬ ಭಾವನೆಯನ್ನು ಓದುಗರಿಗೆ ಹುಟ್ಟಿಸುತ್ತವೆ. ಸಣ್ಣಕತೆಗಳ ಅಸಲೀ ಜಾಯಮಾನಕ್ಕೆ ತಕ್ಕಂಥ ನಡಿಗೆ ಇಲ್ಲಿಯ ಕತೆಗಳದ್ದು. ಲಕ್ಷ್ಮಣ ಕೊಡಸೆ ಅವರದ್ದೇ ಆದ ಶೈಲಿಯ ಸೊಂಪು ಕೂಡ ಇದೆ. 
....................
- ವಿಷ್ಣುನಾಯ್ಕ
........................
ಲಕ್ಷ್ಮಣ ಕೊಡಸೆ ಅವರ ಕತೆಗಳಲ್ಲಿ ಸಹಜತೆ ಇದೆ; ಓದಿನಲ್ಲಿ ಸುಖ ಕೊಡುವ ಗುಣ ಕಾಣುವುದು. ಅನಗತ್ಯ ವರ್ಣನೆಗಳಾಗಲಿ, ಬೇಕಿಲ್ಲದ ಮಾತುಗಳಾಗಲಿ ಇಲ್ಲಿ ಕಂಡುಬರುವುದಿಲ್ಲ. ಇಲ್ಲಿನ ಬರವಣಿಗೆಯಲ್ಲಿ ಸುಲಭವಾಗಿ ದಕ್ಕದ ಸಂಯಮ ಇದೆ. ಒಟ್ಟು ನೋಟ ಮತ್ತು ಪರಿಣಾಮಕ್ಕೆ ಆವಶ್ಯಕವಾದ ಅಂಶಗಳು ತಮ್ಮ ಉದ್ದೇಶ ಸಾಧನೆಗೆ ಸಂಯೋಜನೆಗೊಳ್ಳುವುದು ಈ ಕತೆಗಳ ವಿಶೇಷ.

ಅವ್ವ ಮತ್ತು ಅಣ್ಣ ಕೂಡು ಕುಟುಂಬ ಅಥವಾ ಅವಿಭಾಜ್ಯ ಸಂಸಾರ ವಿದ್ಯೆ, ಉದ್ಯೋಗ ಕಾರಣಗಳಿಗಾಗಿ ಬೇರೆ ಬೇರೆ ಊರುಗಳಲ್ಲಿ ಬದುಕಬೇಕಾದುದರಿಂದ ಶಿಥಿಲಗೊಳ್ಳುವ ಸ್ಥಿತಿಗೆ ಸಂಬಂಧಿಸಿವೆ. `ಒಬ್ಬಳೇ ಮಗಳೆಂದು....' `ಮೈತ್ರಿ', ಮತ್ತು 'ಸಪ್ತಪದಿ' ಕ್ರಮವಾಗಿ ಗಂಡ, ಹೆಂಡತಿ ಮತ್ತು ಮಕ್ಕಳಿರುವ ಒಂಟಿ ಸಂಸಾರಗಳಿಗೆ ಸಂಬಂಧಿಸಿದವು. `ಅಪಘಾತ'-ಸಂಸಾರದ ಚೌಕಟ್ಟಿನ ಆಚೆಗೆ ನಗರದ ರಸ್ತೆಯಲ್ಲಿ ನಡೆಯುವ ಕತೆ.

ಅವ್ವ ಮತ್ತು ಅಣ್ಣ ಪ್ರಧಾನವಾಗಿ ಗ್ರಾಮೀಣ ಪರಿಸರದಲ್ಲಿ ನಡೆದರೆ ಉಳಿದ ಕತೆಗಳು ನಗರ ಪ್ರದೇಶಗಳ ವಾತಾವರಣದಲ್ಲಿ ಸಂಭವಿಸುತ್ತವೆ. ಕತೆಗಾರ ಲಕ್ಷ್ಮಣ ಕೊಡಸೆ ಅವರಿಗೆ ಹಳ್ಳಿ ಮತ್ತು ಪಟ್ಟಣಗಳ ಚಿತ್ರಣ ನೀಡುವ ಕಲೆ ಸಿದ್ಧಿಸಿದೆ. 

ಪ್ರಗತಿಪರ ಚಿಂತಕ ಕಡಿದಾಳ ಶಾಮಣ್ಣರಿಂದ ಗೌರವ
`ಅವ್ವ' ಕತೆಯಲ್ಲಿ ನಿರೂಪಕ ತಂದೆಯ ಸಾವಿನ ವಿಚಾರ ಹೇಳುತ್ತಾ ಒಂದು ಸಮುದಾಯದ ಆಚಾರ ವಿಚಾರಗಳ ಹಾಗೂ ನಂಬಿಕೆ ನಡಾವಳಿಗಳನ್ನು ತೆರೆಯುತ್ತಾನೆ. ಸಾವಿನಂಥ ಸಂದರ್ಭದಲ್ಲಿ ಮತ್ತು ಉತ್ತರ ಕ್ರಿಯೆಯ ಹೊತ್ತಿನಲ್ಲಿ ಬಂದು ಹೋಗುವ ನೆಂಟರಿಷ್ಟರ ಸಂಬಂಧ ಎಷ್ಟು ಗಾಢ ಹಾಗೂ ನವುರಾದುದು ಎಂದು ತಿಳಿಯುವುದು. ತಂದೆಯನ್ನು ಎಡಬಿಡದೆ ನೋಡಿಕೊಂಡ ತಾಯಿಯ ಚಿತ್ರ ಉದಾತ್ತವಾಗಿ ಮೂಡುವುದಲ್ಲದೆ ಎಲ್ಲವನ್ನೂ ಸಾವರಿಸಿಕೊಂಡು ಉತ್ತರಕ್ರಿಯಾದಿಗಳೆಲ್ಲ ಮುಗಿದ ಮೇಲೆ ಆಕೆ ಬದಲಾಗುವ ಕ್ರಮ ಚೇತೋಹಾರಿಯಾದುದು. `ಅವ್ವ ಬಳೆ ತೊಟ್ಟು ಹೂ ಮುಡಿದು ಕುಂಕುಮ ಧರಿಸಿದ್ದನ್ನು `ನಿರೂಪಕ ನೋಡುತ್ತಾನೆ'. ಅಪ್ಪ ಹೇಳುತ್ತಿದ್ದ ಮಾತುಗಳಿಗೆ ಅವ್ವನೇ ಇಷ್ಟು ಬೇಗ ದೊಡ್ಡ ನಿದರ್ಶನ ಒದಗಿಸುತ್ತಾರೆ ಎಂಬುದನ್ನು ನಾನು ಊಹಿಸಲೂ ಇರಲಿಲ್ಲ' ಎಂದು ಆತ ಅಚ್ಚರಿಪಡುವಂತಾಗುತ್ತದೆ. ಇದು ಅವ್ವನ ಜೀವನ ಪ್ರೀತಿಯನ್ನು ತೋರಿಸುವ ಅಪರೂಪದ ಗುಣ ಮತ್ತು ಶಕ್ತಿ. ಈಚಿನ ದಿನಗಳಲ್ಲಿ ಅರ್ಥಹೀನ ಸಂಪ್ರದಾಯಗಳನ್ನು ತೊರೆಯುವುದರ ಗುರುತಾಗಿ ಕತೆ ಮುಗಿಯುತ್ತದೆ. ಸ್ತ್ರೀನಿಷ್ಠವಾದದ ಬೇರೊಂದು ಮಜಲನ್ನು ಇಲ್ಲಿ ನೋಡಬಹುದು, ಯಾವ ಅಬ್ಬರ ಇಲ್ಲದೆ.

`ಅಣ್ಣ' ಕತೆಯಲ್ಲಿ ತನ್ನ ಮಡದಿಯನ್ನು ಕಳೆದುಕೊಂಡ ಹಿರಿಯಣ್ಣನ ಬವಣೆ ಬೇಜವಾಬ್ದಾರಿತನಗಳು ಬಿಚ್ಚಿಕೊಳ್ಳುವ ಪರಿ ಇದೆ. ಅವನ ಒಬ್ಬ ಮಗ ಮದುವೆಯಾಗಿ ಹೋಗಿದ್ದಾನೆ, ಇನ್ನೊಬ್ಬ ಮಗ ಮತ್ತು ಮಗಳು ಮದುವೆ ಆಗುವ ವಯಸ್ಸಿನಲ್ಲಿ ಇದ್ದಾರೆ. ಆದರೂ ಇನ್ನೊಂದು ಮದುವೆ ಆಗಬೇಕೆಂಬ ಈ ಅಣ್ಣನ ಚಪಲ ಪ್ರಕಟವಾಗುವ ರೀತಿ ಸ್ವಾರಸ್ಯಕರವಾಗಿದೆ.

ಅತಿ ಮುದ್ದು ಮಾಡುವ ಯುವ ತಂದೆ ತಾಯಿಗಳು ಹಾಗೂ ಅದೇ ರೀತಿ ನಡೆದುಕೊಂಡ ವೃದ್ಧ ಮಾತಾಪಿತೃಗಳು ಪಡುವ ಪಾಡಿನಿಂದ ಬಾಳಿನ ಅತಿರೇಕವನ್ನು ಹೇಳುತ್ತಲೇ ಅಂಥದ್ದನ್ನು ತಹಬಂದಿಗೆ ತಂದುಕೊಳ್ಳಬೇಕೆಂಬ ಸೂಚನೆ `ಒಬ್ಬಳೇ ಮಗಳೆಂದು...' ಕತೆಯಲ್ಲಿ ಮೂಡಿದೆ.

ಈ ಕತೆಗಳಲ್ಲಿ ರಕ್ತಸಂಬಂಧವನ್ನು ಪ್ರೀತಿಸುವ, ಗೌರವಿಸುವ ನಿರೂಪಕ ಇದ್ದಾನೆ. ಅವನು ನಿರೂಪಣೆಯಲ್ಲಿ ನಿರ್ಲಿಪ್ತತೆ ಸಾಧಿಸುವುದಲ್ಲದೆ ಭಾಗಿಯಾಗುವನು. ಅವನಲ್ಲಿ ಭಾವತಪ್ತತೆ ಇಲ್ಲ; ಭಾವತೀವ್ರತೆಯ ಝರಿ ಇದೆ.

ಪ್ರಾರಂಭದಲ್ಲಿ ಮುಗ್ಧೆಯಾಗಿದ್ದ ಮಡದಿ ಬೆಳೆದು ಪ್ರತಿಭಟಿಸುವ ಕ್ರಮವನ್ನು `ಸಪ್ತಪದಿ' ಕತೆ ಚಿತ್ರಿಸುವುದು ಸುಂದರವಾಗಿರುವುದು. ಈಕೆ ತನ್ನ ಗಂಡನ ಸ್ವೈರ ವೃತ್ತಿಯ ಮೇಲೆ ದಾಳಿ ಮಾಡುವಾಗ ಸಂಸಾರದ ಗುಟ್ಟು ಗೌರವ ಕಾಪಾಡಿಕೊಳ್ಳುತ್ತ, ತನ್ನ ಮಕ್ಕಳಿಗೂ ಅದು ಗೊತ್ತಾಗದ ರೀತಿಯಲ್ಲಿ ಪ್ರತಿಭಟಿಸುವ ವಿಧಾನ ಸುಸಂಸ್ಕೃತವಾಗಿದೆ. ಸ್ತ್ರೀನಿಷ್ಠವಾದದ ಪ್ರಬುದ್ಧ ಸ್ಥಿತಿ ಇದು ಎನ್ನಿಸುವುದು. `ಸಪ್ತಪದಿ'ಯಲ್ಲಿ ವೃತ್ತಿ ಮಾಡುವ ಅವಿವಾಹಿತ ಯುವತಿಗೆ ತಿಳಿಹೇಳುವ ಪರಿ ಇದೆ.

ಆದರೆ ಈ ಕತೆಗಳಲ್ಲಿ ಗಂಡು ತನ್ನ ಚಾಳಿಗೆ ನಾಚುವ ಅವಮಾನಪಡುವ ಅಂಶಗಳು ಇಲ್ಲ. ಆದ್ದರಿಂದ ಇವು ಪುರುಷ ಕೇಂದ್ರಿತ ಕತೆಗಳಾಗಿ ತೋರಿಬರಬಹುದು.

`ಅಪಘಾತ' ಕನ್ನಡದಲ್ಲಿ ಗೋಚರಿಸುವ ಒಂದು ಅಪರೂಪ ಕತೆ. ಶೀರ್ಷಿಕೆ ಸಾಂಕೇತಿಕವಾಗಿ ಅರ್ಥ ಪಡೆದುಕೊಳ್ಳುತ್ತದೆ. ಇಲ್ಲಿ ಕಾರಿಗೆ ಮಾತ್ರ ಅಪಘಾತವಾಗಿಲ್ಲ; ಕಾನೂನಿಗೆ ಅಪಘಾತವಾಗಿದೆ. ಮನುಷ್ಯನ ನಾಗರಿಕ ಪ್ರಜ್ಞೆ ಮತ್ತು ಆರೋಗ್ಯಕರವಾಗಿರಬೇಕಾದ ಆಡಳಿತ ವ್ಯವಸ್ಥೆಗೆ ಅಪಘಾತ ಸಂಭವಿಸಿದೆ. ಅಪಘಾತದ ಲಾಭವನ್ನು ಎಲ್ಲರೂ- ಕಾರಿಗೆ ಗುದ್ದಿದ ಟ್ಯಾಕ್ಸಿ ತಂಡ, ಕಾರಿನ ಮಾಲೀಕ, ಮೆಕ್ಯಾನಿಕ್ ಮಂಜು, ಪೊಲೀಸರು ಸೇರಿ ಎಗರಿಸಲು ಹವಣಿಸುತ್ತಾರೆ. ಪ್ರತಿಯೊಬ್ಬರ ಊಸರವಳ್ಳಿತನವನ್ನು ಕತೆ ಸೂಕ್ಷ್ಮವಾಗಿ ತೋರಿಸುತ್ತದೆ. ಈ ಕತೆಯನ್ನು ಓದಿದ ನನಗೆ ಮಹಾ ಕತೆಗಾರ ಆಂಟನ್ ಚೆಕಾವ್ನ `ಗೋಸುಂಬೆ' ಕತೆ (ಇದನ್ನು ಪ್ರೊ. ಕೆ.ಆರ್. ನಾರಾಯಣಶೆಟ್ಟಿ ಕನ್ನಡಕ್ಕೆ ಅನುವಾದಿಸಿದ್ದಾರೆ) ನೆನಪಾಯಿತು.

ಭಾರವೂ ಹಗುರವೂ ಅಲ್ಲದ ಸದಭಿರುಚಿಯ ಭಾಷೆ ಈ ಕತೆಗಳಲ್ಲಿ ಬಳಕೆಯಾಗಿರುವುದರಿಂದ ಓದು ಆಹ್ಲಾದಕಾರಿಯಾಗುತ್ತದೆ. ಇವುಗಳಲ್ಲಿನ ಪ್ರಸಂಗಗಳು ಮತ್ತು ಸಂಗತಿಗಳು ಜೀವನದಿಂದ ನೇರವಾಗಿ ಕತೆಗಳಿಗೆ ಇಳಿದಿರುವಂತೆ ಭಾಸವಾಗುವುದು. ಬಾಳಿನ ವಿಘಟನೆಗಳನ್ನು ನಿವಾರಿಸಿ ಜೀವನವನ್ನು ಹೆಚ್ಚು ಸಹ್ಯಗೊಳಿಸಿ ಸುಂದರ ಮಾಡಬೇಕೆಂಬ ಅಂತರ್ದೃಷ್ಟಿ ಈ ರಚನೆಗಳಲ್ಲಿ ಅರಿವಾಗುತ್ತದೆ.
....................................
- ಡಾ. ಕೆ.ಎಸ್. ಭಗವಾನ್
....................................
'ಅಪಘಾತ' ಮತ್ತೊಂದು ಬಗೆಯ ತಬರನ ಕಥೆ. ಆದರೆ ವ್ಯಾವಹಾರಿಕ ಜಾಣ್ಮೆಯಿಂದ ಕಥಾನಾಯಕ 'ತಬರ'ನಾಗುವುದಂತೂ ತಪ್ಪಿತು. ವ್ಯವಸ್ಥೆ ಸಂಘಟಿತವಾಗಿ, ಬಲಿಷ್ಠವಾಗಿ ಶ್ರೀಸಾಮಾನ್ಯರನ್ನು ಅಸಹಾಯಕರಾಗಿಸಿ ತನ್ನೊಳಗೆ ಎಳೆದುಕೊಳ್ಳುವುದನ್ನು ನಿರೂಪಿಸಿರುವ ಪರಿ ಮನವನ್ನು ತಟ್ಟುತ್ತದೆ. 
........................
- ಸಿ.ಜಿ. ಮಂಜುಳಾ
.......................
****
ಕಾದಂಬರಿಗಳು
ಪಯಣ
ಅನಿಸಿಕೆ
ಪತ್ರ-1
ನಿಮ್ಮ ಕಾದಂಬರಿ ಆಮೂಲಾಗ್ರವಾಗಿ (ಒಂದೇ ಮೆಟ್ಟಿನಲ್ಲಿ ಅಲ್ಲ) ಓದಿಸಿಕೊಂಡು ಹೋಯಿತು. ಕತೆಗಳಲ್ಲಿದ್ದಂತೆಯೇ ನೇರ ಸರಳ ನಿರೂಪಣೆ ಎನಿಸಿದರೂ ಅಲ್ಲಲ್ಲಿ ಉಕ್ತಿ ಚಾತುರ್ಯ ಮನಸ್ಸಿಗೆ ಹಿಡಿಯುವಂತಿದೆ. ವಿಲೋಮ ಪದ್ಧತಿಯಿಂದ ಅಂದರೆ ಹಿಂದಿನ ನೆನಪುಗಳನ್ನು `ಇಂದು' ಹೇಳುತ್ತಿರುವ ರೀತಿಯಲ್ಲಿ ಬರೆದಿದ್ದೀರಿ. ಬಸ್ಸಿನ ಪಯಣ ಜೀವನಯಾತ್ರೆಯೂ ಆಗಿ ಕಲಾವಂತಿಕೆ ಕಾಣಿಸುತ್ತದೆ.
ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದಾಗ ಗೌರವ

ಇದು ಅಪ್ಪಟ ಪ್ರಾದೇಶಿಕ ಕಾದಂಬರಿ. ಪ್ರಾದೇಶಿಕವಾದದ್ದು ಎಂದರೆ ಬರಿ ಗ್ರಾಮೀಣ ಚಿತ್ರವಲ್ಲ. ಯಾವುದೊಂದು ಸಮಸ್ಯೆಯಾಗಲೀ, ಪ್ರೇಮಕಥೆಯಾಗಲೀ ಮುಖ್ಯವಲ್ಲ. ಇಡೀ ಪರಿಸರದ ಸ್ಪಷ್ಟ ಕಲ್ಪನೆ ಬರುವಂತೆ ಅದರ ಹರಹು ಇರಬೇಕು. ಮರಳಿ ಮಣ್ಣಿಗೆ ಓದಿದಾಗ ನಿಸರ್ಗವನ್ನೂ ಓದಿದಾಗ ಆಗುವ ಅನುಭವವೇ ಇಲ್ಲಿದೆ. ಬರೀ ಶಹರದ ಹಿನ್ನೆಲೆಯೇ ಪ್ರಮುಖವಾಗಿರುವ ಕಾದಂಬರಿಗಳು (ಅವೂ ಬಹಳ ಅಲ್ಲ) ಈಗ ಬರುತ್ತಿರುವಾಗ ನಿಮ್ಮದು ರೆಫ್ರೆಶಿಂಗ್ ಆಗಿ ಬಂದಿದೆ.
...................................
- ಶ್ರೀನಿವಾಸ ಹಾವನೂರ
....................................
ಪತ್ರ-2
ನಿಮ್ಮ 'ಪಯಣ' ಓದಿದ ಖುಷಿಯಿಂದ ಈ ಪತ್ರ. ನಿಮ್ಮ ಸಣ್ಣ ಕತೆಗಳನ್ನು ಓದಿ ಮೆಚ್ಚಿಕೊಂಡಿದ್ದ ನನಗೆ ನಿಮ್ಮ ಹೊಸ ಕಾದಂಬರಿ ಹೇಗೆ ಇರಬಹುದು ಎಂಬ ಕುತೂಹಲ ಇತ್ತು. ಆ ಕಾರಣಕ್ಕೆ ಅದನ್ನು ಓದಬೇಕೆಂದು ಕಾದಿರಿಸಿದ್ದೆ. ಓದಲು ಕೈಗೆತ್ತಿಕೊಂಡ ಮೇಲೆ ಅದು ಎಷ್ಟು ಚೆನ್ನಾಗಿ ಓದಿಸಿಕೊಂಡು ಹೋಯಿತು ಎಂದರೆ, ನಾನು ಆ ಕಾದಂಬರಿ ಎಲ್ಲಿ ನಡೆಯಿತೋ ಅಲ್ಲಲ್ಲಿಗೆಲ್ಲ ನಡೆದುಕೊಂಡೇ ಹೋಗಿ ಅವರನ್ನೆಲ್ಲ ನೋಡಿ ಮಾತಾಡಿಸಿ ಬಂದಷ್ಟು ಖುಷಿಯಾಯಿತು.

ಗಾಯಕ ಎಸ್.ಪಿ.ಬಿ ಜೊತೆ ಕುಶಲೋಪರಿ
ನಿಮ್ಮ ಕಾದಂಬರಿಯ ತಂತ್ರ ಪ್ರಾಯಃ ಕನ್ನಡಕ್ಕೆ ಹೊಸಬಗೆಯದು. ಜೀವನ ಎನ್ನುವುದು ನಿರಂತರ ಪಯಣವೇ. ಕಾದಂಬರಿಯು ಕರೇನಾಯ್ಕರ ಜೀವನದ ಪಯಣದ ಜೊತೆಗೆ ಇಡೀ ಮಲೆನಾಡು ಬದಲಾಗುತ್ತಾ ಹೋಗುವುದು (ಅಂದರೆ ಅಲ್ಲಿನ ಜನಜೀವನವೂ ಬದಲಾಗುವುದು) ಒಂದು ಪಯಣವೇ ಎಂಬುದನ್ನು ಸಾಂಕೇತಿಕವಾಗಿ ಧ್ವನಿಸಿದೆ. ಕರೇನಾಯ್ಕರ ಪಯಣ ಎಷ್ಟು ಸಹಜವಾಗಿ ಚಿತ್ರಿತವಾಗಿದೆ ಎಂದರೆ ಇದು ನೀವು ನೋಡಿದ ಹಿರಿಯರೊಬ್ಬರನ್ನು ಕಂಡರಿಸಿ ಇಲ್ಲಿ ತಂದಿಟ್ಟಿದ್ದೀರಿ ಎನ್ನುವಷ್ಟು! ಇಷ್ಟಕ್ಕೂ ಈ ಒಂದು ಪುಟ್ಟ ಕಾದಂಬರಿ ಬಹುವಿಸ್ತಾರವಾದ ಮಲೆನಾಡಿನ ಚಿತ್ರಣವನ್ನು ಸ್ಲೈಡಿನಲ್ಲಿ ಸೆರೆಹಿಡಿದ ಹಾಗೆ ಚಿತ್ರಿಸಿದೆ. ನಿಮ್ಮ ಚಿತ್ರಕಶಕ್ತಿಗೆ ನಿಮ್ಮ ಪತ್ರಕರ್ತನ ಸೃಜನಶೀಲತೆ ಅಡ್ಡಿಬರಲಿಲ್ಲ; ಬದಲು ಪೂರಕವಾಗಿದೆ. ನನ್ನಂಥವ ಹತ್ತು ಸಾಲುಗಳಲ್ಲಿ ಹೇಳುವುದನ್ನು ನೀವು ಒಂದು ಸಾಲಿನಲ್ಲಿ ಹೇಳಿದ್ದೀರಿ. ಅದು ಇಡೀ ಕಾದಂಬರಿಗೆ ಆಕರ್ಷಕ ಓದನ್ನೂ ಕುತೂಹಲವನ್ನೂ ತಂದುಕೊಟ್ಟಿದೆ.

ಕರೇನಾಯ್ಕನ ಪಾತ್ರ ಒಂದು ಅಪರೂಪದ ಸೃಷ್ಟಿ. ಆತ ಒಬ್ಬ ಸಾಮಾನ್ಯನಾಗಿದ್ದರೂ, ಆತನ ಜೀವನಪ್ರೀತಿ ಮತ್ತು ಛಲ ಮತ್ತು ಸಾಧನೆಯಿಂದ ಆತ, ಮಲೆನಾಡಿನ ಗೌಡರಿಗೆ ಸಮಾನವಾಗಿ ಬೆಳೆಯುತ್ತಾನೆ. ಅವನು ಕಂಡುಕೊಂಡ ಜೀವನದರ್ಶನ, ಅವನನ್ನು ನಂಬಿಸಿ ಮೋಸ ಮಾಡಲು  ಹೊರಟ ಕುರಂಬಳ್ಳಿ ಗೌಡರ ಘಾತುಕ ಬುದ್ಧಿ, ತಮ್ಮವರೇ ಆದ ಬಡೇನಾಯ್ಕರ ಕುಟುಂಬದಲ್ಲಿ ತಮ್ಮ ಲಕ್ಷ್ಮಣನಿಗೆ ಅಣ್ಣ ರಾಮ ಮಾಡಿದ ಮೋಸದಂಥ ಪ್ರತಿ ಪ್ರಕರಣಗಳೂ ಇಲ್ಲಿ ಸಹಜವಾಗಿ ಮೂಡಿ ಕಾದಂಬರಿಗೆ ಮಹತ್ವವನ್ನು ತಂದಿದೆ. ಕುವೆಂಪು ಅವರ ನೆನಪಿನ ದೋಣಿಯಲ್ಲಿ ಕುವೆಂಪು ಅವರು ಮೊದಲ ಸಲ ಮೈಸೂರಿನಲ್ಲಿ ಕಕ್ಕಸನ್ನು ನೋಡಿದಾಗ ಅನುಭವಿಸಿದ ಭೀಭತ್ಸದಂತೆ ಇಲ್ಲಿಯೂ ಹಳ್ಳಿಯ ಮಂದಿ ಕಮೋಡ್ನ್ನು ಎದುರಿಸುವ ಚಿತ್ರಣವು ಕಾಲಾತೀತವಾಗಿ ರೂಪುಗೊಂಡದ್ದು ನೋಡಿ ನಿಮ್ಮಸೂಕ್ಷ್ಮ ಸಂವೇದನೆಗೆ ಬೆರಗಾದೆ. ಎಲ್ಲಕ್ಕಿಂತ ಹೆಚ್ಚಾಗಿ ಕಾದಂಬರಿಯ ಮುಕ್ತಾಯವು ತನಗೆ ತಾನೇ ಪಡೆದುಕೊಂಡ ತಿರುವು ಸಹಜವೂ ಮರ್ಮಭೇದಕವೂ ಆಗಿದೆ. ದುರಂತ ಎಂದರೆ ಎರಡು ತಲೆಮಾರುಗಳ ನಡುವೆ (ಅಪ್ಪ ಮಗನೇ ಆಗಲಿ) ಆಗುವ ಸ್ಥಿತ್ಯಂತರ ಮತ್ತು ಅದರ ಅನಿವಾರ್ಯತೆ, ಬದಲಾಗುತ್ತಾ ಹೋಗುವ ಜೀವನದೃಷ್ಟಿ ಎಲ್ಲದಕ್ಕೂ ಈ ತಿರುವು ರೂಪಕವಾದ ಹಾಗೆ ಮೂಡಿ ಬಂದಿದೆ. ಕರೇನಾಯ್ಕನ ಇಬ್ಬರು ಮಕ್ಕಳಲ್ಲಿ ರಾಮಚಂದ್ರ ದಾರಿತಪ್ಪುವುದು, ಶಂಕರ ಊರ ಪಂಚಾಯಿತಿ ಮಾಡುವಷ್ಟು ದೊಡ್ಡವನಾಗಿ ಬೆಳೆಯುವುದು ಇವು ಎರಡೂ ಕರೇನಾಯ್ಕನಿಗೆ ಬೆರಗು ಹುಟ್ಟಿಸಿ ಏಕಕಾಲದಲ್ಲಿ ಅನುಭವಕ್ಕೆ ಬರುವುದು ತುಂಬಾ ಅರ್ಥಪೂರ್ಣವಾಗಿದೆ. ಆ ಸಂದರ್ಭದಲ್ಲಿ ಕರೇನಾಯ್ಕ ಆಡುವ 'ಈ ಹುಡುಗರು ನಮ್ಮನ್ನು ಮೀರಿಸಿಬಿಟ್ಟಿದ್ದಾರೆ' ಎನ್ನುವ ಮಾತು ತುಂಬ ಮಹತ್ವದ್ದು ಮತ್ತು ಅದು ಬದುಕನ್ನು ಹೇಗೆ ಸ್ವೀಕರಿಸಬೇಕು ಎಂಬ ತಟಸ್ಥ ಧೋರಣೆಗೆ ಪ್ರತಿಮೆಯೂ ಹೌದು.. ಇದು ಕರೇನಾಯ್ಕರ ಮಾಗುವಿಕೆಯಷ್ಟೇ ಅಲ್ಲ, ಕಾದಂಬರಿಕಾರರಾದ ನಿಮ್ಮ ಮಾಗುವಿಕೆಯೂ ಹೌದು. ಇಂಥ ಒಂದು ಕಾದಂಬರಿ ಇಂದಿನ ದಿನಗಳಲ್ಲಿ ತೀರಾ ಅಪರೂಪ. ಅಷ್ಟೇ ಅಲ್ಲ, ಮಹತ್ವದ್ದೂ ಹೌದು. ಅದಕ್ಕಾಗಿ ಹಾರ್ದಿಕ ಅಭಿನಂದನೆಗಳು.
................................................
- ಡಾ. ನಾ. ಮೊಗಸಾಲೆ
ಕಾಂತಾವರ, ಕನ್ನಡ ಸಂಘ ಉಡುಪಿ ಜಿಲ್ಲೆ
....................................................

ಪತ್ರ-3
ನಿಮ್ಮ ಪಯಣ ಕಾದಂಬರಿಯನ್ನು ಅಂಕಿತಾದಿಂದ ನಿನ್ನೆ ತಂದವಳು ಇಂದು ಎಲ್ಲಾ ಕೆಲಸಗಳನ್ನು ಬದಿಗೊತ್ತಿ ಕುಳಿತಲ್ಲಿಂದ ಕದಲದೆ ಒಂದೇ ಸಮನೆ ಓದಿಬಿಟ್ಟೆ. ಈ ರೀತಿ ಕಾದಂಬರಿಯನ್ನು ಓದಿ ಎಷ್ಟು ವರ್ಷವಾಗಿತ್ತೋ. ನಾ ಕಾಣದ ಮಲೆನಾಡಿನ ಆತ್ಮೀಯ ಪಯಣ ನನ್ನಲ್ಲಿ ಏನೋ ಒಂದು ಸಂತಸವನ್ನು ಹುಟ್ಟು ಹಾಕಿದ್ದಕ್ಕೆ ನಿಮಗೆ ಹೇಗೆ ಧನ್ಯವಾದ ಅರ್ಪಿಸಲಿ?

ಸಣ್ಣಪುಟ್ಟ ಅಲೆಗಳೆದ್ದರೂ, ಅಲ್ಲಲ್ಲಿ ಸುಳಿಗಳಿದ್ದರೂ, ಹೊಳೆಯಂತೆ ಪ್ರಶಾಂತವಾಗಿ ಹರಿದುಹೋಗುವ ಬದುಕುಗಳ ಚಿತ್ರಣ ಮನಸ್ಸಿಗೆ ಆಪ್ತವಾಗುತ್ತದೆ.

ಬದುಕಿನ ದಟ್ಟ ಅನುಭವಗಳು, ಗಮನಿಸುವಿಕೆ,, ಬರಹಗಾರನಿಗೆ ಇರಬೇಕಾದ ಅಗತ್ಯ ಗುಣ ಎನಿಸಿತು. ನನ್ನ 'ಎಲ್ಲಿ ಜಾರಿತೋ ಮನವು' ಕಾದಂಬರಿಯಲ್ಲಿ ಹಳ್ಳಿಯ ಚಿತ್ರಣ ಬಂದಿದ್ದರೂ ಅದು ಕಾಲ್ಪನಿಕವಾಗಿದೆ. ನಿಮ್ಮ ಮಲೆನಾಡಿನ ಚಿತ್ರಣ ವಾಸ್ತವದ ನೆಲೆಗಟ್ಟನ್ನು ಹೊಂದಿದ್ದು ಜೀವಂತವಾಗಿದೆ (ನಿಮ್ಮನ್ನು ನೋಡಿದರೆ ನನಗೆ ಹೊಟ್ಟೆಕಿಚ್ಚಾಗುತ್ತಿದೆ. ಈ ಕಾದಂಬರಿಯನ್ನು ಓದಿ ನಾನೊಂದು ನಿರ್ಧಾರಕ್ಕೆ ಬಂದಿದ್ದೇನೆ. ನೀವು ಮಲೆನಾಡ ಬಗ್ಗೆ ಬರೆದಂತೆ ನಾನು ಬೆಂಗಳೂರ ಬಗ್ಗೆ ಬರೆಯುತ್ತೇನೆ. ಥ್ಯಾಂಕ್ಯು ಕೊಡಸೆ ಅವರೇ, ನನ್ನನ್ನು ಡೈವಟರ್್ ಮಾಡಿದ್ದಕ್ಕೆ!).

ಬಸ್ಸಿನ ಪ್ರಯಾಣ ಬದುಕಿನ ಪ್ರಯಾಣವೂ ಆಗಿ ಮೂಡಿ ಬಂದಿರುವ ರೀತಿ ತೀರಾ ಭಿನ್ನವಾಗಿದೆ.

ರಾಮರಾಯನಂಥವರನ್ನು ಸಾಮಾನ್ಯ ಜನ ಶಿಕ್ಷಿಸಲಾಗದಿದ್ದರೂ ವಿಧಿಕೊಟ್ಟ ಹೊಡೆತ ಮಾಡಿದ ತಪ್ಪಿಗೆ ಶಿಕ್ಷೆಯಾಗಲೇಬೇಕು ಎಂಬುದು ಪ್ರಕೃತಿ ನಿಯಮವಿರಬೇಕು. ನಾವು ಒಳ್ಳೆಯದು ಮಾಡಿದರೆ ಒಳ್ಳೆಯದು, ಕೆಟ್ಟದ್ದು ಮಾಡಿದರೆ ಕೆಟ್ಟದ್ದು. ನಾವು ಬುದ್ಧಿ ವಂತರಾದರೆ ಯಾರಿಗೂ ಕೆಟ್ಟದ್ದು ಮಾಡಬಾರದು. ಇದು ನಾನು ಬದುಕಿನಲ್ಲಿ ಕಂಡುಕೊಂಡಿರುವ ಸತ್ಯ. ಈ ಸಂದೇಶವನ್ನು ರಾಮರಾಯನ ಪಾತ್ರದ ಮೂಲಕ ಎಷ್ಟು ಚಂದವಾಗಿ ಕಟ್ಟಿಕೊಟ್ಟಿದ್ದೀರಿ. ಬದುಕಿನ ಏರಿಳಿತಗಳು ವ್ಯಕ್ತಿಗಳನ್ನು ಹೇಗೆ ಬದಲಾಯಿಸುತ್ತವೆ ಎನ್ನುವುದಕ್ಕೆ ಗೌಡರ ವರ್ತನೆಯೇ ಸಾಕ್ಷಿ. 

ಯಲ್ಲನಾಯ್ಕರ ಕಣಬ್ಬದ ವೈಭವದ ಬಗೆಗಿನ ವಿವರಣೆ. ಮನೆಗೆ ಬಂದ ನೆಂಟರಿಷ್ಟರೆಲ್ಲ ಎಲ್ಲ ಕೆಲಸಗಳಲ್ಲಿ ಭಾಗಿಯಾಗುತ್ತಿದ್ದ ಪರಿ. ನನ್ನಜ್ಜಿ ಹೇಳುತ್ತಿದ್ದ ಅಂದಿನ ಕಾಲದ ಮದುವೆ, ಆವನಿ ಜಾತ್ರೆಯ ನೆನಪನ್ನು ತಂದಿತು.

ನನ್ನ ಜಿಲ್ಲೆ ಕೋಲಾರ. ನಿಮ್ಮದು ಮಲೆನಾಡು. ಆದರೆ ಆ ತಲೆಮಾರಿನ ಜನ ಆಲೋಚಿಸಿದ, ಬದುಕಿದ ರೀತಿ, ನೆಂಟರಿಷ್ಟರೊಂದಿಗಿನ ಬೆಸುಗೆ, ಅದಕ್ಕೆ ನೆಪವಾಗಿ ಬರುವ ಹಬ್ಬ ಹರಿದಿನಗಳು. ಆ ಸಮಷ್ಠಿ ಪ್ರಜ್ಞೆ ಭಾರತದ ಎಲ್ಲ ಕಡೆಯೂ ಒಂದೇ ಆಗಿತ್ತೇನೋ ಎನಿಸಿತು.

ಮಕ್ಕಳು ಎಷ್ಟೇ ದೊಡ್ಡವರಾದರೂ, ಅವರಿಗೆ ಮನೆಯ ಜವಾಬ್ದಾರಿಯನ್ನು ನೀಡಲು ಬಯಸದ ಹಿರಿಯರ ಪ್ರತಿನಿಧಿಯಾಗಿ ಕರೇನಾಯ್ಕ, ಬದಲಾವಣೆಯನ್ನು ಸಹಜವಾಗಿ ಸ್ವೀಕರಿಸುವ ಬಡೇನಾಯ್ಕ. ಎಂತಹ ಅದ್ಭುತ ಪಾತ್ರಗಳು!

ಈ ಅಕ್ಟೋಬರ್ ರಜೆಯಲ್ಲಿ ಒಂದು ಒಳ್ಳೆಯ ಕಾದಂಬರಿ ಓದಿದ ತೃಪ್ತಿ ನನಗೆ ದಕ್ಕಿದೆ.

ಸಿಟಿಯ ಬದುಕು, ನಾಗರಿಕತೆ ಮನುಷ್ಯನನ್ನು ಅವಿಭಕ್ತ ಕುಟುಂಬದಿಂದ ಹೊರಬರುವಂತೆ ಮಾಡಿದೆ. ಒಬ್ಬೊಬ್ಬರು ಒಂದೊಂದು ದ್ವೀಪವಾಗಿ ಬಿಟ್ಟಿದ್ದಾರೆ ಎನಿಸಿ ಖೇದವಾಗುತ್ತಿದೆ. ಆರು ತಿಂಗಳಾಗಿತ್ತು ಅಮ್ಮನ ಮನೆಗೆ ಹೋಗಿ. ಈ ಕೃತಿ ಓದಿದ ನಂತರ ಅಮ್ಮನನ್ನು, ತಮ್ಮ, ತಮ್ಮನ ಮಗುವನ್ನು ಮಾತನಾಡಿಸಿಕೊಂಡು ಬರುವ ಎನಿಸಿ ಹೊರಟಿದ್ದೇನೆ. ಓದು ನಮ್ಮನ್ನು ಬದಲಾಯಿಸುವುದು ಬೆರಗಿನ ವಿಷಯವಲ್ಲವೇ?

ಥ್ಯಾಂಕ್ಯೂ ಲಕ್ಷ್ಮಣ ಕೊಡಸೆಯವರೆ, ಹೊಸ ದೃಷ್ಟಿಕೋನದಿಂದ ಬದುಕನ್ನು ನೋಡಲು ನನಗೆ ಕಲಿಸಿದ್ದಕ್ಕೆ.
.......................
- ಭುವನಾ ಸುರೇಶ್ 
........................
ವಿಮರ್ಶೆ :

ತಮ್ಮ ಸಣ್ಣ ಕತೆಗಳ ಮೂಲಕ ಸಾಹಿತ್ಯವಲಯಕ್ಕೆ ಈಗಾಗಲೇ ಪರಿಚಿತರಾಗಿರುವ ಲಕ್ಷ್ಮಣ ಕೊಡಸೆ ಅವರ ಮೊದಲ ಕಾದಂಬರಿ ಇದು. ಪ್ರಜಾವಾಣಿ ಪತ್ರಿಕೆಯ ಸಾಪ್ತಾಹಿಕ ಪುರವಣಿಯ ಹೊಣೆ ಹೊತ್ತಿರುವ ಇವರು, ಅವರೇ ಹೇಳುವಂತೆ, `ಪದಗಳ ಮಿತಿಯಲ್ಲಿ, ಕಥೆಗಳನ್ನೋ, ವರದಿಗಳನ್ನೋ ವಿಶೇಷ ವರದಿಗಳನ್ನೋ ಬರೆಯುವ ವೃತ್ತಿ'ಯಲ್ಲಿರುವವರು. ಈ ಬಗೆಯ `ಪದಬಂಧನ'ಕ್ಕೆ ಒಳಗಾದ ನಮ್ಮ ಅನೇಕ ಒಳ್ಳೆಯ ಬರಹಗಾರರು ತಮ್ಮ ಸೃಜನಶೀಲತೆಯನ್ನೇ ಕಳೆದುಕೊಂಡಿದ್ದಾರೆ.

ಆದರೆ ಕೊಡಸೆ ಪಯಣದ ಮೂಲಕ ತಮ್ಮ ಹಾದಿಯ ಅಗಲೀಕರಣ ಉದ್ದೀಕರಣ ಎರಡನ್ನೂ ಸಾಧಿಸಿದ್ದಾರೆ. ತೊಂಬತ್ತು ಪುಟಗಳ ಈ ಕಾದಂಬರಿಯನ್ನು ಬರೆಯಲು ಅವರು ಐದು ತಿಂಗಳು ತಗೊಂಡರು. ಆದರೆ ಇದನ್ನು ಓದುಗರು ಒಂದೇ ಮೆಟ್ಟಿಗೆ ಮುಗಿಸಬೇಕೆಂದು ಅವರ ಆಶಯ. ಅದಕ್ಕೆ ಕಾರಣವೂ ಇದೆ.,

ಮಲೆನಾಡಿನ ಪರಿಸರದ ಅನುಭವ ದ್ರವ್ಯ ಇಲ್ಲಿ ಹರಡಿಕೊಳ್ಳುವುದು ಕರೇನಾಯ್ಕರ ನೆನಪುಗಳ ಮೂಲಕ. ಹೆದ್ದಾರಿಪುರದಿಂದ ಸುರುವಾದ ಅವರ ಬಸ್ ಪಯಣ, ಸಿ.ಎನ್.ರಾಮಚಂದ್ರನ್ ಹೇಳುವಂತೆ, `ವಾಸ್ತವ ಪಯಣದ ಮೂಲಕ ಬದುಕಿನ ಪಯಣವನ್ನೂ ದಾಖಲಿಸಿದೆ'. ಕರೇನಾಯ್ಕರು ಸಂಧಿಸುವ ಇತರ ಪ್ರಯಾಣಿಕರ ನೆನಪುಗಳ ಮೂಲಕ ಒಂದು ಕಾಲ ಘಟ್ಟದಲ್ಲಿ ಒಂದು ಸಮುದಾಯ ಕ್ರಮಿಸಿದ ಬದುಕಿನ ಪಯಣದ ವೈವಿಧ್ಯಮಯ ವಿವರಗಳೇ ಇಡೀ ಕಥಾನಕದ ನೇಯ್ಗೆಯನ್ನು ಅಂದಗೊಳಿಸಿವೆ. ಇಂಡಿಯಾದ ಹಳ್ಳಿಗಾಡಿನ ಬದುಕಿನ ಸ್ಥಿತ್ಯಂತರಗಳು ಮನುಷ್ಯ ಸಂಬಂಧಗಳಲ್ಲಿನ ಏರುಪೇರಿನ ಮೂಲಕ ಸೂಕ್ಷ್ಮವಾಗಿ ಬಿಚ್ಚಿಕೊಂಡಿವೆ. ಬಸ್ ನಿಂತಾಗ ಕೆಲವರು ಇಳಿಯುತ್ತಾರೆ, ಹಲವರು ಹತ್ತುತ್ತಾರೆ. ಕುಶಲ ಸಮಾಚಾರಗಳ ಮೂಲಕ ಮತ್ತೆ ನೆನಪುಗಳ ಖೋ ಖೋ ಆಟ ಮುಂದುವರಿಯುತ್ತದೆ. `ಪಯಣ'ದಲ್ಲಿ ನೆನಪುಗಳ ಭೂತಕಾಲಕ್ಕೆ ಹೋಗಿ ವರ್ತಮಾನಕ್ಕೆ ಹಿಂತಿರುಗುವ ತಂತ್ರವನ್ನು ಬೆನ್ನುಡಿಯಲ್ಲಿ ಪ್ರಸ್ತಾಪಿಸಿದ ಸಂದೀಪ ನಾಯಕ ಹೇಳುತ್ತಾರೆ: `ಹರಿಯುವ ಬದುಕಿನ ನದಿಯಿಂದ ಒಂದು ಕೊಡ ನೀರನ್ನು ಪ್ರೀತಿಯಿಂದ ಎತ್ತಿಕೊಂಡಂತೆ ಈ ಬರಹ ಇದೆ'.

ಕಾದಂಬರಿಯ ಕೊನೆ ಕುತೂಹಲಕಾರಿಯಾಗಿದೆ. ಹಳ್ಳಿಯಲ್ಲಿ ಸಮಸ್ತರೆಲ್ಲ ಕೂಡಿ ಪಂಚಾಯ್ತಿ ಮಾಡಿದ್ದನ್ನು ನೆನೆಯುತ್ತ ಕರೇನಾಯ್ಕರು ತಮ್ಮ ಮಗ ಆ ಕೆಲಸವನ್ನು ತಾನೊಬ್ಬನೇ ಮುಗಿಸಿದ್ದನ್ನು ನೆನೆಯುತ್ತ `ಈ ಹುಡುಗರು ನಮ್ಮನ್ನು ಮೀರಿಸಿದ್ದಾರೆ' ಎನ್ನುತ್ತ ಹೋಟಲಿನಲ್ಲಿ ಬಿರಿಯಾನಿ ಪ್ಲೇಟಿಗೆ ಕೈ ಹಾಕುತ್ತಾರೆ. ಅಥರ್ಾತ್ ಪಯಣ ಬೇರೆ ಹಾದಿಗರ ಮೂಲಕ ಮುಂದೆ ಸಾಗುತ್ತದೆ. ಇಂಥ ಆರೋಗ್ಯಕರ ಮಾನವೀಯ ನಿಲುವು ಲಕ್ಷ್ಮಣ ಕೊಡಸೆ ಅವರದು. ಅತ್ಯಂತ ಸಂಯಮದ, ಆದರೆ ಯಾವುದೇ `ಬಿಗಿ'ಯನ್ನು ಓದುಗರಿಗೆ ತಾರದ, ವಿಶಿಷ್ಟ ಬರವಣಿಗೆ ಇಲ್ಲಿದೆ. ಕಥಾನಕ ಮತ್ತು ಭಾಷೆ ಮೇಲಿನ ಹಿಡಿತ ಕೊಡಸೆಯವರನ್ನು ಇನ್ನೂ ಹೆಚ್ಚು ವಿಸ್ತಾರವಾದ ವಸ್ತು ನಿರ್ವಹಣೆಗೆ ಪ್ರಚೋದಿಸುವಂತಿದೆ.

`ಪಯಣ'ದ ಇಷ್ಟುದ್ದ ಹಾದಿಯಗುಂಟ ಒಂದೇ ಒಂದು ಹೆಣ್ಣಾಗಲೀ, ಅವಳ ಸೆರಗಿನ ಗಾಳಿಯಾಗಲೀ ಸುಳಿಯದಿರುವುದು ಸ್ವಲ್ಪ ವಿಚಿತ್ರ ಹಾಗೂ ಅಸಂಗತ ಅನ್ನಿಸುತ್ತದೆ. ಯಾಕೆ ಹೀಗೆ ಅಂತ ಕಾದಂಬರಿಕಾರರನ್ನೇ ಕಟಕಟೆಯಲ್ಲಿ ನಿಲ್ಲಿಸಬೇಕು.
..................................................
- ಚಂಪಾ (ಸಂಕ್ರಮಣ 385 ಸಂಚಿಕೆಯಲ್ಲಿ)
.................................................

ಭೂಮಿ ಹುಣ್ಣಿಮೆ (ಕಾದಂಬರಿ)
ಇದು ಅನಿಸಿಕೆ ಮಾತ್ರ. ವಿಮರ್ಶೆಯಲ್ಲ

ಬಾಳಸಂಗಾತಿ ಸ್ವರಾಂಬ ( ಕೆನರಾ ಬ್ಯಾಂಕ್ ನಿವೃತ್ತ ಸೀನಿಯರ್ ಮ್ಯಾನೇಜರ್)
ಮಲೆನಾಡಿನ ರೈತಾಪಿ ಶೂದ್ರ ಸಮುದಾಯಗಳ ಬದುಕಿನ ಪಲ್ಲಟಗಳನ್ನು; ಕಾಲಾಂತರದಲ್ಲಿ ಆದ ಕುಟುಂಬಗಳಲ್ಲಿ ಮೌಲ್ಯ ಬದಲಾವಣೆಗಳನ್ನು ಅತ್ಯಂತ ಸಾವಧಾನದಿಂದ, ಪಕ್ವವಾದ ದೃಷ್ಟಿಕೋನದಿಂದ ಸರಳ ಹಾಗೂ ಕೃತಕವಲ್ಲದ ಸಹಜ ಚೆಲುವಿನ ಭಾಷೆಯ ಮೂಲಕ ತೆರೆದಿಡುವ ಈ ಕಾದಂಬರಿ ನಿಜಕ್ಕೂ ಅಪರೂಪದ ಗುಣವನ್ನು ಹೊಂದಿದೆ. ಮಲೆಗಳಲ್ಲಿ ಮದುಮಗಳು, ಕಾನೂರು ಹೆಗ್ಗಡತಿ, ಚಿದಂಬರ ರಹಸ್ಯ (ಮತ್ತು ತೇಜಸ್ವಿ ಅವರ ಕಥೆಗಳು) ಮಲೆನಾಡಿನ ಶೂದ್ರರ ಬದುಕಿನ ಚೆಲುವನ್ನು ಒಂದು ಬಗೆಯಲ್ಲಿ ಸೆರೆ ಹಿಡಿದರೆ ಈ ಕಾದಂಬರಿ ಅದೇ ಕೆಲಸವನ್ನು ಇನ್ನೊಂದು ಅಂಚಿನಲ್ಲಿ ನಿಂತು ಮಾಡುತ್ತದೆ. 

ಮುಂಜಾವಿನ ಸರಳ ವಿವರಣೆಯೊಂದಿಗೆ ಆರಂಭವಾಗುವ ಕಥೆ ಬೆಳೆಯುತ್ತ ಸುರುಳಿಯಂತೆ ಸುತ್ತಿಸುತ್ತಿ ಅತ್ಯಂತ ಸಂಕೀರ್ಣ ಪದರುಗಳನ್ನು ಬಿಡಿಸುತ್ತ ಹೋಗುವ ಪರಿ ಮನೋಜ್ಞವಾಗಿದೆ. ಮಲೆನಾಡಿನ ಸಾಂಸ್ಕೃತಿಕ ವಿವರಗಳು ಸೊಗಸಾಗಿ ದಾಖಲಾಗಿವೆ. ಜತೆಗೆ, ಅಲ್ಲಿನ ಒಟ್ಟಾರೆ ಬದುಕು ರೂಪಾಂತರ ಪ್ರಕ್ರಿಯೆಗೆ ಒಳಗಾಗುತ್ತಿರುವುದನ್ನು ಸಮರ್ಥವಾಗಿ ದಾಖಲಿಸುತ್ತವೆ. 
ಮೇಲುನೋಟಕ್ಕೆ ಸಣ್ಣ ಗ್ರಾಮದಿಂದ ಪಟ್ಟಣ ಸೇರಿದ ಇಬ್ಬರು ಅಣ್ಣತಮ್ಮಂದಿರ ಕಥೆಯನ್ನು ಇದು ಹೇಳುವಂತೆ ಕಂಡರೂ ಬೆಳೆಯುತ್ತ ಅದು ಪಡೆದುಕೊಳ್ಳುವ ಅರ್ಥ ಶ್ರೀಮಂತಿಕೆ ಬೆರಗುಗೊಳಿಸುವಂತಿದೆ. ಒಂದು ಪ್ರದೇಶದ ಶೂದ್ರ ಸಮುದಾಯಗಳ ತಾಪತ್ರಯಗಳು, ನೋವು, ದುಃಖ ಮತ್ತು ಅದಕ್ಕೆ ಘನತೆಯಿಂದ ಅವರು ಸ್ಪಂದಿಸುವ ರೀತಿ ಮೆಚ್ಚುಗೆಗೆ ಪಾತ್ರವಾಗುವಂತಿವೆ.
ಪ್ರತಿ ಪಾತ್ರವೂ ಪರಿಚಯವಾಗುವುದರೊಂದಿಗೆ, ಅದರೊಂದಿಗೆ ಸಹಜವಾಗಿ ಹುಟ್ಟಿಕೊಳ್ಳುವ ಬದುಕಿನ ವಿಷಾದ, ನೋವು, ಖುಷಿಗಳನ್ನು ಒಳಗೊಂಡ ಸಂಗತಿಗಳನ್ನು ಕಟ್ಟಿರುವ ಶೈಲಿ ಸಹಜ ಮತ್ತು ಸುಂದರವಾಗಿವೆ. ಈ ಎರಡು ಗುಣಗಳೇ ಕಾದಂಬರಿಯ ಅರ್ಥವನ್ನು ಹಿಗ್ಗಿಸಲು ಸಹಕಾರಿಯಾಗಿವೆ. 

ರತ್ನ ಮತ್ತು ಶಿವಮೂತರ್ಿಗಳ ಮುಗ್ಧತೆ, ನೇರ ಸ್ವಭಾವ ಮನಮುಟ್ಟುವಂತಿದೆ. ಜಯಪ್ಪ-ಚಂದ್ರಮ್ಮ್ಕ; ಶಂಕರ-ಹೊನ್ನಮ್ಮರ ಪಾತ್ರಗಳೂ ಅಷ್ಟೇ ಪರಿಣಾಮಕಾರಿಯಾಗಿ ಮೂಡಿಬಂದಿವೆ. ಒಂದು ಜೋಡಿ ಮನುಷ್ಯ ಸಹಜತೆಯನ್ನು, ಬದುಕಿನ ಮೌಲ್ಯಗಳನ್ನು ಎಚ್ಚರದಿಂದ ಕಾಪಾಡಿಕೊಂಡು ಬಂದು ಸಾರ್ಥಕತೆ ಕಂಡುಕೊಂಡರೆ ಇನ್ನೊಂದು ಜೋಡಿ ತಮಗರಿವಿಲ್ಲದೆ ನಗರವಾಸದ ಕೃತಕತೆಯನ್ನೇ ಜೀವನಶೈಲಿಯಾಗಿಸಿಕೊಂಡು ಮುಗ್ಧತೆ ಕಳೆದುಕೊಂಡು ರಾಕ್ಷಸರಾಗುವ ಬಗೆ ಬಹಳ ಕಾಲ ಕಾಡುತ್ತದೆ. ಹಾಗೆಂದು ನಿರೂಪಕ ಎಲ್ಲಿಯೂ ಈ ಜೋಡಿಯನ್ನು ಏಕಪಕ್ಷೀಯವಾಗಿ ದೂರುವಂತಹ ಶೈಲಿಯನ್ನು ಬಳಸದಿರುವುದು, ಅತ್ಯಂತ ಮುಕ್ತನಾಗಿರುವುದು ಇಲ್ಲಿನ ವಿಶೇಷವಾಗಿದೆ. ಶಂಕರನ ಬದುಕಿನ ವಿವರಗಳು ಬಂದಲ್ಲಿ ಆತ ಹಳೆಯ ಬದುಕಿನ ನೆನಪುಗಳ ಲಹರಿಯಲ್ಲಿ ಮುಳುಗಿದಾಗ ಕಾದಂಬರಿ ಭಾವಗೀತಾತ್ಮಕವಾಗುತ್ತದೆ. ಈ ಭಾಗಗಳು ಚೆಲುವಾಗಿವೆ. ಆತ ನೆನಪಿಸಿಕೊಳ್ಳುವ ಭೂಮಿ ಹುಣ್ಣಿಮೆ, ದೀಪಾವಳಿಯ ನೆನಪುಗಳಂತೂ ಬಹಳ ಸುಂದರವಾಗಿ ಮೂಡಿಬಂದಿವೆ.
ಗಂಗಕ್ಕ-ದುಗ್ಗಬಾವ ಮತ್ತು ಅವರ ಬದುಕಿನ ವಿವರಗಳು ಹಾಗೂ ಮಗುವಿನಿಂದಾಗಿ ಗಂಗಕ್ಕ ಅನುಭವಿಸುವ ಸಂಕಟ ಬಹಳ ಚೆನ್ನಾಗಿ ಬಂದಿವೆ. ಗೋಪಾಲಣ್ಣನ, ಕುಬೀರನ ಮಾನವೀಯ ಮುಖಗಳು ಸಹಜವಾಗಿ ಬಂದಿವೆ ಮತ್ತು ಪರಿಣಾಮಕಾರಿಯಾಗಿವೆ. ಕಮಲಕ್ಕ, ರಮೇಶ, ಗೋವಿಂದಣ್ಣ ಹೀಗೆ ಪ್ರತಿ ಸಣ್ಣ ಪಾತ್ರವೂ ಮುಖ್ಯ ಭೂಮಿಕೆಯಾಗಿ ಕಾರ್ಯನಿರ್ವಹಿಸುವುದು ನಿರೂಪಕನ ಸಾಮಥ್ರ್ಯವನ್ನು; ಸಂಯಮವನ್ನು ತೋರಿಸುವಂತಿವೆ. ಈ ಕಾದಂಬರಿ ಒಂದು ಒಳ್ಳೆಯ ಓದನ್ನು ನೀಡುತ್ತದೆ.    
.........................    
- ಕೇಶವ ಮಳಗಿ
.........................
ವಿಮರ್ಶೆ :

`ಮುಚ್ಚಿಗೆ ಮನೆಯ ಮೇಲಿನ ಕೋಣೆಯಲ್ಲಿ ಮಲಗಿದ್ದ ಜಯಪ್ಪನಿಗೆ ಹೆಂಡತಿ ಪಕ್ಕದಲ್ಲಿ ಮಲಗಿದ್ದರೂ ಭೋರ್ಗರೆಯುವ ಗೊರಕೆ. ಚಂದ್ರಮ್ಮನಿಗೆ ಅದೆಲ್ಲ ಅಭ್ಯಾಸವಾಗಿ ಎಷ್ಟೋ ವರ್ಷಗಳು ಕಳೆದಿವೆ. ಗೊರಕೆಯ ಮಧ್ಯೆ ನಿದ್ದೆ ಮಾಡುವುದು ರೂಢಿಯಾಗಿದೆ. ಜಯಪ್ಪನಿಗೆ ರಾತ್ರಿ ಮಲಗುವುದು ತಡವೇ ಆಗಿದ್ದರೂ ಬೆಳಗಿನ ಜಾವವೇ ಎಚ್ಚರವಾಯಿತು. ಕಿಟಕಿಯಿಂದ ಹೊರಗೆ ಕಣ್ಣು ಹಾಯಿಸಿದ. ಅವನಿಗೆ ತಾನು ಊರಲ್ಲಿ ಮಹಡಿ ಮೇಲಿನ ಕೋಣೆಯಲ್ಲಿ ಮಂಚವಿದ್ದರೂ ಒರಟಾಗಿದ್ದ ಹಾಸಿಗೆಯ ಮೇಲೆ ಮಲಗಿದ್ದು ಕ್ಷಣಮಾತ್ರದಲ್ಲಿ ಅರಿವಿಗೆ ಬಂತು. ದಪ್ಪ ರೀಪಿನ ಸರಳಿನ ಕಿಟಕಿ. ಅವಕ್ಕೆ ಮರದ ಬಾಗಿಲು. ಮುಚ್ಚುವುದು ನೆಪಕ್ಕಷ್ಟೆ. ಮನೆ ಹಳತಾಗಿ ಕಿಟಕಿ ಬಾಗಿಲುಗಳಿಗೆ ಮಸಿ ಹಿಡಿದು, ಮುಚ್ಚಿದರೂ ಬೆರಳು ಗಾತ್ರದ ಪಡವು. ತಣ್ಣನೆಯ ಗಾಳಿ ಮೈ ಕೊರೆಯುವಂತೆ ಸುಳಿಯುತ್ತದೆ. ಊರಿಂದ ತಂದ ನುಣ್ಣನೆಯ ಉಣ್ಣೆಯ ಶಾಲನ್ನು ಒಳಗೆ ಹಾಕಿ ಅದರ ಮೇಲೆ ಚಾದರದಂತಹ ಹೊದಿಕೆಯನ್ನು ಹಾಕಿದ್ದರೂ ರಾತ್ರಿ ಒಂದು ಹೊತ್ತಿನಲ್ಲಿ ಚಳಿಗಾಳಿ ನುಗ್ಗಿದ ಕಾರಣ ಕಾಲದಸಿ ಇದ್ದ ಒರಟು ಕಂಬಳಿಯನ್ನು ಎಳೆದುಕೊಂಡಿದ್ದ. ರಾತ್ರಿ ಕತ್ತಲಿನಲ್ಲಿ ಪತ್ನಿ ಚಂದ್ರಮ್ಮ ಹೊದಿಕೆಯ ರಕ್ಷಣಾ ವಲಯದಿಂದ ಹೊರಗುಳಿದದ್ದು ಗಮನಕ್ಕೆ ಬಂದು ಅವಳಿಗೂ ಹೊದಿಸಿದ. ನಿದ್ದೆಯ ಮಂಪರಿನಲ್ಲಿ ಏನನ್ನೋ ಗೊಣಗಿಕೊಂಡು ಅವಳು ಇವನಿಗೆ ಬೆನ್ನು ಹಾಕಿ ಮಲಗಿಕೊಂಡಿದ್ದಳು' (ಪುಟ 1).

ಲಕ್ಷ್ಮಣ ಕೊಡಸೆ ಅವರ `ಭೂಮಿ ಹುಣ್ಣಿಮೆ' ಕಾದಂಬರಿ ಆರಂಭವಾಗುವುದು ಹೀಗೆ. ಕೌಟುಂಬಿಕ ವಾತಾವರಣದಿಂದ ಕಾದಂಬರಿ ಆರಂಭಗೊಳ್ಳುತ್ತದೆ. ಗೊರಕೆಯಲ್ಲಿ ನಿಸ್ಸೀಮನಾದ ಜಯಪ್ಪನ ಎಚ್ಚರದ ಸ್ಥಿತಿಯನ್ನು ಆಸಕ್ತಿಯಿಂದ ನಿರೂಪಿಸುವ ಕಾದಂಬರಿ ಕುಟುಂಬದ ಒಳಹೊರಗನ್ನ ಸೂಕ್ಷ್ಮವಾಗಿ ಗಮನಿಸುವತ್ತ ಕ್ರಿಯಾಶೀಲವಾಗುತ್ತದೆ. ಒಂದಾನೊಂದು ಕಾಲದ ಸಮೃದ್ಧ ಬದುಕನ್ನು ಸಮೃದ್ಧವಾಗಿ ಕಟ್ಟಿಕೊಟ್ಟ ಕಲಾಕೃತಿಗಳು ಕನ್ನಡದಲ್ಲಿ ಹಲವಾರಿವೆ. ಅದರಲ್ಲೂ ಮಲೆನಾಡಿನ ಜನಜೀವನವನ್ನು ಅತ್ಯಂತ ಸಹಜವಾಗಿ ಕುವೆಂಪು, ತೇಜಸ್ವಿ ತಮ್ಮ ಕಥಾಸಾಹಿತ್ಯದಲ್ಲಿ ಸಮರ್ಥವಾಗಿ ಹಿಡಿದಿಡುವುದರ ಮೂಲಕ ಸಹ್ಯಾದ್ರಿ ಜಾನಪದೀಯತೆಯನ್ನು ಮತ್ತು ಅದರ ಅಂತಸ್ಸತ್ವವನ್ನ ಸಹೃದಯರು ಸವಿಯುವಂತೆ ಮಾಡಿದರು. ಈಗಲೂ ಅದು ಚಚರ್ಿತವಾದ ಸಂಗತಿಯೇ. ಮಲೆನಾಡಿನ ಶೂದ್ರ ನೆಲೆಗಳ ಬದುಕನ್ನು ಮತ್ತು ಪರಿವರ್ತನಶೀಲತೆಯನ್ನ ಕುವೆಂಪು, ತೇಜಸ್ವಿಯವರಿಗಿಂತ ಭಿನ್ನ ನೆಲೆಯಲ್ಲಿ ನೋಡಿದ ಪ್ರಾಮಾಣಿಕ ಪ್ರಯತ್ನವಾಗಿ `ಭೂಮಿ ಹುಣ್ಣಿಮೆ' ಭಿತ್ತಿ ಇದೆ.

ಮಲೆನಾಡಿನ ಪರಿಸರದ ಕೃಷಿ ಚಟುವಟಿಕೆಯ ಸಣ್ಣ ಸಂಗತಿಯೂ ಜೀವನಾನುಭವವೂ ಮರೆಯಾಗದಂತೆ ವ್ಯಕ್ತಗೊಂಡಿರುವುದೇ ಈ ಕಾದಂಬರಿಯ ವಿಶೇಷ.

`ಮರದ ಹಲಗೆಯನ್ನ ಬಂದಾಬಸ್ತಾಗಿ ಸಟ್ಟು ಗೋಡೆಗೆ ಆನಿಸಿದ ಏಣಿಯಿಂದ ಮಹಡಿಯಿಂದ ಇಳಿದ ಜಯಪ್ಪ ಜಗುಲಿಗೆ ಬಂದ. ಅಲ್ಲಿ ಕತ್ತಲು ಇನ್ನೂ ಉಳಿದಿತ್ತು. ಜಗುಲಿಯ ಮೇಲೆ ಅಡಿಕೆ ಸುಲಿಯಲು ಬಂದಿದ್ದ ಪಕ್ಕದ ಮನೆಯ ಹೆಂಗಸು ಕಂಬಳಿ ಹೊದ್ದು ಮಲಗಿತ್ತು. ಅಡಿಕೆ ಸಿಪ್ಪೆಯ ರಾಶಿ. ಅಡಿಕೆ ಸುಲಿದವರು ಕೆಲಸ ಮುಗಿಸಿ ಏಳುವಾಗ ಅಡಿಕೆ ಮಣೆಯನ್ನ ಅಡ್ಡ ಮಲಗಿಸಿ ಹೋಗಿದ್ದರು. ಅಡಿಕೆ ಸುಲಿಯುವ ಮೆಟ್ಟುಗತ್ತಿ ಸಿಪ್ಪೆಯೊಳಗೆ ಹುದುಗಿದ್ದವು. ಮನೆಯಲ್ಲಿ ಹಿರಿಯ ಯಜಮಾನರಿದ್ದಿದ್ದರೆ ಇಂತಹ ಕೆಲಸಗಳಿಗೆ ಬೆಳಿಗ್ಗೆ ಬೆಳಿಗ್ಗೆಯೇ ಮಂಗಳಾರತಿ ಮಾಡದೆ ಬಿಡುತ್ತಿರಲಿಲ್ಲ ಎಂದುಕೊಂಡ ಜಯಪ್ಪ ಅಡಿಕೆ ಮಣೆಗಳನ್ನ ನಿಧಾನವಾಗಿ ಕತ್ತಿ ಕೆಳಜಗುಲಿಯಲ್ಲಿ ಅದಕ್ಕಾಗಿಯೇ ಮಾಡಿದ್ದ ಜಾಗದಲ್ಲಿ ಇರಿಸಿದ. ಯಾರಾದರೂ ಎಡವಿ ಬಿಟ್ಟರೆ ಮೆಟ್ಟುಗತ್ತಿಯಿಂದ ಹಾನಿ ಮಾಡಿಕೊಳ್ಳಬಾರದೆಂದು ಎಚ್ಚರಿಕೆಯನ್ನು ಅವನು ವಹಿಸಿದನಾದರೂ ಅಂತಹ ಅಪಾಯಕ್ಕೆ ಗುರಿಯಾಗುವ ಯಾವ ಮಕ್ಕಳೂ ಮನೆಯಲ್ಲಿಲ್ಲ ಎಂಬುದೂ ಅವನ ಗಮನಕ್ಕೆ ಬಂತು' (ಪುಟ 2)- ಹೀಗೆ ಬದುಕನ್ನು ಕಾಣುವ ಸೂಕ್ಷ್ಮತೆ, ಅದರ ಬಗೆಗಿನ ಕಾಳಜಿ ಕಾದಂಬರಿಯ ಪುಟ ಪುಟಗಳಲ್ಲಿಯೂ ವ್ಯಕ್ತವಾಗುವ ಅಂಶವಾಗಿದೆ. ಹಳ್ಳಿಗಳ ಗೃಹ ನಿಮರ್ಾಣ ಸ್ಥಿತಿಯನ್ನು, ದೈನಂದಿನ ಕಾರ್ಯ ಕಲಾಪಗಳನ್ನು ಎಳೆಎಳೆಯಾಗಿ ವಿವರಿಸುವುದನ್ನು ಗಮನಿಸಿದರೆ ಬದುಕಿನ ಸಂಚಲನವನ್ನ ಪರಿಪೂರ್ಣವಾಗಿ ಕಾದಂಬರಿ ಗ್ರಹಿಸಿದೆ ಎನಿಸದಿರದು. ಅದರಲ್ಲೂ ಪರಿಪಕ್ವಗೊಂಡ ಜೀವನಾನುಭವಗಳು ಸಾಂದಭರ್ಿಕವಾಗಿ ಹೊಮ್ಮುವ ಬಗೆಯಿಂದಲೂ ಕೃತಿಯ ಸ್ವರೂಪವೇ ವಿನೂತನವೆನಿಸುತ್ತದೆ.

ಗ್ರಾಮ ನೆಲೆಯಿಂದ ನಗರದ ನೆಲೆಗೆ ಸಂದ ಜಯಪ್ಪ, ಶಂಕರ ಎಂಬ ಇಬ್ಬರು ಅಣ್ಣ ತಮ್ಮಂದಿರ ಜೀವನ ಕಥೆಯನ್ನು ವ್ಯಕ್ತಗೊಳಿಸುತ್ತಿರುವಂತೆ ಹೊರನೋಟದಲ್ಲಿ ಕಾಣಿಸಿದರೂ ಅದರ ವಿಕಸನಶೀಲತೆಯಲ್ಲಿ ಲಭಿಸುವ ಪ್ರತಿಷ್ಠೆ, ಅವಕಾಶ ಮತ್ತು ಅನಾರೋಗ್ಯಕರ ಬೆಳವಣಿಗೆಯ ಬಗೆಗೆ ಆಶ್ಚರ್ಯ, ಕುತೂಹಲಗಳು ಮೂಡುತ್ತವೆ. ಆ ಮೂಲಕ ಮನುಷ್ಯನ ಒಟ್ಟಾರೆ ಬೆಳವಣಿಗೆಯನ್ನ ಬೆರಗುಗಣ್ಣಿನಿಂದ ನೋಡುವ ತವಕ ಉಂಟಾಗದಿರದು. ಈ ಕಾದಂಬರಿಯಲ್ಲಿ ಶಂಕರ- ಹೊನ್ನಮ್ಮ ಸಹಜ ಬದುಕನ್ನ ಬಾಳಿ ಜನಪದ ತತ್ತ್ವ್ವಗಳಿಗೆ ಬದ್ಧರಾದವರು. ಹಾಗಾಗಿ ಈ ದಂಪತಿಗಳು ಮೌಲ್ಯಗಳ ಪರವಾಗಿಯೇ ಕಾಣಿಸುತ್ತಾರೆ. ಆದರೆ, ಜಯಪ್ಪ- ಚಂದ್ರಮ್ಮ ಬಣ್ಣದ ಬದುಕಿಗೆ ಆಕಷರ್ಿತರಾದವರು, ಅದೇ ನಿಜವಾದ ಜೀವನಶೈಲಿ ಎಂದು ಭಾವಿಸಿ ತಮ್ಮನ್ನು ತಾವು ಮೈಮರೆತವರಾಗಿ ಕಾಣುತ್ತಾರೆ. ಹಾಗಾಗಿ ಈ ದಂಪತಿಗಳ ಬದುಕು ಹಲವು ಶಂಕೆಗಳಿಗೂ ಆಸ್ಪದವಾಗುವುದುಂಟು. ಒಂದೇ ಮೂಲದಿಂದ ಬಂದು ಬೇರೆ ಬೇರೆ ನೆಲೆಗಳನ್ನು ಕಂಡುಕೊಂಡ ಸೋದರ ಕುಟುಂಬಗಳ `ಸಹಜತೆ' ಮತ್ತು `ಸ್ಥಿತ್ಯಂತರ'ವನ್ನು ಕಾದಂಬರಿಕಾರ ಪಕ್ಷಪಾತ ದೃಷ್ಟಿಯಿಂದ ನಿರ್ವಹಿಸುವುದೇ ಇಲ್ಲ. ದೂರು ಪೆಟ್ಟಿಗೆಯಲ್ಲಿ ನಿಲ್ಲಬೇಕಾದ ಅಪರಾಧಿತನದ ಹೊಣೆಯನ್ನ ಹೊರಿಸುವ ಶೈಲಿ ಬಳಕೆಯಾಗದೆ ನಿಲರ್ಿಪ್ತ ಧೋರಣೆ ತಾಳುವುದು ಗಮನಿಸತಕ್ಕ ಅಂಶ. ನಂಬಿದ ಮೌಲ್ಯಗಳನ್ನು, ಸತ್ಯಗಳನ್ನು ಮತ್ತು ಅವನ್ನು ಮೀರುವ ಕುಟುಂಬದ ಇಂಗಿತವನ್ನು ಗ್ರಹಿಸುವ, ಮೌಲ್ಯೀಕರಿಸುವ ಜವಾಬ್ದಾರಿಯನ್ನ ಓದುಗರಿಗೇ ಬಿಟ್ಟಿರುವುದು ಕಾದಂಬರಿಯ ಮತ್ತೊಂದು ವಿಶಿಷ್ಟತೆ.

ವರ್ತಮಾನದಲ್ಲಿದ್ದು ಭೂತವನ್ನು ನೆನಪಿಸುವ `ಭೂಮಿ ಹುಣ್ಣಿಮೆ'ಯಲ್ಲಿ ಪರಂಪರಾಗತ ಬದುಕಿನ ಬೇರುಗಳು ಸಮೃದ್ಧವಾಗಿ ಹರಡಿಕೊಂಡಿವೆ. ಇಲ್ಲಿ ಬದುಕೇ ಬೇರೆಯಾಗಿ ಆಚರಣೆಯೂ ಬೇರೆಯಾಗಿ ಕಂಡಿಲ್ಲ. ಅವೆರಡಕ್ಕೂ ಅವಿನಾಭಾವ ಸಂಬಂಧವಿದೆ. ಕುಲವೃತ್ತಿಯ ಭಾಗವಾಗಿ ಜರುಗುವ ಆಚರಣೆಗಳ ಸರಮಾಲೆಯೇ ಇಲ್ಲಿದೆ. ಅಂದರೆ ಪರಂಪರೆಯಿಂದ ಬಂದ ಆಚರಣೆಗಳನ್ನು, ಸಂಪ್ರದಾಯಗಳನ್ನ ನೆನಪಿಗೆ ತರುತ್ತಲೇ ಆ ಸಮೃದ್ಧಿಯ ಗರ್ಭದಿಂದಲೇ ವಿಘಟನೆಗೊಳ್ಳುವ ಕೌಟುಂಬಿಕ ಚಿತ್ರಣದತ್ತ ಓದುಗನ ಗಮನ ಹರಿಯುವಂತೆ ಮಾಡುವಲ್ಲಿ ಕಾದಂಬರಿಯ ಯಶಸ್ಸಿದೆ.

ಕುಲಕಸುಬುಗಳಿಗೆ ಅಂಟಿಕೊಂಡಿದ್ದ ಸಮುದಾಯಗಳು ಆಧುನಿಕ ಶಿಕ್ಷಣದ ಫಲಾಫಲಗಳನ್ನು ಅನುಭವಿಸುವಾಗ ಎದುರಾಗುವ ಸಮಸ್ಯೆ ಸವಾಲುಗಳು ಮತ್ತು ಕುಲವೃತ್ತಿಗಳಲ್ಲಾದ ಪಲ್ಲಟಗಳ ವಿವರಗಳು ಕಾದಂಬರಿಯುದ್ದಕ್ಕೂ ಬಿತ್ತರಗೊಂಡಿವೆ. ಕಾದಂಬರಿಯ ಬೆನ್ನುಡಿಯಲ್ಲಿ ಕೃಷ್ಣಮೂತರ್ಿ ಹನೂರು ಹೇಳುವಂತೆ `ಕಾದಂಬರಿಯ ಮುಖ್ಯ ಪಾತ್ರವೊಂದು ತನ್ನ ಬಾಲ್ಯ ಕಾಲದ ಕನಸಿನ ಗ್ರಾಮಕ್ಕೆ ಉತ್ಸಾಹದಿಂದ ಪ್ರಯಾಣಿಸುವಲ್ಲಿ ದಾರಿಯ ಗೋಡೆಯೊಂದರ ಮೇಲೆ 'ಅಕ್ಷರತುಂಗಾ ಮೂರುಕೋಟಿ ನುಂಗ' ಎಂಬ ವ್ಯಂಗ್ಯ ಬರೆಹವೂ ಕಾಣಿಸಿಕೊಳ್ಳುತ್ತದೆ. ಅಂದರೆ ಒಂದು ಸಂಸಾರ ಕಥೆ ಅದರ ಕುಲವೃತ್ತಿಯೇ ಅಲ್ಲದೆ ಪರಿಸರದ ಜಾನಪದ ಆಚರಣೆಗಳಿಂದ ಹೊರಡುವ ಕಾದಂಬರಿಯ ಕಥಾನಕ, ಕ್ರಮೇಣ ಅದೇ ದೇಶದ ವಿದ್ಯಮಾನ ಎಂಬುದರ ಕಡೆಗೂ ತನ್ನ ಬಿಸಿಲಕೋಲನ್ನು ಚಾಚುತ್ತದೆ'. ಪ್ರಯಾಣ ಮತ್ತು ಬದುಕಿನ ಪಯಣವನ್ನ ಒಟ್ಟೊಟ್ಟಿಗೆ ಬೆಳೆಸುವಾಗ ಕಷ್ಟ ಸುಖಗಳ ಕಥಾನಕಗಳು ಹಲವಾರು: ರೈತರ ಕಷ್ಟಗಳು (ಪು.13), ಬದಲಾದ ಕುಟುಂಬ ಪರಿಸ್ಥಿತಿ (ಪು.14), ಶೈಕ್ಷಣಿಕ ಸ್ಥಿತಿಗತಿ (ಪು. 33), ಟ್ಯೂಷನ್ನಿನಂತಹ ಅಪರೂಪದ ಸಂಗತಿಗಳು (ಪು.34), ಜಕಣಿ ಕೂಡಿಸುವುದು (ಪು. 73), ದೀಪಾವಳಿ (ಪು. 94), ನೋನಿ (ಪು. 96), ಬಲೀಂದ್ರಪೂಜೆ (ಪು.98) ಚೌಡಿಹಬ್ಬ (ಪು. 72), ಮಲೆನಾಡಿನ ಸ್ವರೂಪ, ಮನೆಯ ಪರಿಸರ, ಹಳ್ಳಿಯ ಸಂಬಂಧಗಳು, ಅಲ್ಲಿಯ ನಡವಳಿಕೆಗಳು- ಇವೆಲ್ಲ ಕಾದಂಬರಿಕಾರನ ನೆನಪಿನಂಗಳದಲ್ಲಿ ಸುಸಂದರ್ಭವನ್ನು ಹುಡುಕಿಕೊಂಡಿವೆ. ಆದ್ದರಿಂದಲೇ ಕೌಟುಂಬಿಕ ವಿದ್ಯಮಾನಗಳ ಆಜುಬಾಜಿನಲ್ಲಿ ಈಗಾಗಲೇ ಕಣ್ಮರೆಯಾಗುತ್ತಿರುವ ಸಾಂಸ್ಕೃತಿಕ ಬದುಕನ್ನು ಕಟ್ಟಿಕೊಡುವ ನಮ್ರ ಪ್ರಯತ್ನವಾಗಿಯೂ ಕಾದಂಬರಿ ಕಾಣಿಸುತ್ತದೆ.

ತೇಜಸ್ವಿಯವರ `ಕವರ್ಾಲೊ' ಕಾದಂಬರಿಯ ಬರವಣಿಗೆಯ ಕ್ರಮವನ್ನು ಇದು ನೆನಪಿಸುತ್ತದೆ. ಸಾಮಾನ್ಯವಾಗಿ ಸರಳವಾದ ಬರವಣಿಗೆ ಎನಿಸಿದರೂ ಏನೆಲ್ಲ ಬದುಕಿನ ಅದ್ಭುತಗಳನ್ನ, ರಹಸ್ಯಗಳನ್ನು ಸರಳ ಭಾಷೆಯಲ್ಲಿ ತೇಜಸ್ವಿ ಹೇಳತೊಡಗುತ್ತಾರೆಂಬ ಸಂಗತಿಯೇ ರೋಮಾಂಚನಕಾರಿಯಾದುದು. ಅದೇ ರೀತಿ ಲಕ್ಷ್ಮಣ ಕೊಡಸೆ ಅವರ ಈ ಕಾದಂಬರಿಯು ಕೌಟುಂಬಿಕ ಸ್ಥಿತಿಗತಿ, ಜೀವನ ಕ್ರಮ, ಶೂದ್ರರ ವಿದ್ಯಾಭ್ಯಾಸ, ಆಚರಣೆಗಳು, ಭೂಮಿಯ ಮೇಲಿನ ಹೋರಾಟಗಳು, ವಿಕೃತಿಗಳು- ಇವೆಲ್ಲವನ್ನ ತುಂಬ ಆತ್ಮೀಯವಾಗಿ ಸುಲಲಿತವಾದ ಗದ್ಯದಲ್ಲಿ ಅನಾವರಣಗೊಳಿಸುತ್ತದೆ. ಜಯಪ್ಪ, ಶಂಕರ, ನಾಗನಾಯ್ಕ, ಕರೇನಾಯ್ಕರ ಕುಟುಂಬಗಳ ಕತೆ ಇಲ್ಲಿ ನೆಪ ಮಾತ್ರ. ಜಯಪ್ಪ, ಶಂಕರನ ಸಂಸಾರಗಳಂತೆ ನಾಗನಾಯ್ಕರ ಕುಟುಂಬದ ವಾತಾವರಣಕ್ಕೂ ಕರೆನಾಯ್ಕರ ಕುಟುಂಬದ ವಾತಾವರಣಕ್ಕೂ ಇದ್ದ ಅಂತರವನ್ನು ಗ್ರಹಿಸುವುದೂ ಸಹ ಇಲ್ಲಿ ಮುಖ್ಯ ಉದ್ದೇಶವಾಗಿದೆ. ಈ ಜೀವನಶೈಲಿಗಳ ಆಯ್ಕೆಯ ಮೂಲಕ ಬದಲಾವಣೆಯನ್ನ ಗ್ರಹಿಸುವ ಗಂಭೀರ ಪ್ರಯತ್ನವಾಗಿಯೂ ಇದು ಕಂಡು ಬರುತ್ತದೆ. ಸಾಧಾರಣ ಸಂಗತಿಯನ್ನೂ ಮನುಷ್ಯನ ಬವಣೆಯೊಂದಿಗೆ ಚಿತ್ರಿಸುವಾಗ ಸಮೃದ್ಧವಾದ ಬದುಕೊಂದು ಕಣ್ಮರೆಯಾಗುತ್ತಿದೆ ಎಂಬ ಭಾವ ಹೊಮ್ಮಿದರೂ ಕಾದಂಬರಿಕಾರನಿಗೆ ಅದರ ಬಗೆಗೆ ವ್ಯಥೆ ಇದೆಯೇ ಅಥವಾ ಸಮಾಧಾನವಿದೆಯೋ ತಿಳಿಯುವುದಿಲ್ಲ. ಅಂದರೆ ಅಷ್ಟು ನಿಲರ್ಿಪ್ತರಾಗಿ ಬದುಕಿನ ಮುಖಗಳನ್ನ ಮುಖಾಮುಖಿಯಾಗಿಸುತ್ತಾರೆ. ಒಟ್ಟು ಬದುಕಿನ, ಸಮೃದ್ಧತೆಯನ್ನು ಬಿಂಬಿಸುವ ಈ ಕಾದಂಬರಿಗೆ 'ಭೂಮಿ ಹುಣ್ಣಿಮೆ' ಎಂದು ನಾಮಕರಣ ಮಾಡಿರುವುದು ಔಚಿತ್ಯಪೂರ್ಣವಾಗಿದೆ. `ಭೂಮಿ ಹುಣ್ಣಿಮೆ ಹಬ್ಬವೆಂದರೆ ಬೆಳೆದು ನಿಂತ ಬತ್ತದ ಪೈರಿನ ಎದುರಿಗೆ ಪೂಜೆ ಸಲ್ಲಿಸಿ ಸಮೃದ್ಧಿಯನ್ನ ಬೇಡುವ ಸಂದರ್ಭ'. ಮಳೆಗಾಲ ಕಳೆದು ಗದ್ದೆಗಳಲ್ಲಿ ಪೈರು ತುಂಬಿದಾಗ ಬಸಿರಿಯಂತೆ ಭೂಮಿ ಕಂಗೊಳಿಸುತ್ತದೆ. ಬಸಿರಿಗೆ ಬಯಕೆ ಸಲ್ಲಿಸುವಂತೆ ರೈತರು ಈ ಹಬ್ಬ ಮಾಡುತ್ತಾರೆ. ಸಮೃದ್ಧಿಯ ಸಂಕೇತವಾಗಿರುವ ಇಂಥ ಆಚರಣೆಗಳೆಲ್ಲ ಇಂದು ಕಣ್ಮರೆಯಾಗುತ್ತಿವೆ ಎಂಬ ಅಸಮಾಧಾನದ ದನಿ ಇರುವಂತೆ, ಬದುಕೇ ಬದಲಾವಣೆಗೊಳಪಟ್ಟಿರಬೇಕಾದರೆ ಅದರ ಭಾಗವಾದ ಆಚರಣೆಗಳೂ ಕೊಂಚವಾದರೂ ಬದಲಾಗಲೇ ಬೇಕಲ್ಲವೇ? ಎಂಬ ಸಮಾಧಾನದ ಭಾವನೆಯೂ ಇದ್ದಂತಿದೆ.

`...ರತ್ನ ಕೊಟ್ಟ ಕಾಫಿ ಕುಡಿದ ಮೇಲೆ ಬೆಳಗಿನ ಒತ್ತಡದಿಂದ ಎದ್ದ. ಸ್ನಾನದ ಕೋಣೆಗೆ ಹೊಂದಿಕೊಂಡಿದ್ದ ಶೌಚಾಲಯದತ್ತ ತೆರಳಿದ. ಮನೆಯ ಹಿಂದೆ ಎತ್ತರದ ಜಾಗದಲ್ಲಿ ನೀರಿನ ಶೇಖರಣೆಗೆ ದೊಡ್ಡ ತೊಟ್ಟಿ ಇದೆ. ಅದರಿಂದಲೇ ಅಡುಗೆ ಮನೆಗ,ೆ ಬಚ್ಚಲು ಮನೆಗೆ ಕೊಳವೆ ಹಾಕಿ ಸಂಪರ್ಕ ಪಡೆಯಲಾಗಿದೆ. ಆದರೆ ಶೌಚಾಲಯಕ್ಕೆ ತೊಟ್ಟಿಯಿಂದ ನೇರ ಸಂಪರ್ಕ ಇಲ್ಲ. ಶೌಚಾಲಯದ ಹೊರಗಡೆ ಇನ್ನೊಂದು ಸಣ್ಣ ತೊಟ್ಟಿಯನ್ನು ಕಟ್ಟಿಸಿದ್ದಾರೆ. ಅದರಿಂದ ಶೌಚಾಲಯಕ್ಕೆ ಕೊಳವೆ ಸಂಪರ್ಕ ಕಲ್ಪಿಸಿ ಅಲ್ಲೊಂದು ನಲ್ಲಿ ಇರಿಸಲಾಗಿದೆ. ಸಣ್ಣ ತೊಟ್ಟಿಯಲ್ಲಿ ನೀರಿದ್ದರೆ ಮಾತ್ರ..... ಗಮನ ಹರಿಸಿದ'(ಪುಟ 6)- ಇಂತಹ ವಿವರಣೆಗಳೆಲ್ಲ ತೀರಾ ಸಾಮಾನ್ಯವೆನಿಸಿದರೂ ಪ್ರತಿನಿತ್ಯದ ಅಗತ್ಯಗಳು. ಇವನ್ನ ಸರಿಮಾಡಿಕೊಳ್ಳದಿದ್ದರೆ ಹೇಗೆಂಬ ಪ್ರಶ್ನೆಯೂ ಇದೆ. ಜೊತೆಗೆ ಪ್ರಾದೇಶಿಕ ವೈಶಿಷ್ಟ್ಯದತ್ತಲೂ ಕಾದಂಬರಿಯ ದೃಷ್ಟಿ ಇದೆ. ಹಾಸನದ ಎಳೆಸೌತೆಕಾಯಿ, ಕ್ಯಾತ್ಸಂದ್ರದ ಇಡ್ಲಿ (ಪು.23) ರಾಮಣ್ಣನ ಹೋಟಲು (ಪು.47), ಶಿಕಾರಿ (ಪು.57), ಕೋಳಿ- ಮೀನಿನ ಖಾದ್ಯ, ಇಡ್ಲಿ ತಿನ್ನುವ ರಿವಾಜು, ಏಟಿ ಚಟ್ನಿಯ ರುಚಿ (ಪು. 74)- ಮುಂತಾದವನ್ನ ಹೆಸರಿಸಬಹುದು.

ಕಾದಂಬರಿಯಲ್ಲಿ ಮುಖ್ಯ ಪಾತ್ರಗಳಷ್ಟೇ ಪರಿಣಾಮಕಾರಿಯಾಗಿ ಕುಬೇರ, ಟೇಕಪ್ಪ, ನಾಗನಾಯ್ಕ, ವಾಸಣ್ಣ, ಚಂದ್ರಮ್ಮ, ಕಮಲಮ್ಮ, ರಮೇಶ, ಗೋವಿಂದ, ರತ್ನ, ಶಿವಮೂತರ್ಿ, ಗಂಗಕ್ಕ- ದುಗ್ಗಭಾವ, ಗೋಪಾಲಣ್ಣ ಮುಂತಾದ ಪಾತ್ರಗಳೂ ಪರಿಣಾಮಕಾರಿಯಾಗಿ ಮೂಡಿ ಬಂದಿವೆ. ಕಾದಂಬರಿಯ ಕತೆಯಷ್ಟೆ ಅದನ್ನು ಕೇಳುವವರ ಮನಸ್ಸನ್ನು ಉಲ್ಲಾಸಗೊಳಿಸುವ ನಿರೂಪಣಾ ವಿಧಾನವೂ ಮುಖ್ಯ. ನಿರೂಪಿತ ವಸ್ತು ಮತ್ತು ಲೇಖಕನ ಧೋರಣೆಗೆ ಪ್ರಾಶಸ್ತ್ಯ ದೊರಕಬೇಕು. ಇವೆಲ್ಲವೂ ಇಲ್ಲಿ ಫಲಿಸಿವೆ. ಕುತೂಹಲ ಮೂಡಿಸುವಂತೆ ಹೇಳುವ ರೀತಿ, ಪಾತ್ರಗಳ ಪರಸ್ಪರ ಸಂಬಂಧ, ಉದ್ದೇಶ ಚಿತ್ರಿಸುವ ಕೌಶಲ, ಸನ್ನಿವೇಶಗಳನ್ನು ಆಕರ್ಷಕವಾಗಿ ಚಿತ್ರಿಸುವ ಬುದ್ಧಿ ವಂತಿಕೆ- ಇತ್ಯಾದಿಗಳ ದೃಷ್ಟಿಯಿಂದಲೂ ಕಾದಂಬರಿಯ ಯಶಸ್ಸಿದೆ. ಉತ್ತಮ ಕತೆಗಾರರಾಗಿಯೂ ಪತ್ರಕರ್ತರಾಗಿಯೂ ಖ್ಯಾತಿವೆತ್ತ ಲಕ್ಷ್ಮಣ ಕೊಡಸೆಯವರ ಮಾಗಿದ ಅನುಭವ ಮತ್ತು ಪ್ರಬುದ್ಧವಾದ ಮನಸ್ಸು ಆ ಆಚರಣಾ ಪ್ರಧಾನವಾದ ಕಲಾಕೃತಿಯ ಯಶಸ್ಸಿನ ಹಿನ್ನೆಲೆಯಲ್ಲಿ ಸಂಯಮದಿಂದ ಕಾರ್ಯ ನಿರ್ವಹಿಸಿದೆ. ಆದ್ದರಿಂದಲೇ ಕೇಶವ ಮಳಗಿ ಹೇಳುವಂತೆ `ಈ ಕಾದಂಬರಿ ಒಂದು ಒಳ್ಳೆಯ ಓದನ್ನು ನೀಡುತ್ತದೆ'- ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.
....................................
- ಡಾ. ಜಿ.ಆರ್. ತಿಪ್ಪೇಸ್ವಾಮಿ
(ಭೂಮಿ ಹುಣ್ಣಿಮೆ, ಪ್ರ: ರೂಪ ಪ್ರಕಾಶನ, ನಜರಬಾದ್ ಮೊಹಲ್ಲ, ಮೈಸೂರು- 13, ಪುಟ: 130, ಬೆಲೆ: ರೂ. 85.)
...............................................
`ಸ್ವ'-`ಅನ್ಯ'ದ ಮುಖಾಮುಖಿ

`ಭೂಮಿಹುಣ್ಣಿಮೆ' ಲಕ್ಷ್ಮಣ ಕೊಡಸೆಯವರ ಎರಡನೆಯ ಕಾದಂಬರಿ. ಒಂದರ್ಥದಲ್ಲಿ ಮೊದಲ ಕಾದಂಬರಿ `ಪಯಣ'ದ ಮುಂದುವರಿದ ಕಥಾವಸ್ತುವಿದು. `ಪಯಣ'ದ ಕೇಂದ್ರ ಪಾತ್ರವಾದ ಕರೇನಾಯ್ಕನ ನಂತರದ ಎರಡು ತಲೆಮಾರು ಬದುಕನ್ನು ಪ್ರಸ್ತುತಗೊಳಿಸುವ ಮತ್ತು ಬದುಕಿನ ಅರ್ಥವನ್ನು ಶೋಧಿಸುವ `ಭೂಮಿ ಹುಣ್ಣಿಮೆ' ಕೃತಿಯು ಒಂದು ದಿನದಲ್ಲಿ ನಡೆಯುವ ಘಟನೆಗಳಲ್ಲಿ, ಬಿಚ್ಚಿಕೊಳ್ಳುವ ನೆನಪುಗಳಲ್ಲಿ ತೆರೆದುಕೊಳ್ಳುತ್ತದೆ.

ಮಲೆನಾಡಿನ ಹಳ್ಳಿಯೊಂದರಲ್ಲಿ ಬದುಕನ್ನು ಕಟ್ಟಿದ ಕರೇನಾಯ್ಕನಿಗೆ ಆತ ಬದುಕಿದ್ದ ಹಳ್ಳಿ ಅಲ್ಲಿನ ಜನರೆ ಆತನ ಅಸ್ತಿತ್ವ. ಜಾತಿಯ ಮುಖಂಡನಾಗಿ, ನಾಲ್ಕು ಮಂದಿಗೆ ಸದಾ ಬೇಕಾದವನಾಗಿ ಬದುಕಿದ ಕರೇನಾಯ್ಕ ಹೊರ ಜಗತ್ತನ್ನು ಅರಿಯುವುದು, ನಿಯಂತ್ರಿಸುವುದು ಮತ್ತು ನಿರ್ವಹಿಸುವುದು ತನ್ನೊಳಗೇ ತನ್ನ ಭಾಗವಾಗಿಯೇ ಇರುವ ಹಳ್ಳಿಯಿಂದ. ಕರೇನಾಯ್ಕನ ಬದುಕು ದೇಸಿ ಸಂಸ್ಕೃತಿಯನ್ನು ಪ್ರತಿನಿಧಿಸುವುದಷ್ಟೇ ಅಲ್ಲ, ಆ ಸಂಸ್ಕೃತಿಯ ಒಂದು ಮುಖ್ಯ ಆಯಾಮವೇ ಅವನ ಜೀವನ. ಆತನ ಸಾವಿನ ನಂತರ ಮಕ್ಕಳಾದ ರಾಮಚಂದ್ರ, ಜಯಪ್ಪ, ಶಂಕರ ಹುಟ್ಟಿದ ಮನೆ-ಹಳ್ಳಿ, ಪ್ರಭಾವಿಸಿದ ಪರಿಸರವನ್ನು ಪರಿಭಾವಿಸುವ ರೀತಿ ಕರೇನಾಯ್ಕನ ಜೀವನಕ್ಕೆ ಹೋಲಿಸಿದರೆ ತೆಳು ರಚನೆಯಂಥದ್ದು. ದೇಸಿ ಮತ್ತು ಜಾಗತೀಕರಣದ ಸಂದರ್ಭಕ್ಕೆ ತೆರೆದುಕೊಂಡು ಬದುಕುವ ಇವರ ಜೀವನ ನಿರ್ವಹಣೆಯಲ್ಲೇ ಒಂದು ರೀತಿಯ `ಸಮಯಸಾಧಕತೆ' ದತ್ತಕವಾಗಿದೆ. ಹೀಗಾಗಿಯೇ ಜೀವನಾನುಭವವೇ ತೆಳು ರಚನೆಯಾಗಿ ಕಂಡುಬರುತ್ತದೆ. ಅಸ್ತಿತ್ವದ ಬೇರುಗಳನ್ನು ಭದ್ರವಾಗಿ ಶೋಧಿಸಲಾರದ ಮೂರನೇ ತಲೆಮಾರು, ಅವರ ಮಕ್ಕಳ ಜೀವನ, ಹಳ್ಳಿಗೆ ಎಂದೂ ಮರಳಲಾಗದ, ಕಾಂಕ್ರೀಟ್ ಕಾಡುಗಳಲ್ಲಿ ಕಣ್ಮರೆಯಾಗುವ ಪಾತ್ರಗಳು. `ಭೂಮಿ ಹುಣ್ಣಿಮೆ' ಈ `ವೈರುದ್ಧ್ಯ'ವನ್ನು ನಿಭಾಯಿಸಲು, ಪುನಾರಚಿಸಲು ಹೆಣಗುವ ಕೃತಿಯಾಗಿದೆ. ಇಲ್ಲಿ ಕೃತಿಯ ಒಳಗೆ ವ್ಯಕ್ತಿಗಳ ಬದುಕು ದೇಸೀಯತೆಗೆ ಮುಖಾಮುಖಿಗೊಳ್ಳುವುದು ಮೂರು ನೆಲೆಗಳಲ್ಲಿ: ಜಾಗತೀಕರಣದ ಸಂದರ್ಭದಲ್ಲಿ ಕೃಷಿಯನ್ನು ನಂಬಿ ಹಳ್ಳಿಯ ಕುಟುಂಬದ ಮನೆಯಲ್ಲಿ ಉಳಿದುಕೊಂಡು `ಮೂಲ'ವನ್ನು ದಕ್ಕಿಸಿಕೊಳ್ಳಲು ಹೆಣಗುವ ಶಿವಮೂತರ್ಿ, ಸೊಸೆ ರತ್ನ; ಹಳ್ಳಿಯ ಬಗ್ಗೆ ತೀವ್ರವಾದ ತುಡಿತವಿದ್ದರೂ ಉದ್ಯೋಗದ ನಿಮಿತ್ತ ಕನರ್ಾಟಕದ ಬೇರೆಬೇರೆ ಕಡೆಗಳಲ್ಲಿ ಇದ್ದು ಜಾಗತೀಕರಣದ ಸ್ಪಧರ್ೆಯಲ್ಲಿ ಸಫಲರಾಗುವಂತೆ ಮಕ್ಕಳಿಬ್ಬರನ್ನು ಬೆಳೆಸಿ; ಸ್ವತಂತ್ರ ನೆಲೆ ಕಲ್ಪಿಸಿ `ಮರಳಿ ಮಣ್ಣಿಗೆ' ಬರಲು ತವಕಿಸುವ ಶಂಕರ ಆತನ ಪತ್ನಿ ಹೊನ್ನಮ್ಮ; ಹಳ್ಳಿಯ ಜಮೀನಿನಿಂದ ಬರುವ ವರಮಾನದ ಮೇಲಷ್ಟೇ ಕಣ್ಣಿಟ್ಟು ಪಟ್ಟಣದ ಸಹಜ ಸ್ವಾರ್ಥವನ್ನೆಲ್ಲ ಮೈಗೂಡಿಸಿಕೊಂಡಂತೆ ಕಾಣುವ ಜಯಪ್ಪ ಮತ್ತು ಚಂದ್ರಮ್ಮ, ಇವರ ನೇರ ವರ್ತನೆ- ನಿಲುವು, ಸ್ಮೃತಿಗಳು ಒಂದೇ ದಿನದಲ್ಲೇ ಇದ್ದರೂ ಇದೊಂದು ಸೂತ್ರಬದ್ಧ ಕಥನ. ಕೃತಿಯೊಳಗಿನ ಮುಖ್ಯ ಪಾತ್ರಗಳನ್ನು ನೆನಪುಗಳಲ್ಲಿ ಹೆಕ್ಕಿ ಓದುಗರಿಗೆ ನೀಡುವ ಹಳ್ಳಿಗರಾದ ಕುಬೀರ, ರಮೇಶ, ಕಮಲಕ್ಕ ಇವರು ಸಂಬಂಧಗಳ ಇಬ್ಬಗೆಯ ದರ್ಶನ ರೂಪಿಸುವುದು ಇಲ್ಲಿ ಮನಸೆಳೆಯುವ ಅಂಶ.

ವ್ಯಕ್ತಿ ಮತ್ತು ಪ್ರಕೃತಿಯ ಪ್ರಭಾವೀ ಅಂತರ್ರೂಪಣೆಯನ್ನು ಕಟ್ಟುವ ಹಾಗೂ ಸಂಬಂಧದ ಸ್ವಾರ್ಥ ಲಾಲಸೆಗಳನ್ನು ಬಯಲುಮಾಡುವ ಹಿನ್ನೆಲೆಯಿಂದ ಮಾತ್ರವಲ್ಲ, ರಕ್ತ ಸಂಬಂಧಗಳ ಒಳಗೆ ಕೂಡ `ಅನ್ಯ'ರನ್ನು ಸೃಷ್ಟಿಸುತ್ತಾ ಅವರೊಡನೆ ಮುಖಾಮುಖಿಗೊಳ್ಳುವ ತಲ್ಲಣದಿಂದಲೇ ತನ್ನೆಲ್ಲಾ ಶಕ್ತಿಯನ್ನು ವ್ಯರ್ಥಗೊಳಿಸುವಂತೆ ಬಾಳುವ ವ್ಯಕ್ತಿಗಳ ಜೀವದರ್ಶನದ ನೆಲೆಯಿಂದ `ಭೂಮಿ ಹುಣ್ಣಿಮೆ' ಒಂದು ಧ್ವನಿಪೂರ್ಣ ರಚನೆಯಾಗಿದೆ. ಕಾದಂಬರಿಯು ಅದರ ಶೀಷರ್ಿಕೆ ವಸ್ತು ಮತ್ತು ಪಾತ್ರಗಳ ಪ್ರಸ್ತುತತೆಯಲ್ಲಿಯೇ ಮೂರು ತಲೆಮಾರಿನ ವ್ಯಕ್ತಿ ಸಂಬಂಧದ ಒಂದು `ಚಲನೆ'ಯನ್ನು, ಚಲನೆಯ ದಿಕ್ಕನ್ನು ಇಲ್ಲಿ ಗುರುತಿಸಬಹುದು. ಕೃತಿಯ ಆಕೃತಿ, ಚಾರಿತ್ರಿಕ ಪ್ರಾಮಾಣಿಕತೆ ಮತ್ತು ಭವಿಷ್ಯವಾದೀ ಸೂಚನಾತ್ಮಕತೆಯಿಂದ ಈ ಪಠ್ಯದ ಜೊತೆಗೆ ಒಂದು ಅರ್ಥಪೂರ್ಣವಾದ ಸಂವಾದ ನಡೆಸುವುದು ಸಾಧ್ಯವಾಗುತ್ತದೆ.
........................
- ಡಾ. ಕವಿತಾ ರೈ
.........................

ನೆರಳು (ಕಾದಂಬರಿ)

ನಿಷ್ಕಳಂಕ ಪ್ರೀತಿಯ ಹುಡುಕಾಟ

`ನೆರಳು' ಲಕ್ಷ್ಮಣ ಕೊಡಸೆಯವರ ಮೂರನೆೆಯ ಕಾದಂಬರಿ. ಬೇರೆ ಬೇರೆ ಊರುಗಳಲ್ಲಿ ವಾಸವಾಗಿರುವ ಮೂರು ಸಂಬಂಧಿಕ ಕುಟುಂಬಗಳಲ್ಲಿ ಮೂರು ದಿನಗಳಲ್ಲಿ ನಡೆಯುವ ಘಟನಾವಳಿಗಳ ಸುತ್ತ ಈ ಕಾದಂಬರಿ ರಚಿತವಾಗಿದೆ. 

ಚಂದ್ರಶೇಖರ, ಸೋಮಶೇಖರ ಹಾಗೂ ರೇಣುಕಾಂಬ ಅನ್ನಪೂರ್ಣಮ್ಮನವರ ಮಕ್ಕಳು. ಚಂದ್ರಶೇಖರ ಸಕರ್ಾರಿ ನೌಕರಿಯಿಂದ ನಿವೃತ್ತನಾಗಿದ್ದರೆ, ಉಳಿದಿಬ್ಬರು ನಡುವಯಸ್ಸಿನವರಾಗಿದ್ದು, ಇವರ ಮಕ್ಕಳೆಲ್ಲಾ ಶಿಕ್ಷಣ ಮುಗಿಸಿ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದಾರೆ. ರೇಣುಕಾಂಬ ಕರಿಯಪ್ಪ ಎಂಬ ಮೇಷ್ಟರನ್ನು ಪ್ರೀತಿಸಿ ಅಂತಜರ್ಾತಿ ವಿವಾಹವಾಗಿದ್ದಾಳೆ. ಗಂಡನನ್ನು ಕಳೆದುಕೊಂಡಿರುವ ಅನ್ನಪೂರ್ಣಮ್ಮ ಏಕಾಂಗಿ. ಬದುಕಿನ ಕéಷ್ಟ ಸುಖಗಳಲ್ಲಿ ಈ ಕುಟುಂಬಗಳು ಪರಸ್ಪರ ಹೇಗೆ ಸ್ಪಂದಿಸುತ್ತವೆ, ಪ್ರಮುಖವಾಗಿ ಅನ್ನಪೂರ್ಣಮ್ಮನನ್ನು ಆಕೆಯ ಮಕ್ಕಳು - ಸೊಸೆಯಂದಿರು ಹಾಗೂ ಅಳಿಯ ಹೇಗೆ ನಡೆಸಿಕೊಳ್ಳುತ್ತಾರೆ ಎಂಬುದು ಕಾದಂಬರಿಯ ಪ್ರಧಾನ ಕಾಳಜಿಯಾಗಿದೆ.

ಕುಟುಂಬಗಳ ವಿಘಟನೆಗೆ ಹಾಗೂ ಮನುಷ್ಯ ಸಂಬಂಧಗಳಲ್ಲಿನ ಬಿರುಕುಗಳಿಗೆ ಜಾಗತೀಕರಣ, ಆಧುನಿಕತೆಯ ಕಾರಣಗಳನ್ನು ನೀಡಿ ಸಮಸ್ಯೆಯನ್ನು ತೀರ ಸರಳವಾಗಿ ನೋಡುವ ದೃಷ್ಟಿಕೋನ ಅನೇಕ ಲೇಖಕರಲ್ಲಿ ಸಾಮಾನ್ಯವಾಗಿದೆ. ಆದರೆ ಇಂತಹ ವಿಘಟನೆ ಹಾಗೂ ಬಿರುಕುಗಳಿಗೆ ಮನುಷ್ಯರಲ್ಲಿಯೇ ಇರುವ ಸಣ್ಣತನ, ಅಹಂಕಾರ, ಅಧಿಕಾರದಾಹ ಹಾಗೂ ಸ್ವಾರ್ಥಗಳು ಹಿನ್ನೆಲೆಗೆ ಸರಿಯುತ್ತವೆ. ಈ ಹಿನ್ನೆಲೆಯಲ್ಲಿ `ನೆರಳು' ವಿಶೇಷ ಗಮನ ಸೆಳೆಯುತ್ತದೆ. 

ಇಳಿವಯಸ್ಸಿನಲ್ಲಿರುವ ಅನ್ನಪೂರ್ಣಮ್ಮ ತನ್ನ ಗಂಡುಮಕ್ಕಳ ಮತ್ತು ಸೊಸೆಯಂದಿರಿಂದ ಅವಕೃಪೆಗೆ ಪಾತ್ರರಾಗಲು ಇವರೆಲ್ಲರ ಸಣ್ಣತನ ಮತ್ತು ಸ್ವಾರ್ಥಗಳು ಮಾತ್ರ ಕಾರಣವಾಗುವುದಿಲ್ಲ. ಮನೆಗೆಲಸದವರ ಮೇಲೆ ಅಧಿಕಾರ ಚಲಾಯಿಸುವ, ಪರಸ್ಪರರ ಮೇಲೆ ಚಾಡಿ ಹೇಳುವ, ಅಗತ್ಯ ಸಂದರ್ಭಗಳಲ್ಲಿ ಮಕ್ಕಳು ಸೊಸೆಯಂದಿರ ನೆರವಿಗೆ ನಿಲ್ಲದ ಅನ್ನಪೂರ್ಣಮ್ಮನವರ ವ್ಯಕ್ತಿತ್ವವೂ ಕಾರಣವಾಗುತ್ತದೆ. ಉದ್ಯೋಗಸ್ಥ, ಅನುಕೂಲಸ್ಥ ಮಕ್ಕಳು ತಾಯಿಯನ್ನೊಂದು ಹೊರೆ ಎಂದು ಭಾವಿಸುವಾಗ ಈ ಪಾತ್ರಗಳ ಬಗ್ಗೆ ಮೂಡುವ ತಿರಸ್ಕಾರದ ಭಾವ ಅನ್ನಪೂರ್ಣಮ್ಮನವರ ಪರವಾದ ಅನುಕಂಪವಾಗಿ ಪರಿವತರ್ಿತವಾಗುವುದಿಲ್ಲ. ಲೇಖಕ ಪಾತ್ರ ನಿಮರ್ಾಣದಲ್ಲಿ ಪಡೆದ ಯಶಸ್ಸನ್ನು ಇದು ತೋರುತ್ತದೆ. 

ಕಾದಂಬರಿಯ ಎಲ್ಲ ಪಾತ್ರಗಳೂ ಜೀವಂತವಾಗಿ ಮೂಡಿಬಂದಿವೆ. ಭಾವಾವೇಶವನ್ನು ಮೂಡಿಸುವಂತಹ ವಿಪುಲ ಸನ್ನಿವೇಶಗಳಿದ್ದರೂ ಅವುಗಳನ್ನೆಲ್ಲ ತಣ್ಣಗೆ ನಿರೂಪಿಸುವ ಲೇಖಕ ಓದುಗನನ್ನು ವಶೀಕರಿಸಿಕೊಳ್ಳಲು ಅದನ್ನು ದುರ್ಬಳಕೆ ಮಾಡಿಕೊಂಡಿಲ್ಲ. ಕಾದಂಬರಿಯ ಅಂತ್ಯ ಓದುಗನಿಗೆ ನಿರೀಕ್ಷಿತವೆನಿಸಿದರೆ ಅಚ್ಚರಿಯಿಲ್ಲ. ಶೌಚ-ಉಪಹಾರ-ಕಾಫಿ ಸೇವನೆಯ ಪುನರಾವರ್ತನೆಗಳು ಕಾದಂಬರಿಯನ್ನು ಕೊಂಚ ಭಾರವಾಗಿಸಿದೆ.

`ನೆರಳು' ಗೋಳಿನ ಕಾದಂಬರಿಯೇನೂ ಅಲ್ಲ. ನಿಷ್ಕಳಂಕ ಪ್ರೀತಿ ತೋರುವ ಕರಿಯಪ್ಪ, ರೇಣುಕಾಂಬ, ಸಣ್ಣನಾಯ್ಕರಂತಹ ಪಾತ್ರಗಳೂ ಇಲ್ಲಿ ಹೃದಯಸ್ಪಶರ್ಿಯಾಗಿ ಒಡಮೂಡಿವೆ. ಒಂದರ್ಥದಲ್ಲಿ ಈ ಕಾದಂಬರಿ ನಿಷ್ಕಳಂಕ ಪ್ರೀತಿಯ ಹುಡುಕಾಟವೇ ಆಗಿದೆ. 
ಮೂರು ದಿನದ ಘಟನಾವಳಿಗಳು ಕುತೂಹಲಕರವಾಗಿ ಬಿಚ್ಚಿಕೊಳ್ಳುತ್ತಾ ಸಾಗುವ ಈ ಪುಟ್ಟ ಕಾದಂಬರಿಯನ್ನು ಒಂದೇ ಗುಕ್ಕಿನಲ್ಲಿ ಓದಿ ಬಿಡಬಹುದು.
....................................
- ಸರ್ಜಾಶಂಕರ ಹರಳಿಮಠ 
ಶಿವಮೊಗ್ಗ
...................................
`ಪಾಡು' ಕಾದಂಬರಿ

ಜನಜೀವನವನ್ನು ಉತ್ತಮ ಪಡಿಸಬೇಕೆಂಬ ಉದ್ದೇಶ ಇಟ್ಟುಕೊಂಡು ನಡೆಯುವ ಹೋರಾಟಗಳು ಸಾಹಿತ್ಯ ರಚನೆಯ ಮೇಲೆ ಗಂಭೀರ ಪ್ರಭಾವ ಬೀರುವುದು ಸಹಜ. ಬದುಕನ್ನು ತೀವ್ರವಾಗಿ ಗಮನಿಸುವ ಸಾಹಿತಿ ಅದನ್ನು ಕಲಾತ್ಮಕವಾಗಿ ಮೂಡಿಸಲು ಹವಣಿಸುತ್ತಾನೆ. ಕಳೆದ ಇಪ್ಪತ್ತನೆಯ ಶತಮಾನದ ಎಪ್ಪತ್ತು ಮತ್ತು ಎಂಬತ್ತರ ದಶಕಗಳು ಕನ್ನಡನಾಡಿನ ಚರಿತ್ರೆಯಲ್ಲಿ ಬಹಳ ಮುಖ್ಯವಾದ ಕಾಲಮಾನಗಳು. ಈ ಅವಧಿಯಲ್ಲಿ ರೈತ ಚಳವಳಿ, ದಲಿತ ಚಳವಳಿ, ವಿಚಾರಾತ್ಮಕ ಆಂದೋಲನ, ಜಾತಿವಿನಾಶ ಚಳವಳಿ, ವನಿತಾ ವಿಮೋಚನೆ ಘಟಿಸಿದವು. ಹಳ್ಳಿಯ ಬಾಳಿನಲ್ಲಿ ಹಿಂದೆ ಇರದಿದ್ದ ಹೊಸ ಹುರುಪು, ಚಪಲ, ಎಚ್ಚರ ಕಾಣಿಸಿಕೊಂಡಿದ್ದು ನಿಜ. ಆದರೆ ಅದು ಪೋಷಕಾತ್ಮಕವಾಗಿ ಉಳಿಯಿತೆ? ಎಂದು ಪ್ರಶ್ನಿಸಿಕೊಂಡರೆ ಸಿಗಬಹುದಾದ ಉತ್ತರ ಸಕಾರಾತ್ಮಕವಾಗಿಲ್ಲದಿರಬಹುದು. ಆದಾಗ್ಯೂ ಇವು ಸಾಮಾನ್ಯ ಬದುಕು ಮತ್ತು ಸಕರ್ಾರದ ಮೇಲೆ ಸಾಕಷ್ಟು ಪರಿಣಾಮ ಉಂಟು ಮಾಡಿದ್ದನ್ನು ನಿರಾಕರಿಸಲಾಗುವುದಿಲ್ಲ. ಏಕೆಂದರೆ ಒಂದು ಸಕರ್ಾರ (ಗುಂಡೂರಾವ್) ಉರುಳಿ ಇನ್ನೊಂದು ಸಕರ್ಾರ ಗದ್ದುಗೆಗೆ ಏರಿತು. ಇಷ್ಟಾದರೂ ಸಮಾಜ ಎಮ್ಮೆಯ ಹಾಗೆ ಬಗ್ಗಡದಲ್ಲಿ ಬಿದ್ದು ಹೊರಳಾಡುವುದನ್ನು ಇಷ್ಟಪಡುವಂತೆ ಕಂಡು ಬರುತ್ತದೆ.

ಇಂಥ ತಾತ್ವಿಕಾಂಶಗಳು ಹೊರಡಿಸಿದ ಪರಿಣಾಮಗಳು ಕನ್ನಡ ಸಾಹಿತ್ಯದಲ್ಲಿ ಅಷ್ಟಾಗಿ ಮೈಪಡೆಯಲಿಲ್ಲ. ಇಲ್ಲಿನ ಕಥಾ ಸಾಹಿತ್ಯದಲ್ಲಿ ಕತೆ ಮತ್ತು ಕಾದಂಬರಿ ಪ್ರಕಾರಗಳಲ್ಲಿ (ನನ್ನ ಅಧ್ಯಯನದ ಮಿತಿಯಲ್ಲಿ ಹೇಳುವುದಾದರೆ) ಹಳ್ಳಿ ಮತ್ತು ಪಟ್ಟಣ ಅಥವಾ ನಗರಗಳಲ್ಲಿ ಮುಖಾಮುಖಿ ವಿಶೇಷವಾಗಿ ನಡೆದಿಲ್ಲ. ಇವುಗಳಲ್ಲಿ ಯಾವುದಾದರೂ ಒಂದನ್ನು ಕುರಿತು ಕತೆಗಳು ಅಥವಾ ಕಾದಂಬರಿಗಳು ಹುಟ್ಟಿಕೊಂಡಿವೆ.

ಮೇಲಿನ ಕೆಲವು ಅಂಶಗಳು ಲಕ್ಷ್ಮಣ ಕೊಡಸೆ ಅವರ `ಪಾಡು' ಕಾದಂಬರಿಯಲ್ಲಿ ತೆರೆದುಕೊಂಡಿರುವುದನ್ನು ಕಾಣಬಹುದು. ಈ ಕೃತಿಯಲ್ಲಿ ಒಂದೆರಡು ಕುಟುಂಬಗಳು ಅಂತರಜಾತಿ ಮದುವೆ ಮಾಡಿಕೊಂಡು ಸಾಕಷ್ಟು ಕಾಲ - ಎರಡು ಮೂರು ದಶಕಗಳು - ಸಂಸಾರ ನಡೆಸಿವೆ. ಕನ್ನಡ ಸಾಹಿತಿಗಳಲ್ಲಿ ಕೆಲವರು - ಶಿವರಾಮ ಕಾರಂತ, ಅನಂತಮೂತರ್ಿ, ಪೂರ್ಣಚಂದ್ರ ತೇಜಸ್ವಿ - ವಿಜಾತಿ ವಿವಾಹವಾಗಿ ಬಾಳಿ ಬದುಕಿದವರು. ಬೇರೆ ಬೇರೆ ಜಾತಿಯವರು ಕಲ್ಯಾಣವಾಗಿ ಬಾಳಿದವರು ಎಂಬುದನ್ನು ತಮ್ಮ ಕಥಾ ಸಾಹಿತ್ಯದಲ್ಲಿ ಚಿತ್ರಿಸಿಲ್ಲ ಎನಿಸುತ್ತದೆ. ಈ ದೃಷ್ಟಿಯಿಂದ ಸಾಂಸ್ಕೃತಿಕವಾಗಿ ಲಕ್ಷ್ಮಣ ಕೊಡಸೆ ಗಮನಾರ್ಹವಾಗಿ ಕಾಣುತ್ತಾರೆ. ಇವರು ಕುಲ ಬಿಟ್ಟು ಬೇರೆ ಕುಲದಲ್ಲಿ ಲಗ್ನವಾದವರು (ಕೆಲವರು ತುಂಟತನದಿಂದ ಹೇಳಬಹುದು: ಹೆಣ್ಣು ಅನ್ನುವುದು ಒಂದು ಜಾತಿ; ಗಂಡು ಅನ್ನುವುದು ಇನ್ನೊಂದು ಜಾತಿ. ಇದೇ ಅಂತರ್ಜಾತಿ ವಿವಾಹ ಅಲ್ಲವೆ? ಎಂದು. ಇದು ಸಿನಿಕತನದ ಮಾತು ಅಷ್ಟೆ).

ಕೊಡಸೆ ಅವರು `ಪಾಡು'ದಲ್ಲಿ ಅಂತರ್ಜಾತಿ ವಿವಾಹವಾಗಿ ಸುಮಾರು ಮೂವತ್ತು ವರ್ಷಗಳಷ್ಟು ದೀರ್ಘಕಾಲ ಬದುಕಿರುವ ಹಾಲಪ್ಪ ಮತ್ತು ಪ್ರಮೀಳಾರ ಜೋಡಿ ಜೀವನವನ್ನು ಕೊಟ್ಟಿದ್ದಾರೆ. ಇವರ ದಾಂಪತ್ಯದಲ್ಲಿ ಸಣ್ಣಪುಟ್ಟ ಮಾತುಕತೆಗಳು ಮತ್ತು ತಿಕ್ಕಾಟಗಳು ಆಗುತ್ತವೆ. ಅದನ್ನೇ ದೊಡ್ಡದು ಮಾಡಿ ಜೀವನವನ್ನು ರಂಪವಾಗಿಸುವ ಸ್ವಭಾವ ಇಬ್ಬರಲ್ಲೂ ಗೋಚರಿಸುವುದಿಲ್ಲ. ಆದರೂ ಪ್ರಮೀಳೆಯದು ಜೋರು ಬಾಯಿ.

`ಏನಯ್ಯ ಮಾಡ್ತೀಯ ನೀನು? ಈಗ ಯಾರನ್ನು ಕಟ್ಟಿಕೊಂಡು ಹೋದರೂ ನನಗೆ ಬೇಜಾರಿಲ್ಲ.. ಮಹಾರಾಜನ ಹಾಗೆ ಹೋಗು' (ಅಧ್ಯಾಯ 2. ಪು. 1).
`ಯಾವನು ಇಂಥ ವ್ಯವಸ್ಥೆಯನ್ನು ಮಾಡಿದ್ದಾನೋ.. ಮನೆ ಕೆಲಸವನ್ನೆಲ್ಲ ಹೆಂಗಸರೇ ಮಾಡಬೇಕು, ಗಂಡಸು ಮಾತ್ರ ದಬರ್ಾರು ಮಾಡಬೇಕು ಅಂತ ಹೇಳಿದವನು ಸಿಕ್ಕಿದರೆ ಕೊಚ್ಚಿ ಹಾಕಬೇಕು. ನಾವು ಇಲ್ಲಿ ಮನೆಯೊಳಗೆ ಪ್ರತಿಯೊಂದಕ್ಕೂ ಸಾಯಬೇಕು, ಹೊರಗಡೆಯೂ ದುಡಿಯಬೇಕು' (ಅಧ್ಯಾಯ. 2)
`ಏನು ಖಮರ್ಾನೋ, ಸೀರೆ ಗಂಟು ಹಿಡ್ಕಂಡು ಓಡಿ ಬಂದುದಕ್ಕೆ ಸಂಸಾರದಲ್ಲಿ ಉಳ್ಕೋಬೇಕು' (ಅಧ್ಯಾಯ 9)

ಹಾಲಪ್ಪನ ಮಡದಿ ಪ್ರಮೀಳೆಯ ಮೇಲಿನ ಸ್ವಗತಗಳಲ್ಲಿ ಹೆಣ್ಣಿನ ಬವಣೆಗಳು ಚೆನ್ನಾಗಿ ಪ್ರಕಟವಾಗಿವೆ. ಮಹಿಳಾ ಚಳವಳಿಯ ಘಾಟು ಮತ್ತು ಬಿಸಿಯನ್ನು ಈ ಮಾತುಗಳಲ್ಲಿ ಕಾಣಬಹುದು. ಸಂಸಾರದಿಂದ ಬಿಡಿಸಿಕೊಂಡು ಹೊರಗೆ ದುಡಿದು ಸಂಪಾದನೆ ಮಾಡುತ್ತಿದ್ದೇನೆಂದು ಹೆಮ್ಮೆಪಡುವ ಹೆಂಗಸು, ಸಂಸಾರಕ್ಕೆ ಸಿಕ್ಕಿಕೊಂಡು ಅನುಭವಿಸುವ ಬೇಗುದಿಯ ಸಂಕ್ರಮಣ ಸ್ಥಿತಿಯನ್ನು ಇದು ಸೂಚಿಸುತ್ತದೆ.


ಆದರೆ ಹೆಡ್ಮಾಸ್ಟರ್ ಹಾಲಪ್ಪನ ಸ್ಥಿತಿಯೇ ಬೇರೆ: `ಆಡಿದರೂ ಕಷ್ಟ, ಆಡದಿದ್ದರೂ ಕಷ್ಟವಾಯ್ತಲ್ಲ' (ಅಧ್ಯಾಯ. 2) ಎಂಬ ಪೀಕಲಾಟ ಅವನದು. ಆಗಾಗ್ಗೆ ಅವಳ ಧ್ವನಿಯಲ್ಲಿನ `ಸಹಜತೆಗೆ ಬೆರಗಾದ ಹಾಲಪ್ಪನಿಗೆ ಕೆಲವೇ ನಿಮಿಷಗಳ ಮೊದಲು ತನ್ನನ್ನು ಮರ್ಮಭೇದಕ ಮಾತುಗಳಿಂದ ಚುಚ್ಚಿದವಳು ಇವಳೇನಾ' ಎನ್ನಿಸುತ್ತದೆ. ಕುಟುಂಬಕ್ಕೆ ಪ್ರಮೀಳೆಯಿಂದ ಆಗಿರುವ ನೆರವು ಮತ್ತು ಕೊಡುಗೆಯನ್ನು ಹಾಲಪ್ಪ ನೆನಪಿಸಿಕೊಳ್ಳುತ್ತಾನೆ. ಹೀಗೆ ಹೇಗೂ ಸಂಸಾರ ಸಾಗುತ್ತಿದ್ದರೂ ಊರಿನ ತೋಟದ ಬದಿಯಲ್ಲಿ ಒಂದು ರೂಮನ್ನು ಕಟ್ಟಲು ಹಾಲಪ್ಪ ವ್ಯವಸ್ಥೆ ಮಾಡುವುದನ್ನು ನೋಡಿದರೆ ಅವನ ಮುಂದಿನ ಗತಿ ಏನೆಂದು ಅರಿವಾಗಬಹುದು.

ಲೇಖಕ ಇಲ್ಲಿನ ಎಲ್ಲ ಪಾತ್ರಗಳ ಬಗೆಗೆ ಸಮತೋಲನ ಮತ್ತು ಸಮದೂರ ಕಾಯ್ದುಕೊಂಡಿದ್ದಾರೆ ಎನ್ನಬೇಕು. ಈ ಕಾದಂಬರಿ ಹೆಣ್ಣು ಮತ್ತು ಗಂಡಿನ ಸಂಬಂಧದ ಜೊತೆ ಹೆಣ್ಣು ಹೊರಗೆ-ಒಳಗೆ ದುಡಿಯುವ ಪರಿಸ್ಥಿತಿಯನ್ನು ಕುರಿತು ಶೋಧಿಸಹೊರಟಿದೆ ಎನ್ನಿಸುತ್ತದೆ.

'ಪಾಡು' ಕಾದಂಬರಿಯ ಇನ್ನೊಂದು ಅಂತರ್ಜಾತಿ ಮದುವೆ ಆಗಿ ಸಂಸಾರ ನಡೆಸುತ್ತಿರುವ ಸಂಬಂಧ ಕರಿಯಪ್ಪ ಮತ್ತು ರೇಣುಕಾಂಬ ಅವರದು. ಇವರಲ್ಲಿ ಅಂಥ ತಕರಾರುಗಳು ಗೋಚರಿಸುವುದಿಲ್ಲ.

ಈ ಕಾದಂಬರಿಯ ಕಾಲಗತಿಯಲ್ಲಿ ಕ್ರಮದಿಂದ ಗಮನಿಸಿದರೆ ನೋಡಬಹುದಾದ ಮೂರನೆಯ ಸಂಸಾರ ಸಣ್ಣನಾಯ್ಕ ಮತ್ತು ಗಂಗಮ್ಮರದು. ಗ್ರಾಮೀಣ ಪರಿಸರದಲ್ಲಿ ತಮ್ಮ ಹೊಲ ಮನೆ ಮಕ್ಕಳು ಮರಿ ಎಂದು ಬದುಕುತ್ತಿರುವ ಕುಟುಂಬ ಇದು. ಈ ಮೂರು ಸಂಸಾರಗಳು ಚಿತ್ರಿತವಾಗಿರುವ ರೀತಿಯನ್ನು ನೋಡಿದರೆ, ಕಾದಂಬರಿಕಾರನಿಗೆ ಎಲ್ಲೋ ಸುಪ್ತವಾಗಿ, ಈ ಸಂಸಾರದ ಬಗೆಗೆ ಮೆಚ್ಚಿಕೆ ಅಥವಾ ಒಲವು ಇರುವಂತೆ ಭಾಸವಾಗುವುದು. ಆದರೆ ಎಲ್ಲ ಕಡೆ ನಿಲರ್ಿಪ್ತವಾಗಿ ಇರುವ ನಿರೂಪಕ ಸಮಚಿತ್ತತೆಯನ್ನು ಕಾಪಾಡಿಕೊಂಡಿದ್ದರೂ ಅವನನ್ನೂ ದಾಟಿ ಕಥನ ಕ್ರಮ ಹಾಗೆ ಅದನ್ನು ಸೂಚಿಸುವಂತೆ ಕಾಣುತ್ತಿದೆ. ಇದರ ಫಲಿತ ಏನು? ಎಂದು ಓದುಗರೇ ತಮ್ಮ ಯಥಾಶಕ್ತಿ ಗ್ರಹಿಸಬೇಕಾಗುವುದು.

ಒಂದು ಗದಗುಡುವ ವಸ್ತುವನ್ನು - ಅಂತರಜಾತಿ ಮದುವೆಯಿಂದ ಜಾತಿಯನ್ನು ಮೀರುವಿಕೆ ಅಥವಾ ಅಳಿಸುವಿಕೆಯ ಆಶಯವನ್ನು ಇಟ್ಟುಕೊಂಡು ಅದರ ಮಿತಿಯಲ್ಲಿ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ ಕೊಡಸೆ. ಆದರೆ ಅದನ್ನು ಇನ್ನೂ ವಿವಿಧ ಮಗ್ಗುಲುಗಳಿಂದ ಸಮೀಕ್ಷಿಸಬಹುದಿತ್ತು. ಇಡೀ ಒಂದು ಸಂಸ್ಕೃತಿಯ ಅರೆಕೊರೆಗಳನ್ನು ಅನಾವರಣಗೊಳಿಸಿ, ಅದು ಏರಬೇಕಾದ ಸ್ತರಗಳನ್ನು ಧ್ವನಿಸಲು ಅವಕಾಶ ಒದಗಿದುದನ್ನು ಕೊಡಸೆ ಸರಿಸಿದ್ದಾರೆನ್ನಿಸುತ್ತದೆ. ವಾಸ್ತವತಾದೃಷ್ಟಿಗೆ ಅಂಟಿಕೊಂಡೇ ಇಲ್ಲ, ಇದ್ದ ಶಕ್ತಿಯನ್ನು ತೊಡಗಿಸಲು ಸಂಕೋಚಪಟ್ಟೋ ಈ ಕೃತಿಗೆ ಸಿಗಬಹುದಾದ ಎತ್ತರ ಬಿತ್ತರಗಳನ್ನು ಕಳೆದುಕೊಂಡಿದ್ದಾರೆ ಲಕ್ಷ್ಮಣ ಕೊಡಸೆ ಅವರು. ಒಂದು ಸಂಗತಿಯನ್ನು ಎತ್ತಿಕೊಂಡರೆ ಎಷ್ಟೊಂದು ಆಯಾಮಗಳಿಂದ ಕಾಣಿಸುತ್ತಾರೆ ದೊಸ್ತೊವ್ಸ್ಕಿ, ಟಾಲ್ಸ್ಟಾಯ್, ಕುವೆಂಪು ಎಂಬುದನ್ನು ಗಮನಿಸುವುದು ಒಳ್ಳೆಯದು. ಅದಕ್ಕೆ ವ್ಯಾಪಕವಾದ ಸಿದ್ಧತೆ ಮತ್ತು ಕ್ರಾಂತದೃಷ್ಟಿಯ ಅಗತ್ಯವಿದೆ.

`ಪಾಡು' ಕಾದಂಬರಿಯ ಇನ್ನೊಂದು ಪ್ರಮುಖ ಆಶಯ ಮೌಢ್ಯದ ವಿರುದ್ಧ ಹೋರಾಡುವುದು ಅಥವಾ ಮೂಢನಂಬಿಕೆಯನ್ನು ನಿವಾರಿಸುವುದು. ಹುಚ್ಚಪ್ಪನ ಮನೆಯ ಎಮ್ಮೆ ಕೆಚ್ಚಲಿಗೆ ಕೈ ಹಾಕಿದರೆ ಒದೆಯುತ್ತದೆ. ಇದನ್ನು ಹೋಗಲಾಡಿಸಲು ಅವನು ಮೈಮೇಲೆ ದೇವರು ಬರುವ ನೇಮಯ್ಯನ ಹತ್ತಿರ ಹೋಗುತ್ತಾನೆ. ನೇಮಯ್ಯ ನಿಂಬೆ ಹಣ್ಣುಗಳನ್ನು ಮಂತ್ರಿಸಿ ಕೊಟ್ಟು `ಕೊಟ್ಟಿಗೆ ಹೊಸಲು ಮೇಲೆ, ಎಲ್ಲ ಜಾನುವಾರುಗಳು ಒಳಗೆ ಬಂದ ಮೇಲೆ ಕತ್ತರಿಸಿ ಉತ್ತರಕ್ಕೆ ಹಣಿ' (ಅಧ್ಯಾಯ. 1 ಪು. 2) ಎನ್ನುತ್ತಾನೆ. ನೇಮಯ್ಯನ ಹೆಂಡತಿ ವಸ್ತುಸ್ಥಿತಿ ಸೂಚಿಸುತ್ತಾಳೆ: `ಎಮ್ಮೆ ಮಲೆ ಒಡೆದಿದ್ರೆ ಹಾಲು ಕೊಡಾದಿಲ್ಲ. ಅದಕ್ಕೇನಾದ್ರೂ ಔಷ್ದಿ ಮಾಡಿ' (ಅಧ್ಯಾಯ. 1 ಪು. 4) ಇದು ನಿಜಕ್ಕೂ ಕಲಾವಿದ ಕೊಡಸೆ ಅವರ ಲೇಖನಿಯ ಮಿಂಚು ಮತ್ತು ವಿನ್ಯಾಸ.

ಇದಲ್ಲದೆ `ನೋನಿ ಹಬ್ಬದ' ಸಂದರ್ಭದಲ್ಲಿ ಸಣ್ಣನಾಯ್ಕರು ಅರ್ಚಕನನ್ನು ಧಿಕ್ಕರಿಸುತ್ತಾರೆ. ದೇವಸ್ಥಾನದಲ್ಲಿ ಯಾರಿಗೋ ಕಾಯುತ್ತ ಪೂಜೆ ತಡವಾದುದಕ್ಕೆ ರೋಸಿ ಹೋಗಿ ಅವರು ತಾವು ತಂದಿದ್ದ ಹಣ್ಣು ಕಾಯಿ ತಟ್ಟೆಯನ್ನು ಎತ್ತಿಕೊಂಡು ಹೋಗುವಾಗ ಅವರನ್ನು ತಡೆಯಲು ಪೂಜಾರಿ ಅವರ ಕಾಲಿಗೆ ಬಾಗುತ್ತಾನೆ. ಇದನ್ನು ಬಹಳವಾಗಿ ಜನರು ಆಕ್ಷೇಪಿಸುತ್ತಾರೆ.. (ಅಧ್ಯಾಯ. 4. ಪು. 2)

ಈ ಪ್ರಸಂಗವನ್ನು ಕೊಡಸೆ ಆಕರ್ಷಕವಾಗಿ ಬಿಡಿಸಿದ್ದಾರೆ. ಎರಡೂ ಕಡೆಯವರ ಅವಿವೇಕ, ಕಂದಾಚಾರ, ಅಜ್ಞಾನ ಚಿತ್ರಿಸುವುದರ ಜೊತೆಗೆ ಸಣ್ಣನಾಯ್ಕರು ಮತ್ತು ಅವರ ಮನೆಯವರು ಹಾಗೂ ಸಂಬಂಧಿಗಳ ದಿಗಿಲನ್ನು ಕಾಣಿಸಿದ್ದಾರೆ. ಅಲ್ಲದೆ, ಅವರಿಗೆಲ್ಲ ಹಾಲಪ್ಪ ಧೈರ್ಯ ತುಂಬುತ್ತಾನೆ. `ಅಯ್ಯೋ ಅದರಲ್ಲೇನು? ಇಷ್ಟು ವರ್ಷ ನಾವೆಲ್ಲ ಅವರ ಕಾಲು ಹಿಡೀಲಿಲ್ವ. ಅವನು ಒಂದು ಸಲ ಹಿಡಿದಿದ್ದಾನೆ. ಅಷ್ಟಕ್ಕೂ ಅವನನ್ನು ಇನ್ನೂ ಯಾಕೆ ಉಳಿಸಿಕೊಂಡಿದ್ದೀರಿ? ಏನು ದೇವರೆಲ್ಲಾ ಅವರ ಗುತ್ತಿಗೆನಾ? ಶ್ರದ್ಧೆಯಿಂದ ಯಾವನು ಪೂಜೆ ಮಾಡ್ತಾನೋ ಅವನಿಗೆ ದೇವರು ಒಲೀತಾನೆ ಅಂತ ನಾವೇ ಪಾಠ ಹೇಳ್ತೀವಿ. ಇಲ್ಲಿ, ಈ ಪೂಜಾರಿಗಳಿಗೆ ಹೆದರ್ತೀವಿ. ಏನೂ ಆಗಲ್ಲ, ಅಷ್ಟಕ್ಕೂ ದೇವರು ಇವರ ಮನೆ ಆಳೆ? ನೀವೇನೂ ಅಧೈರ್ಯ ಮಾಡಿಕೊಬೇಡ.' ಅನಂತರ ಕರಿಯಪ್ಪ ಇದೇ ರೀತಿ ಅವರಿಗೆಲ್ಲ ಅಭಯದ ಮಾತು ತಿಳಿಸುತ್ತಾನೆ (ಅಧ್ಯಾಯ. 4. ಪು. 8)

ವಿಚಾರವಾದ ಪರಿಣಾಮಕಾರಿಯಾಗಿ ಬಂದಿದೆ. ಆದರೆ ದೇವರ ಬಗೆಗೆ ಇರುವ ಭಾವನೆಯ ಭಯಕ್ಕೆ ಮೂಲ, ದೇವರು ಹುಟ್ಟಿದ್ದೇ ಭಯದಿಂದ ಎಂದು ಚಿತ್ರಿಸಬೇಕಿತ್ತು.

ಹಳ್ಳಿ ಮತ್ತು ಪಟ್ಟಣ ಅಥವಾ ನಗರದ ಜೀವನ ವರ್ಣನೆಯಲ್ಲಿ ಯುವಜನರ ಗಮನ ನಗರ ಜೀವನದ ಕಡೆಗೆ ಇರುವುದು ಕಾಣುತ್ತದೆ. ದೇಹಶ್ರಮದ ದುಡಿಮೆ ಮಾಡುವುದಕ್ಕಿಂತ ಸಕರ್ಾರಿ ನೌಕರಿಯ ಕಡೆಗೆ ಅವರು ಆಕಷರ್ಿತರಾಗಿದ್ದಾರೆ. ಗ್ರಾಮೀಣ ಬದುಕಿನಲ್ಲಿ ಕಾಂತಿಯುಕ್ತವಾಗಿರುವ ಬಾಂಧವ್ಯ, ಸಾಮಥ್ರ್ಯ ಬಾವುಣಿಕೆ ಸುಂದರವಾಗಿ ಕೃತಿಗೊಂಡಿದೆ.

ಪಾತ್ರ್ರಗಳಾಡುವ ಮಾತುಕತೆ ದಿನನಿತ್ಯದ ಕನ್ನಡ ನುಡಿಯಾಗಿದೆ ಎಂದು ಮೇಲೆ ಅಲ್ಲಲ್ಲೆ ಉಲ್ಲೇಖಿಸಿರುವ ಸಂಭಾಷಣೆಯಿಂದ ತಿಳಿಯುತ್ತದೆ. ಸಂವಾದದ ಭಾಷೆ ಆಯಾ ಪಾತ್ರದ ಸ್ವಭಾವವನ್ನು ಪ್ರಕಟಿಸುವ ಪರಿಯಲ್ಲಿ ಪ್ರಯೋಗವಾಗಿದೆ. ಕಾದಂಬರಿಯ ಶೈಲಿ ಸ್ವಾರಸ್ಯಕರವಾಗಿ ಓದಿಸಿಕೊಳ್ಳುತ್ತದೆ. `ಈಳಿಗೆ ಮಣೆಯಿಂದ ಕೊಯ್ಯುವಂತೆ ಹೇಳಿ', `ನಾಯಿ ಬಾಯಿಗೆ ಕೋಲು ಹೆಟ್ಟುವ ಹಾಗೆ ಹಾರನ್ನು ಬಾರಿಸುತ್ತಾನೆ' - ಇಂಥ ಹೊಸ ಹೋಲಿಕೆಗಳಿವೆ.

ಛತ್ರಿಯನ್ನು ಬಿಚ್ಚಿದರೆ ಹರಡಿಕೊಳ್ಳುತ್ತದೆ. ಆದರೆ ಅದರ ಎಲ್ಲ ತಂತಿಗಳೂ ಅವುಗಳ ಮೇಲಿನ ಮುಚ್ಚು ಬಟ್ಟೆಯೂ ಕೇಂದ್ರಕ್ಕೆ ಕಚ್ಚಿಕೊಂಡಿರುತ್ತವೆ. ಮುಚ್ಚಿದಾಗ ಕೊಡೆಯ ಕಡ್ಡಿಗಳೆಲ್ಲ ಮುಚ್ಚುಬಟ್ಟೆ ಸಮೇತ ಒಂದೆಡೆ ಬಂದು ಸೇರುತ್ತವೆ. ಈ ರೀತಿ ಇದೆ ಈ ಕಾದಂಬರಿಯ ಕಥಾಬಂಧ. ಕೃತಿಯ ಘಟನೆಗಳು ಸ್ವತಂತ್ರವಾಗಿ ನಡೆಯುವಂತೆ ಕಂಡರೂ ಒಂದು ಅಥವಾ ಸಮಗ್ರ ದೃಷ್ಟಿಗೆ ಒಳಪಟ್ಟಿವೆ. `ಪಾಡು' ಅಪರೂಪದ ಕಾದಂಬರಿ.
..................................
-ಪ್ರೊ. ಕೆ. ಎಸ್. ಭಗವಾನ್
.................................

****************************
ಸಂಗ್ರಹ-ವಿನ್ಯಾಸ
ರವಿ ಬಿದನೂರು
9448628447
.................................
...................................